ನನ್ನನ್ನು ಹೊರಗಿನವಳು ಎನ್ನಲು ನೀವು ಯಾರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲ್

West Bengal Assembly Elections 2021: ಏಪ್ರಿಲ್ 1ರಂದು ಮತದಾನ ಮಾಡುವಾಗ ಬಿಜೆಪಿಯನ್ನು ‘ಏಪ್ರಿಲ್ ಫೂಲ್’ ಮಾಡಿ. ಬೆದರಿಕೆಗೆ ಮಣಿಯಬೇಡಿ, ಹಣಕ್ಕಾಗಿ ಮತವನ್ನು ಮಾರಿಕೊಳ್ಳಬೇಡಿ. ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ವಿಶ್ವಾಸವಿರಲಿ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ನನ್ನನ್ನು ಹೊರಗಿನವಳು ಎನ್ನಲು ನೀವು ಯಾರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲ್
ಮಮತಾ ಬ್ಯಾನರ್ಜಿ
Follow us
|

Updated on:Mar 09, 2021 | 7:02 PM

ನಂದಿಗ್ರಾಮ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ದಿನಾಂಕ ಸಮೀಪಿಸುತ್ತಿರುವಂತೆಯೇ ರಾಜಕೀಯವೂ ದಿನದಿಂದ ದಿನಕ್ಕೆ ಕಾವೇರುತ್ತಿದೆ. ತಮ್ಮ ಬಹುಕಾಲದ ಬಂಟ ಸುವೇಂದು ಅಧಿಕಾರಿ ವಿರುದ್ಧ ತೊಡೆತಟ್ಟಿರುವ ಮಮತಾ ಬ್ಯಾನರ್ಜಿ, ಹಿಂದುತ್ವದ ಆಟದಲ್ಲಿ ತಮ್ಮ ದಾಳಗಳನ್ನೂ ಒಂದೊಂದಾಗಿ ಉರುಳಿಸಲು ಆರಂಭಿಸಿದ್ದಾರೆ. ನಂದಿಗ್ರಾಮದಲ್ಲಿ ಮಂಗಳವಾರ ನಡೆದ ಟಿಎಂಸಿ ಕಾರ್ಯಕರ್ತರ ಸಭೆಯಲ್ಲಿ ದುರ್ಗಾಸಪ್ತಶತಿಯ ಮಂತ್ರವನ್ನೂ ಪಾರಾಯಣ ಮಾಡಿ, ‘ನಾನು ಹಿಂದೂ ಹುಡುಗಿ’ ಎಂದು ಗುಡುಗಿದರು.

ಸಭೆಯಲ್ಲಿ ಮಾತನಾಡಿದ ಮಮತಾ, ‘ಪಶ್ಚಿಮ ಬಂಗಾಳವನ್ನು ಬಿಜೆಪಿ ವಿಭಜಿಸುತ್ತಿದೆ. ನನ್ನನ್ನು ಅವರು ಹೊರಗಿನವಳು ಎನ್ನುತ್ತಿದ್ದಾರೆ. ನಾನು ಹೊರಗಿನವಳಾಗಿದ್ದರೆ ಮುಖ್ಯಮಂತ್ರಿ ಸ್ಥಾನದವರೆಗೆ ಹೇಗೆ ತಲುಪಿದೆ? ನಂದಿಗ್ರಾಮ ನನ್ನ ಪ್ರೀತಿಯ ಕ್ಷೇತ್ರ. ಬುಲೆಟ್ ಮತ್ತು ಬಾಂಬ್​ಗಳನ್ನು ಎದುರಿಸಿ ನಿಂತವರು ಇಲ್ಲಿನ ಜನ. ಇವರಿಗಾಗಿ ನಾನು ದುಡಿಯುತ್ತೇನೆ’ ಎಂದು ಹೇಳಿದರು.

ಏಪ್ರಿಲ್ 1ರಂದು ಮತದಾನ ಮಾಡುವಾಗ ಬಿಜೆಪಿಯನ್ನು ‘ಏಪ್ರಿಲ್ ಫೂಲ್’ ಮಾಡಿ ಎಂದು ಮಮತಾ ಬ್ಯಾನರ್ಜಿ ಕರೆನೀಡಿದರು. ಬೆದರಿಕೆಗೆ ಮಣಿಯಬೇಡಿ, ಹಣಕ್ಕಾಗಿ ಮತವನ್ನು ಮಾರಿಕೊಳ್ಳಬೇಡಿ. ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ವಿಶ್ವಾಸವಿರಲಿ ಎಂದರು. ಬಿಜೆಪಿಯು ಧರ್ಮಗಳೊಂದಿಗೆ ಆಟವಾಡುತ್ತಿದೆ ಎಂದು ದೂರಿದ ಮಮತಾ ಬ್ಯಾನರ್ಜಿ ವೇದಿಕೆಯ ಮೇಲೆ ದುರ್ಗಾಸಪ್ತಶತಿಯ ಚಂಡಿಪಾಠದ ಮಂತ್ರಗಳನ್ನು ಪಾರಾಯಣ ಮಾಡಿದರು. ತಮ್ಮನ್ನು ತಾವು ಹಿಂದೂ ಹುಡುಗಿ ಎಂದು ಕರೆದುಕೊಂಡ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಹರಿಹಾಯ್ದರು.

‘ಪ್ರತಿದಿನವೂ ನಾನು ಮನೆಯಿಂದ ಹೊರಗೆ ಹೋಗುವ ಮೊದಲು ಚಂಡಿಪಾಠದ ಪಾರಾಯಣ ಮಾಡುತ್ತೇನೆ. ಬಿಜೆಪಿ ನನ್ನೊಂದಿಗೆ ಹಿಂದುತ್ವದ ಆಟ ಆಡುವುದನ್ನು ನಿಲ್ಲಿಸುವುದು ಒಳಿತು. ಮಮತಾ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ನಾನೂ ಓರ್ವ ಹಿಂದೂ ಹುಡುಗಿ. ನನ್ನೊಂದಿಗೆ ಹಿಂದುತ್ವದ ಆಟ ಆಡಬೇಡಿ. ನಿಮಗೆ ನಿಜವಾದ ಒಳ್ಳೆಯ ಹಿಂದೂ ಆಗಿ ಬಾಳುವುದು ಹೇಗೆ ಎಂದು ಗೊತ್ತಿದೆಯೇ’ ಎಂದು ಪ್ರಶ್ನಿಸಿದರು.

ಚಿತ್ರ ನೋಡಿ: ನಂದಿಗ್ರಾಮದ ಶಂಶಾಬಾದ್ ಮಝಾರ್​ಗೆ ಮಮತಾ ಭೇಟಿ

ನಂದಿಗ್ರಾಮದಿಂದ ಬುಧವಾರ (ಮಾರ್ಚ್ 10) ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ಇಷ್ಟು ವರ್ಷ ಕೊಲ್ಕತ್ತಾದ ಭಬನಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಮಮತಾ ಈ ಬಾರಿ ನಂದಿಗ್ರಾಮದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಹಲವು ವರ್ಷಗಳಿಂದ ತಮ್ಮ ಪಕ್ಷದಲ್ಲಿ ಮಹತ್ವದ ಸ್ಥಾನ ನಿಭಾಯಿಸುತ್ತಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಪಕ್ಷಾಂತರವಾದ ನಂತರ ಮಮತಾ ವಿಧಾನಸಭಾ ಕ್ಷೇತ್ರ ಬದಲಿಸಲು ನಿರ್ಧರಿಸಿದರು. ಸುವೇಂದು ತವರು ಕ್ಷೇತ್ರ ನಂದಿಗ್ರಾಮದಲ್ಲಿಯೇ ಅವರನ್ನು ಸೋಲಿಸಿ, ಬಿಜೆಪಿಗೆ ಪಾಠ ಕಲಿಸಬೇಕೆಂಬ ಛಲವನ್ನು ಮಮತಾ ಹಲವೆಡೆ ವ್ಯಕ್ತಪಡಿಸಿದ್ದಾರೆ.

2007ರಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಯೊಂದಿಗೆ ಕೈಜೋಡಿಸಿ ಎಡರಂಗದ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದರು. 2011ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. 2016ರ ಚುನಾವಣೆಯನ್ನು ಟಿಎಂಸಿ ಮಮತಾ ಬ್ಯಾನರ್ಜಿ ನಾಯಕತ್ವದಲ್ಲಿಯೇ ಎದುರಿಸಿತ್ತು.

ಆದರೆ ಐದು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ನಂದಿಗ್ರಾಮದ ಟಿಎಂಸಿ ಶಾಸಕರಾಗಿದ್ದ, ಈಗ ಬಿಜೆಪಿಯಲ್ಲಿರುವ ಸುವೇಂದು ಅಧಿಕಾರಿಯಿಂದ ಮಮತಾ ಬ್ಯಾನರ್ಜಿಗೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ನಂದಿಗ್ರಾಮದಲ್ಲಿ ಮಮತಾರನ್ನು ಬಿಜೆಪಿ ಹೊರಗಿನವರು ಎಂದು ಛೇಡಿಸುತ್ತಿದೆ. ಈ ಟೀಕೆಗೆ ಪ್ರತಿಕ್ರಿಯಿಸಿರುವ ಮಮತಾ, ನಾನು ನಂದಿಗ್ರಾಮದಲ್ಲಿ ಮನೆಯೊಂದನ್ನು ತೆಗೆದುಕೊಂಡಿದ್ದೇನೆ. ನಂತರದ ಮೂರು ವರ್ಷ ಇಲ್ಲಿಗೆ ಆಗಾಗ ಬರುತ್ತಿರುತ್ತೇನೆ. ಅನಂತರ ಇಲ್ಲಿಯೇ ನೆಲೆಸುತ್ತೇನೆ. ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಟಿಎಂಸಿಯು ಮಾರ್ಚ್ 11ರ ಮಹಾಶಿವರಾತ್ರಿಯಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ನಂದಿಗ್ರಾಮದಲ್ಲಿಯೇ ಶಿವರಾತ್ರಿ ಆಚರಣೆ ಮಾಡುತ್ತೇನೆ ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ 8 ಹಂತದ ಚುನಾವಣೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಇದನ್ನೂ ಓದಿ: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೇರ್ಪಡೆ

Published On - 6:57 pm, Tue, 9 March 21