ಸ್ವಘೋಷಿತ ದೇವಮಾನವ, ವಿವಾದಿತ ಡೇರಾ ಸಚ್ ಸೌಧ ಬಾಬಾ ಗುರ್ಮಿತ್ ರಾಮ್ ರಹೀಮ್ ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. ಅನೇಕ ಬಾರಿ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ನಾನಾ ನ್ಯಾಯಾಲಯಗಳು ತಿರಸ್ಕರಿಸುತ್ತಾ ಬಂದಿವೆ. ಹಾಗಾಗಿ ತಾನು ಎಷ್ಟೇ ಪ್ರಭಾವಿಯಾಗಿದ್ದರೂ, ಈ ಹಿಂದೆ ಎಷ್ಟೇ (ಕು)ಖ್ಯಾತಿಯ ಶಿಖರದಲ್ಲಿದ್ದರೂ ಗುರ್ಮಿತ್ ರಾಮ್ ರಹೀಂಗೆ ಜೈಲಿನಿಂದ ಹೊರಬರಲಾಗುತ್ತಿಲ್ಲ.
54 ವರ್ಷದ ಗುರ್ಮಿತ್ ರಾಮ್ ರಹೀಂ ಪ್ರಸ್ತುತ ರೋಹ್ಟಕ್ನ ಸುನೇರಿಯಾ ಜೈಲಿನಲ್ಲಿ 20 ವರ್ಷಗಳ ಜೈಲುಶಿಕ್ಷೆ ಅನುಭವಿಸುತ್ತಿದ್ದಾನೆ. 2017ರ ಆಗಸ್ಟ್ ತಿಂಗಳಿಂದ ಗುರ್ಮಿತ್ ರಾಮ್ ರಹೀಂ ಜೈಲುವಾಸ ಅನುಭವಿಸುತ್ತಿದ್ದಾನೆ. ಆಗಸ್ಟ್ 25ರಂದು ಗುರ್ಮಿತ್ ರಾಮ್ ರಹೀಂನನ್ನು ಜೈಲುಶಿಕ್ಷೆಗೆ ಗುರಿಪಡಿಸಿದಾಗ ಹಿಂಸಾಚಾರ ಭುಗಿಲೆದ್ದು 41 ಮಂದಿ ಅಸುನೀಗಿದ್ದರು.