ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ದೆಹಲಿ: ಹರ್ಯಾಣದಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಪಕ್ಷಕ್ಕೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಆಡಳಿತ ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಈ ಕಾರಣದಿಂದ ಆಡಳಿತ ವಹಿಸಿದ್ದ ಬಿಜೆಪಿಗೆ ಬಿಕ್ಕಟ್ಟು ಉಂಟಾಗಿದೆ. ನೂತನ ಕೃಷಿ ಕಾಯ್ದೆಗಳ ಬಗ್ಗೆ ಕೇಂದ್ರ ತಾಳಿರುವ ನಿಲುವನ್ನು ವಿರೋಧಿಸಿ ಪಕ್ಷಕ್ಕೆ ಮುಜುಗರ ತರುವ ಉದ್ದೇಶದಿಂದ ಹೀಗೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಒಂದೆಡೆ ಅಭಿಪ್ರಾಯಗಳು ಕೇಳಿಬಂದಿವೆ. ದುಷ್ಯಂತ್ ಚೌಟಾಲರ ಜನ್ನಾಯಕ್ ಜನತಾ ಪಾರ್ಟಿ (JJP) ಜತೆಗೆ ಮೈತ್ರಿ ಹೊಂದಿರುವ ಬಿಜೆಪಿ, ಆಡಳಿತ ಸರ್ಕಾರಕ್ಕೆ ಯಾವುದೇ ಕುತ್ತು ಉಂಟಾಗಿಲ್ಲ ಎಂದು ಹೇಳಿದೆ.
ಈ ನಡುವೆ, ಪಕ್ಷದವರನ್ನು ತಮ್ಮ ತಮ್ಮ ಕ್ಷೇತ್ರಗಳ ರೈತಾಪಿ ಜನರು ಕಡೆಗಣಿಸುತ್ತಿದ್ದಾರೆ, ಬಹಿಷ್ಕರಿಸುತ್ತಿದ್ದಾರೆ ಎಂದು ಸ್ವತಃ ಜೆಜೆಪಿ ಸದಸ್ಯರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಗೆ ರೈತ ಹೋರಾಟದ ನಡುವೆ ಸರ್ಕಾರವನ್ನು ಭದ್ರವಾಗಿ ಉಳಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ.
ಹರ್ಯಾಣ ಸರ್ಕಾರ ವಿಚಾರದಲ್ಲಿ ನೀವು ತಿಳಿದಿರಬೇಕಾದ ಮುಖ್ಯ ಅಂಶಗಳು ಇಲ್ಲಿದೆ
- ಒಟ್ಟು 90 ಸದಸ್ಯರನ್ನು ಹೊಂದಿರುವ ಹರ್ಯಾಣ ವಿಧಾನಸಭೆಯಲ್ಲಿ, ಬಿಜೆಪಿ 40 ಸೀಟ್ಗಳನ್ನು ಹೊಂದಿದೆ. ಜತೆಗೆ 10 ಜೆಜೆಪಿ ಶಾಸಕರು ಹಾಗೂ 5 ಪಕ್ಷೇತರ ಅಭ್ಯರ್ಥಿಗಳ ಬೆಂಬಲವನ್ನೂ ಬಿಜೆಪಿ ಪಡೆದುಕೊಂಡಿದೆ. ವಿಧಾನಸಭೆಯ 2 ಸ್ಥಾನಗಳು ಖಾಲಿಯಾಗಿ ಉಳಿದಿದೆ. ಹಾಗಾಗಿ, ಸ್ಪಷ್ಟ ಬಹುಮತ ಪಡೆಯಲು ಪಕ್ಷವೊಂದಕ್ಕೆ 45 ಸ್ಥಾನಗಳು ಬೇಕಾಗಿದೆ.
- ಆಡಳಿತ ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲ ಹಿಂಪಡೆದುಕೊಂಡಿದ್ದಾರೆ. ಅಲ್ಲದೆ, ಮೈತ್ರಿ ಪಕ್ಷದ ಕೆಲವು ಶಾಸಕರು ಇದು ಅತಿ ಭ್ರಷ್ಟ ಸರ್ಕಾರ ಎಂದು ಹೇಳಿರುವ ಬಗ್ಗೆ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ತಿಳಿಸಿದ್ದರು. ಮನೋಹರ್ ಲಾಲ್ ಖಟ್ಟರ್ ಸರ್ಕಾರದ ವಿರುದ್ಧ ಸದನದಲ್ಲಿ ಅವಿಶ್ವಾಸ ಮತ ನಿರ್ಣಯದ ವೇಳೆ ಯಾರು ಯಾರು ಯಾರೊಂದಿಗೆ ನಿಲ್ಲುತ್ತಾರೆ ಎಂದು ತಿಳಿಯಲಿದೆ ಎಂದು ಅವರು ಹೇಳಿದ್ದರು.
- ಸರ್ಕಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ನಾವು ಆತ್ಮವಿಶ್ವಾಸದಿಂದ ಇದ್ದೇವೆ. ಸರ್ಕಾರದ ವಿರುದ್ಧದ ಅವಿಶ್ವಾಸ ಮತ ನಿರ್ಣಯ ವಿಫಲವಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದರು.
- ನೂತನ ಕೃಷಿ ಕಾಯ್ದೆಗಳ ಪರವಾಗಿ ಹರ್ಯಾಣ ಸರ್ಕಾರ ದೃಢ ನಿಲುವು ತಾಳಿದೆ. ಇದರ ವಿರುದ್ಧ ಮಾತನಾಡಿ, ರಾಜಕೀಯ ಲಾಭ ಗಳಿಸಲು ಕಾಂಗ್ರೆಸ್ ಹೀಗೆ ಮಾಡುತ್ತಿದೆ ಎಂಬ ಮಾತು ಕೇಳಿಬಂದಿದೆ. ಖಟ್ಟರ್ ಸರ್ಕಾರ ತಾಳಿರುವ ಜನವಿರೋಧಿ ನಿರ್ಧಾರದಿಂದ ಆಡಳಿತ ಪಕ್ಷಕ್ಕೆ ಹಿಂಜರಿಕೆ ಉಂಟಾಗಿದೆ. ಜೆಜಪಿ ಕೂಡ ಇದರಿಂದ ಸಮಸ್ಯೆ ಅನುಭವಿಸುತ್ತಿದೆ ಎಂಬ ಅಭಿಪ್ರಾಯಗಳೂ ಇವೆ.
- ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಖಚಿತತೆ ನೀಡದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಈ ಹಿಂದೆ ಹೇಳಿದ್ದರು. ರೈತ ಸಮುದಾಯದಿಂದಲೇ ಹೆಚ್ಚು ಬೆಂಬಲ ಹೊಂದಿರುವ ಜೆಜೆಪಿ, ನೂತನ ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿದರೆ ತನ್ನ ಮತಗಳಿಗೆ ಸಮಸ್ಯೆ ಉಂಟಾಗಬಹುದು ಎಂಬ ಬಗ್ಗೆ ಭಯ ಹೊಂದಿದೆ. 10 ಶಾಸಕರನ್ನು ಹೊಂದಿರುವ ಜೆಜೆಪಿ, ಅಕ್ಟೋಬರ್, 2020ರ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಿತ್ತು.
- ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಸಭೆ ನಡೆಸಿದ ಬಳಿಕ ದುಷ್ಯಂತ್ ಚೌಟಾಲ, ಹರ್ಯಾಣ ಸರ್ಕಾರಕ್ಕೆ ಯಾವುದೇ ಭಯವಿಲ್ಲ. ಇದು 5 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿದ್ದರು.
- ತಮ್ಮ ಭಾಗದ ಶಾಸಕರು ರೈತ ಕಾಯ್ದೆಗಳನ್ನು ವಿರೋಧಿಸಿ, ರೈತರಿಗೆ ಬೆಂಬಲ ಸೂಚಿಸದೇ ಹೋದರೆ, ಅಂಥವರನ್ನು ಬಹಿಷ್ಕರಿಸುವುದಾಗಿ ರೈತ ಸಮುದಾಯದ ಜನರು ಹೇಳಿದ್ದರು.
ಇದನ್ನೂ ಓದಿ: ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಕಲಬುರ್ಗಿ ತೊಗರಿ ಮಾರಾಟ: ರೈತರಿಗೆ ತುಸು ನೆಮ್ಮದಿ
Uttarakhand CM: ಉತ್ತರಾಖಂಡ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯನ್ನು ಘೋಷಿಸಿದ ಬಿಜೆಪಿ; ತಿರತ್ ಸಿಂಗ್ ರಾವತ್ಗೆ ಸಿಎಂ ಪಟ್ಟ