Assembly Elections 2021: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?

C Voter Opinion Poll: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪೈಕಿ ಮೂರು ರಾಜ್ಯಗಳಲ್ಲಿ ಪ್ರಸ್ತುತ ಆಡಳಿತ ವಹಿಸಿರುವ ರಾಜ್ಯಗಳೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಹಾಗೂ ಸಿ-ವೋಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ವರದಿ ತಿಳಿಸಿದೆ.

Assembly Elections 2021: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?
ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್​ ಧ್ವಜಗಳು
Follow us
| Updated By: ganapathi bhat

Updated on:Apr 06, 2022 | 7:19 PM

ದೆಹಲಿ: ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಪೈಕಿ ಮೂರು ರಾಜ್ಯಗಳಲ್ಲಿ ಪ್ರಸ್ತುತ ಆಡಳಿತ ವಹಿಸಿರುವ ರಾಜ್ಯಗಳೇ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಹಾಗೂ ಸಿ-ವೋಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ವರದಿ ತಿಳಿಸಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಅಸ್ಸಾಂನಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಕುತೂಹಲಕಾರಿ ಅಂಶಗಳು ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಡುವೆ ಭರ್ಜರಿ ಹಣಾಹಣಿ ಏರ್ಪಟ್ಟಿದೆ. ಒಂದೆಡೆ, ಹಾಲಿ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಸಹಿತ ಹಲವರು ಪ್ರಚಾರ ಯಾತ್ರೆ ಕೈಗೊಂಡಿದ್ದಾರೆ. ಹಾಗಾಗಿ, ಐದು ರಾಜ್ಯಗಳಲ್ಲಿ ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಜನರಲ್ಲಿ ಮನೆಮಾಡಿದೆ.

ಟೈಮ್ಸ್ ನೌ ಹಾಗೂ ಸಿ-ವೋಟರ್ ಜತೆಯಾಗಿ ನಡೆಸಿದ ಸಮೀಕ್ಷೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಹಿಂದಿನ ಅವಧಿಗೆ ಹೋಲಿಸಿದರೆ ಕಡಿಮೆ ಸ್ಥಾನ ಗೆಲ್ಲಲಿದೆ. ಆದರೆ, ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ತಿಳಿಸಿದೆ. ಜತೆಗೆ, ಬಂಗಾಳದಲ್ಲಿ ಈ ಮೊದಲು ಸದ್ದು ಮಾಡಿರದ ಬಿಜೆಪಿ, ಈ ಬಾರಿ ದೊಡ್ಡ ಪ್ರಮಾಣದ ಸಂಚಲನ ಮೂಡಿಸಲಿದೆ. ಹೆಚ್ಚು ಸೀಟ್​ಗಳನ್ನು ಗೆಲ್ಲಲಿದೆ ಎಂದು ಸೂಚಿಸಿದೆ.

ಸದ್ಯ ಅಸ್ಸಾಂನಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ತನ್ನ ಸ್ಥಾನ ಉಳಿಸಿಕೊಳ್ಳಲಿದೆ ಎಂದೂ ಸಮೀಕ್ಷೆ ಹೇಳಿದೆ. ಅಲ್ಪ ಬಹುಮತದಿಂದ ಮತ್ತೆ ಆಡಳಿತ ಸ್ಥಾನ ಪಡೆಯಲಿದೆ ಎಂಬ ಮಾಹಿತಿ ನೀಡಿದೆ. ಕೇರಳದಲ್ಲಿ ಈಗ ಆಡಳಿತದಲ್ಲಿರುವ ಎಡಪಕ್ಷ ಮತ್ತೆ ಅಧಿಕಾರ ಗಳಿಸಲಿದೆ. ಆದರೆ, ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನೇತೃತ್ವದ ಮೈತ್ರಿ ಸರ್ಕಾರ ಎಐಡಿಎಂಕೆಯನ್ನು ಸೋಲಿಸಿ ಅಧಿಕಾರ ವಹಿಸಲಿದೆ ಎಂದು ತಿಳಿಸಿದೆ. ಪುದುಚೇರಿಯಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರ ಪಡೆಯುವ ನಿರೀಕ್ಷೆ ಇದೆ.

ಸಮೀಕ್ಷೆಗಳು ಯಾವಾತ್ತೂ ನಿಜವಾಗುತ್ತವೆ ಎಂದೇನಲ್ಲ. ಹಲವು ಬಾರಿ ಚುನಾವಣಾ ಪೂರ್ವ ಸಮೀಕ್ಷೆಗಳು ಸುಳ್ಳಾಗಿದ್ದೂ ಇದೆ. ವಿಶೇಷವಾಗಿ ವಿವಿಧ ಸಮುದಾಯದ, ಜಾತಿ, ಧರ್ಮಗಳ ಜನರು ಇರುವ ರಾಜ್ಯಗಳಲ್ಲಿ ಸಮೀಕ್ಷೆಗಳು ವಿಫಲವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ಟಿಎಂಸಿ, ಒಟ್ಟು 294 ಸೀಟ್​ಗಳ ಪೈಕಿ 154 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದಲ್ಲಿ ಸ್ಪಷ್ಟ ಬಹುಮತಕ್ಕಾಗಿ 147 ಸ್ಥಾನ ಬೇಕು. ಟಿಎಂಸಿ 154 ಗೆಲ್ಲಬಹುದು ಎನ್ನಲಾಗುತ್ತಿದೆ. ಬಿಜೆಪಿ ಬರೋಬ್ಬರಿ 107 ಕ್ಷೇತ್ರಗಳನ್ನು ಗೆಲ್ಲಬಹುದು ಎಂದೂ ಸಮೀಕ್ಷೆ ತಿಳಿಸಿದೆ. ಪ್ರಸ್ತುತ ಟಿಎಂಸಿ 202 ಸ್ಥಾನ ಮತ್ತು ಬಿಜೆಪಿ 34 ಹೊಂದಿದೆ. ಕಾಂಗ್ರೆಸ್ 33 ಕ್ಷೇತ್ರಗಳಲ್ಲಿ ವಿಜಯ ಸಾಧಿಸಬಹುದು ಎಂಬ ಅಭಿಪ್ರಾಯವಿದೆ.

ಅಸ್ಸಾಂನಲ್ಲಿ ಬಿಜೆಪಿ 67 ಸೀಟ್ ಗೆಲ್ಲುವ ನಿರೀಕ್ಷೆ ಇದೆ. ಅಂದರೆ, ಬಹುಮತಕ್ಕೆ ಬೇಕಾಗಿರುವ ಸ್ಥಾನಗಳಿಗಿಂತ 7 ಹೆಚ್ಚು ಸೀಟ್​ಗಳು. ಕಾಂಗ್ರೆಸ್ ನೇತೃತ್ವದ ಪಕ್ಷಗಳು 57 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪುದುಚೇರಿಯಲ್ಲಿ ಇರುವ 30 ಸೀಟ್​ಗಳ ಪೈಕಿ, ಬಿಜೆಪಿ 18 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ವರದಿ ಮಾಡಿದೆ.

ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 158 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಒಟ್ಟು 234 ಕ್ಷೇತ್ರಗಳಲ್ಲಿ, ಎಐಡಿಎಂಕೆ 65 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು. ಕೇರಳದಲ್ಲಿ ಆಡಳಿತ ವಹಿಸಿರುವ ಎಲ್​ಡಿಎಫ್ 140ರಲ್ಲಿ 82 ಸ್ಥಾನ ಪಡೆದರೆ, ಕಾಂಗ್ರೆಸ್​ ನೇತೃತ್ವದ ಯುಡಿಎಫ್ 56 ಸೀಟ್ ಪಡೆಯಬಹುದು ಎನ್ನಲಾಗಿದೆ. ಬಿಜೆಪಿ 1 ಸೀಟ್ ಗೆಲ್ಲಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: Tamil Nadu Assembly Elections 2021: ತಮಿಳುನಾಡು ಚುನಾವಣೆಯಲ್ಲಿ 154 ಸೀಟುಗಳಲ್ಲಿ ಸ್ಪರ್ಧಿಸಲಿದೆ ಮಕ್ಕಳ್ ನೀಧಿ ಮಯ್ಯಂ

Kerala Elections 2021: ಕೇರಳದ ಜನತೆ ಬದಲಾವಣೆ ಬಯಸಿದ್ದಾರೆ; ಅಮಿತ್ ಶಾ

Published On - 12:24 pm, Tue, 9 March 21