9ನೇ ಕ್ಲಾಸ್ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ

ಶಿಕ್ಷಕರೊಬ್ಬರು 9ನೇ ತರಗತಿ ಓದುತ್ತಿದ್ದ ತನ್ನ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ್ದರಿಂದ ಆಕೆಗೆ ಸರಿಯಾಗಿ ಕಿವಿ ಕೇಳದಂತಾಗಿತ್ತು. ಹೀಗಾಗಿ, ಆ ಶಿಕ್ಷಕಿಗೆ ಗುಜರಾತ್ ಕೋರ್ಟ್ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ವಿದ್ಯಾರ್ಥಿನಿ ಅಶಿಸ್ತಿನಿಂದ ವರ್ತಿಸುತ್ತಿದ್ದಾಳೆ ಮತ್ತು ಪೋಷಕರು ಈ ಪ್ರಕರಣವನ್ನು ತಪ್ಪಾಗಿ ದಾಖಲಿಸಿದ್ದಾರೆ ಎಂದು ಶಿಕ್ಷಕಿ ತನ್ನ ಪ್ರತಿವಾದದಲ್ಲಿ ಹೇಳಿಕೊಂಡಿದ್ದಾರೆ. ಆಕೆಗೆ ಕ್ಯಾನ್ಸರ್ ಕಾಯಿಲೆಯಿದ್ದು, ಶಿಕ್ಷೆಯನ್ನು ವಜಾಗೊಳಿಸಬೇಕೆಂದು ಆಕೆಯ ವಕೀಲರು ಕೋರಿದ್ದಾರೆ. ಆದರೆ, ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ.

9ನೇ ಕ್ಲಾಸ್ ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ
Representative Image

Updated on: Feb 10, 2026 | 10:15 PM

ನವದೆಹಲಿ, ಫೆಬ್ರವರಿ 10: 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಹೋಂ ವರ್ಕ್ ಪೂರ್ಣಗೊಳಿಸದ ಕಾರಣದಿಂದಾಗಿ ಶಿಕ್ಷಕರೊಬ್ಬರು ಕಪಾಳಮೋಕ್ಷ ಮಾಡಿದ್ದರು. ಹೀಗಾಗಿ ಗುಜರಾತ್ ನ್ಯಾಯಾಲಯವು ಆ ಶಾಲಾ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಹಲ್ಲೆಯಿಂದಾಗಿ ಬಾಲಕಿಯ ಕಿವಿಯೋಲೆ ಕಿತ್ತುಬಂದು ಒಂದು ಕಿವಿಯೇ ಕೇಳದಂತಾಗಿದೆ. ಜನವರಿ 30ರಂದು ನೀಡಿದ ತೀರ್ಪಿನಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಿಮಾಂಶು ಚೌಧರಿ ಈ ಅಪರಾಧದ ಮೂಲಕ ಶಿಕ್ಷಕಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇದರಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ ಎಂದು ಹೇಳಿದ್ದಾರೆ.

14 ವರ್ಷದ ಬಾಲಕಿಯ ಎಡ ಕಿವಿಯೋಲೆಯ ರಂಧ್ರ ಹರಿದುಬಂದಿದ್ದು, ಅದಕ್ಕಾಗಿ ಹಲವು ದಿನಗಳವರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು ಎಂದು ನ್ಯಾಯಾಲಯ ಹೇಳಿದೆ. ಈ ಘಟನೆ ಜನವರಿ 1, 2020ರಂದು ಗಾಂಧಿನಗರದ ಖಾಸಗಿ ಶಾಲೆಯಾದ ಬಾ ಶ್ರೀ ವಸಂತಕುವರ್ಬಾ ಶಾಲೆಯಲ್ಲಿ ನಡೆದಿತ್ತು. ಶಿಕ್ಷಕಿ ಪರುಲ್ಬೆನ್ ಪಟೇಲ್ ತನ್ನ ವಿದ್ಯಾರ್ಥಿನಿ ಹೋಂ ವರ್ಕ್ ಪೂರ್ಣಗೊಳಿಸಿಲ್ಲ ಎಂದು ಕೋಪಗೊಂಡು ಅವಳ ಎಡ ಕಿವಿಗೆ 3 ಬಾರಿ ಹೊಡೆದಿದ್ದರು. ಈ ಹೊಡೆತಗಳಿಂದ ಕಿವಿಗೆ ತೀವ್ರ ಗಾಯವಾಗಿತ್ತು.

ಇದನ್ನೂ ಓದಿ: 2 ಲಕ್ಷಕ್ಕಾಗಿ 14 ವರ್ಷದ ಮಗಳನ್ನು ಕೋಲಾರದ 54 ವರ್ಷದ ವ್ಯಕ್ತಿಗೆ ಮಾರಿದ ತಾಯಿ!

ಆ ಬಾಲಕಿಯ ಕುಟುಂಬ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಈ ಘಟನೆ ನಡೆದ 2 ದಿನಗಳ ನಂತರ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಿದರು. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೈದ್ಯಕೀಯ ಪುರಾವೆಗಳು ಗಾಯದ ಸ್ವರೂಪ ಮತ್ತು ಗಂಭೀರತೆಯನ್ನು ದೃಢಪಡಿಸಿದವು. ಹಲ್ಲೆ ನಡೆದು ನಾಲ್ಕೂವರೆ ವರ್ಷಗಳ ನಂತರವೂ ಆ ಬಾಲಕಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ನ್ಯಾಯಾಲಯ ಗಮನಿಸಿದೆ.

ಹೀಗಾಗಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 325 ಮತ್ತು ಮಗುವಿನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75ರ ಅಡಿಯಲ್ಲಿ ಆ ಶಿಕ್ಷಕಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆಕೆಗೆ 3 ವರ್ಷ ಮತ್ತು 3 ತಿಂಗಳ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಆ ಬಾಲಕಿಗೆ ಪರಿಹಾರವಾಗಿ ಪಾವತಿಸಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us