ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಮತಾ ಬ್ಯಾನರ್ಜಿ ಮುಂಬರುವ ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಿಂದ ಇಂದು (ಮಾರ್ಚ್ 10) ನಾಮಪತ್ರ ಸಲ್ಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷ ಮಾರ್ಚ್ 5ರಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು.
ಮಮತಾ ಬ್ಯಾನರ್ಜಿ ಈ ಮೊದಲು ಭವಾನಿಪುರದಿಂದ ಸ್ಪರ್ಧಿಸುತ್ತಿದ್ದರು. ಈ ಬಾರಿ ತಾವು ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದಾರೆ. ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ತೃಣಮೂಲ ಕಾಂಗ್ರೆಸ್ ನಾಯಕ ಸುವೇಂದು ಅಧಿಕಾರಿ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಬಿಜೆಪಿ ಮಾರ್ಚ್ 6ರಂದು ಘೋಷಿಸಿಕೊಂಡಿತ್ತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು.
West Bengal Chief Minister Mamata Banerjee files her nomination as TMC candidate from Nandigram.#WestBengalElections2021 pic.twitter.com/toYBTeZmez
— ANI (@ANI) March 10, 2021
ಮುಂದಿನ ತಿಂಗಳಿನಲ್ಲಿ ನಡೆಯಲಿರುವ ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಚುನಾವಣೆಯ ಪೈಕಿ, ಪಶ್ಚಿಮ ಬಂಗಾಳ ಚುನಾವಣಾ ಕಣ ಭರ್ಜರಿ ರಂಗು ಪಡೆದುಕೊಂಡಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ಪ್ರಬಲ ಪೈಪೋಟಿ ನಡೆಯುವ ಸೂಚನೆ ಲಭಿಸಿದೆ. ಇದೀಗ, ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ನಡುವೆ ಚುನಾವಣಾ ಕಣ ರಂಗೇರುವ ಸೂಚನೆ ಖಚಿತವಾಗಿದೆ.
ತೃಣಮೂಲ ಕಾಂಗ್ರೆಸ್ನ ಮಾಜಿ ಸಚಿವರಾಗಿದ್ದ ಸುವೇಂದು ಅಧಿಕಾರಿ ಕಳೆದ ಡಿಸೆಂಬರ್ನಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನಂದಿಗ್ರಾಮದಲ್ಲಿ 50,000 ಮತಗಳಿಂದ ಸೋಲಿಸಲಿದೆ ಎಂದು ಅವರು ಹೇಳಿದ್ದರು.
ಪಶ್ಚಿಮ ಬಂಗಾಳ ಈ ಬಾರಿ 8 ಹಂತದ ಮತದಾನವನ್ನು ಎದುರಿಸಲಿದೆ. ಮಾರ್ಚ್ 27ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದಲ್ಲಿ ಒಟ್ಟು 7,34,07,832 ಮತದಾರರಿದ್ದು, ಯಾರ ಕೈಗೆ ಆಡಳಿತದ ಚುಕ್ಕಾಣಿ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಸಿ-ವೋಟರ್ ಸಮೀಕ್ಷೆ ಏನು ಹೇಳುತ್ತಿದೆ?
ಪಶ್ಚಿಮ ಬಂಗಾಳದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ಟಿಎಂಸಿ, ಒಟ್ಟು 294 ಸೀಟ್ಗಳ ಪೈಕಿ 154 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಬಹುಮತಕ್ಕಾಗಿ 147 ಸ್ಥಾನ ಬೇಕು. ಟಿಎಂಸಿ 154 ಗೆಲ್ಲಬಹುದು ಎನ್ನಲಾಗುತ್ತಿದೆ. ಬಿಜೆಪಿ ಬರೋಬ್ಬರಿ 107 ಕ್ಷೇತ್ರಗಳನ್ನು ಗೆಲ್ಲಬಹುದು ಎಂದೂ ಸಮೀಕ್ಷೆ ತಿಳಿಸಿದೆ. ಪ್ರಸ್ತುತ ಟಿಎಂಸಿ 202 ಸ್ಥಾನ ಮತ್ತು ಬಿಜೆಪಿ 34 ಹೊಂದಿದೆ. ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ವಿಜಯ ಸಾಧಿಸಬಹುದು ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: ನನ್ನನ್ನು ಹೊರಗಿನವಳು ಎನ್ನಲು ನೀವು ಯಾರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲ್
West Bengal Assembly Elections 2021: ಟಿಎಂಸಿ ಖೇಲ್ ಖತಮ್, ವಿಕಾಸ್ ಶುರು: ಪ್ರಧಾನಿ ನರೇಂದ್ರ ಮೋದಿ ಘೋಷಣೆ
Published On - 2:58 pm, Wed, 10 March 21