ವರುಣ್​ ಸಿಂಗ್​ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದನ್ನು ಖಚಿತ ಪಡಿಸಿದ ತಂದೆ ಕೆ.ಪಿ.ಸಿಂಗ್​; ಮಗನ ಪರಿಸ್ಥಿತಿ ಬಗ್ಗೆ ಮೌನ

| Updated By: Lakshmi Hegde

Updated on: Dec 09, 2021 | 1:49 PM

ವರುಣ್​ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಅವರು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಯಲ್ಲಿ ಲೈಫ್​ ಸಪೋರ್ಟ್​ ವ್ಯವಸ್ಥೆಯಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವರುಣ್​ ಸಿಂಗ್​ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದನ್ನು ಖಚಿತ ಪಡಿಸಿದ ತಂದೆ ಕೆ.ಪಿ.ಸಿಂಗ್​; ಮಗನ ಪರಿಸ್ಥಿತಿ ಬಗ್ಗೆ ಮೌನ
ವರುಣ್​ ಸಿಂಗ್​
Follow us on

ತಮಿಳುನಾಡಿನ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದ ಏಕೈಕ ಯೋಧ, ಐಎಎಫ್​ ಗ್ರೂಪ್​​ ಕ್ಯಾಪ್ಟನ್​ ವರುಣ್​ ಸಿಂಗ್(Group Captain Varun Singh)​ರನ್ನು ತಮಿಳುನಾಡಿನ ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅವರ  ತಂದೆ ಹೇಳಿದ್ದಾರೆ. ಇಂದು ಪಿಟಿಐ ಜತೆ ಫೋನ್​ನಲ್ಲಿ ಮಾತನಾಡಿದ ವರುಣ್​ ಸಿಂಗ್​ ತಂದೆ, ನಿವೃತ್ತ ಕರ್ನಲ್​ ಕೆ.ಪಿ.ಸಿಂಗ್​, ನಾನೀಗ ವೆಲ್ಲಿಂಗ್ಟನ್​ಗೆ ತಲುಪಿದ್ದೇನೆ. ವರುಣ್​ ಸಿಂಗ್​​ರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ. ಹೇಗಿದ್ದಾರೆ ನಿಮ್ಮ ಮಗ ಎಂದು ಕೇಳಿದ ಪ್ರಶ್ನೆಗೆ, ಆ ಬಗ್ಗೆ ಈಗಲೇ ಏನೂ ಹೇಳಲಾರೆ. ಯಾವುದೂ ಖಚಿತವಿಲ್ಲ ಎನ್ನುತ್ತ ಮೌನವಾಗಿದ್ದಾರೆ.

ಇನ್ನು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆ.ಪಿ.ಸಿಂಗ್​ ಅವರ ಪಕ್ಕದ ಮನೆಯಲ್ಲೇ ವಾಸವಾಗಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್​ ಇಶಾನ್​,  ಘಟನೆ ನಡೆದಾಗ ವರುಣ್​ ಸಿಂಗ್​ ತಂದೆ ಕೆ.ಪಿ.ಸಿಂಗ್​ ಮತ್ತು ಅವರ ಪತ್ನಿ ಇಬ್ಬರೂ ಮುಂಬೈನಲ್ಲಿ, ತಮ್ಮ ಕಿರಿಯ ಮಗ ತನುಜ್​ ಮನೆಯಲ್ಲಿ ಇದ್ದರು. ತನುಜ್​ ಕೂಡ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್​ ಕಮಾಂಡರ್​ ಆಗಿದ್ದಾರೆ. ನಾನು ಫೋನ್​ ಮಾಡಿ ಕೆ.ಪಿ.ಸಿಂಗ್​ ಬಳಿ ಮಾತನಾಡಿದ್ದೇನೆ ಎಂದಿದ್ದಾರೆ. ಹಾಗೇ, ಕೆ.ಪಿ.ಸಿಂಗ್ ಅವರಿಗೆ ತಮ್ಮ ಪುತ್ರ ವರುಣ್ ಸಿಂಗ್​ ಬಗ್ಗೆ ಹೆಮ್ಮೆಯಿದೆ. ಆತ ಫೈಟರ್​ ಮತ್ತು ಈ ಜೀವನ್ಮರಣದ ಹೋರಾಟದಲ್ಲೂ ಗೆದ್ದು ಬರುತ್ತಾನೆ ಎಂಬ ನಂಬಿಕೆಯಿದೆ ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ತೇಜಸ್​ ಏರ್​ಕ್ರಾಫ್ಟ್​ ಟೆಸ್ಟ್​ ಹಾರಾಟ ನಡೆಸುತ್ತಿದ್ದ ವೇಳೆ ಕೂಡ ವರುಣ್​ ಸಿಂಗ್​ ಜೀವಕ್ಕೆ ಅಪಾಯ ಎದುರಾಗಿತ್ತು. ಅಂದು ಬದುಕಿ ಬಂದಿದ್ದ ಅವರ ಶೌರ್ಯಕ್ಕೆ ತಕ್ಕನಾಗಿ ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗಿದೆ.

ಶೇ.45ರಷ್ಟು ಸುಟ್ಟಗಾಯ
ನಿನ್ನೆ ತಮಿಳುನಾಡಿನ ಕೂನೂರು ಬಳಿ ನಡೆದ ದುರ್ಘಟನೆಯಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು 11 ಸೇನಾಧಿಕಾರಿಗಳು ದುರ್ಮರಣ ಹೊಂದಿದ್ದಾರೆ. ಅದರಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಈ ವರುಣ್​ ಸಿಂಗ್​. ಅವರು ಶೇ.45ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಲಾಗಿದೆ.  ಇನ್ನು ವರುಣ್​ ಸಿಂಗ್ ಪರಿಸ್ಥಿತಿ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಅವರು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಯಲ್ಲಿ ಲೈಫ್​ ಸಪೋರ್ಟ್​ ವ್ಯವಸ್ಥೆಯಲ್ಲಿ ಇದ್ದಾರೆ. ಅವರ ಜೀವ ಕಾಪಾಡಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Army Chopper Crash: ದುರಂತ ಸ್ಥಳದಲ್ಲಿ ಕಾಪ್ಟರ್​​ನ ಬ್ಲ್ಯಾಕ್​ ಬಾಕ್ಸ್ ಪತ್ತೆ, ಪತನದ ರಹಸ್ಯ ಶೀಘ್ರದಲ್ಲೇ ಬಯಲು; ಅಷ್ಟಕ್ಕೂ ಏನಿದು ಬ್ಲ್ಯಾಕ್​ ಬಾಕ್ಸ್?

Published On - 1:36 pm, Thu, 9 December 21