ಮಾಸ್ಕ್ ಧರಿಸದಿದ್ದರೆ ಸೋಂಕಿತರ ಸೇವೆ ಮಾಡುವ ಶಿಕ್ಷೆ: ಗುಜರಾತ್ ಹೈಕೋರ್ಟ್​ ವಿನೂತನ ಕ್ರಮ

| Updated By: ಸಾಧು ಶ್ರೀನಾಥ್​

Updated on: Dec 03, 2020 | 3:17 PM

ಇಂಥವರನ್ನು ನೇರವಾಗಿ ರೋಗಿಗಳ ಆರೈಕೆಗೆ ಬಿಡಬಾರದು. ಸ್ವಚ್ಛಗೊಳಿಸುವುದು, ಅಡುಗೆಯಲ್ಲಿ ಸಹಾಯ ಮಾಡುವುದು, ದಾಖಲೆಗಳ ನಿರ್ವಹಣೆಯಂಥ ಕೆಲಸಗಳಲ್ಲಿ ತೊಡಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಮಾಸ್ಕ್ ಧರಿಸದಿದ್ದರೆ ಸೋಂಕಿತರ ಸೇವೆ ಮಾಡುವ ಶಿಕ್ಷೆ: ಗುಜರಾತ್ ಹೈಕೋರ್ಟ್​ ವಿನೂತನ ಕ್ರಮ
ಮಾಸ್ಕ್ ಧಾರಣೆ ಕಡ್ಡಾಯ
Follow us on

ಗಾಂಧಿನಗರ: ಮಾಸ್ಕ್ ಧರಿಸವರಿಗೆ ಕೋವಿಡ್ ಕೇಂದ್ರಗಳಲ್ಲಿ ಸಮುದಾಯ ಸೇವೆ ಮಾಡುವ ಶಿಕ್ಷೆ ವಿಧಿಸುವಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಬುಧವಾರ ನಿರ್ದೇಶನ ನೀಡಿದೆ. ಕೋವಿಡ್ ಆರೈಕೆ ಕೇಂದ್ರದಲ್ಲಿ ಇಂಥವರಿಗೆ ಕಡ್ಡಾಯ ಸೇವೆ ವಿಧಿಸುವ ಪ್ರಸ್ತಾವ ಒಪ್ಪಿಕೊಳ್ಳಲು ತುಸು ಹಿಂಜರಿಕೆಯಿದೆ ಎಂದು ಮಂಗಳವಾರ ಹೇಳಿದ್ದ ನ್ಯಾಯಾಲಯ ಬುಧವಾರ ಅಂತಿಮವಾಗಿ ಸೇವಾ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿತು.

ಈ ಪ್ರಸ್ತಾವವನ್ನು ಅನುಷ್ಠಾನಕ್ಕೆ ತರಲು ಆಸಕ್ತಿಯಿದೆ. ಆದರೆ ಅದು ಅಷ್ಟು ಸುಲಭವಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.

ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ಡಿವಾಲಾ ಅವರಿದ್ದ ವಿಭಾಗೀಯ ಪೀಠವು ಈ ಕುರಿತು ಸಮರ್ಪಕ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ರಾಜ್ಯ ಸರ್ಕಾರವು ಹೊರಡಿಸುವ ನಿರ್ದೇಶನದಲ್ಲಿ ಮಾಸ್ಕ್​ ಬಳಕೆ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಕೋವಿಡ್​ ಸುರಕ್ಷಾ ಶಿಷ್ಟಾಚಾರಗಳ ಕಡ್ಡಾಯ ಪಾಲನೆಯ ವಿಚಾರಗಳ ಉಲ್ಲೇಖವಿರಬೇಕು ಎಂದು ನ್ಯಾಯಪೀಠ ಹೇಳಿದೆ.

ಇಂಥವರನ್ನು ನೇರವಾಗಿ ರೋಗಿಗಳ ಆರೈಕೆಗೆ ಬಿಡಬಾರದು. ಸ್ವಚ್ಛಗೊಳಿಸುವುದು, ಅಡುಗೆಯಲ್ಲಿ ಸಹಾಯ ಮಾಡುವುದು, ದಾಖಲೆಗಳ ನಿರ್ವಹಣೆಯಂಥ ಕೆಲಸಗಳಲ್ಲಿ ತೊಡಗಿಸಬೇಕು. ಮಾಸ್ಕ್​ ಧರಿಸದೆ ಸಂಚರಿಸಿ ಸಿಕ್ಕಿಬಿದ್ದವರ ವಯಸ್ಸು, ವಿದ್ಯಾರ್ಹತೆ, ಲಿಂಗ ಮತ್ತು ಆರೋಗ್ಯ ಸ್ಥಿತಿ ಪರಿಗಣಿಸಿ ಅವರನ್ನು ಸೇವೆಗೆ ನಿಯೋಜಿಸಬೇಕು. ಇಂಥವರನ್ನು ದಿನಕ್ಕೆ 4ರಿಂದ 6 ಗಂಟೆಗಳಂತೆ 4-15 ದಿನಗಳವರೆಗೆ ಸಮುದಾಯ ಸೇವೆಗೆ ನಿಯೋಜಿಸಬಹುದು. ಕೊರೊನಾ ಸೋಂಕು ಹರಡುವುದನ್ನು ತಡೆಯಲೆಂದು ರೂಪಿಸಿರುವ ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕೆ ಸಮುದಾಯ ಸೇವೆ ಮಾಡಲು ನಿಯುಕ್ತಿಗೊಂಡವರ ಹೆಸರುಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿತು.

ಡಿಸೆಂಬರ್ 24ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯವು, ಅಷ್ಟರೊಳಗೆ ಈ ಕುರಿತ ಕಾರ್ಯಸಾಧ್ಯತೆ ವರದಿ ಸಲ್ಲಿಸಲು ನಿರ್ದೇಶನ ನೀಡಿತು.

ಅಪಾಯದ ಹೊಸ್ತಿಲಲ್ಲಿ.. ಅಮೆರಿಕನ್ನರು!

Published On - 4:27 pm, Wed, 2 December 20