ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಿರತ್ ಸಿಂಗ್ ರಾವತ್
Uttarakhand: ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದು ತಿರತ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು.
ಡೆಹ್ರಾಡೂನ್: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರತ್ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬುಧವಾರ ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ. ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದು ತಿರತ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. 56ರ ಹರೆಯದ ಪೌರಿ ಚುನಾವಣಾ ಕ್ಷೇತ್ರದ ಸಂಸದರಾಗಿದ್ದಾರೆ ತಿರತ್ ಸಿಂಗ್. 2013 -15ರ ಅವಧಿಯಲ್ಲಿ ಉತ್ತರಾಖಂಡದ ಬಿಜೆಪಿ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದ್ದರು.
ಉತ್ತರಾಖಂಡ ಸಚಿವ ಧನ್ ಸಿಂಗ್ ರಾವತ್, ಕೇಂದ್ರ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ ಬಿಜೆಪಿ 56ರ ಹರೆಯದ ಗಡ್ವಾಲ್ನ ಸಂಸದ ತಿರತ್ ಸಿಂಗ್ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದೆ.
2012 ರಿಂದ 2017ರ ವರೆಗೆ ರಾವತ್ ಅವರು ಉತ್ತರಾಖಂಡ ಶಾಸಕಾಂಗ ಸಭೆಯ ಸದಸ್ಯರಾಗಿದ್ದರು. ಇವರು ಉತ್ತರಪ್ರದೇಶದ ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷರಾಗಿದ್ದರು. ಉತ್ತರಾಖಂಡ ರಚನೆಯಾದಾಗ ಮೊದಲ ಶಿಕ್ಷಣ ಸಚಿವರಾಗಿದ್ದವರು ತಿರತ್ ಸಿಂಗ್. 2007ರಲ್ಲಿ ಉತ್ತರಾಖಂಡದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಇದಾದನಂತರ ರಾಜ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಶಾಸಕರಾಗಿ ಆಯ್ಕೆಯಾದ ಇವರು 2013ರಲ್ಲಿ ಉತ್ತರಾಖಂಡ ಬಿಜೆಪಿ ಅಧ್ಯಕ್ಷರಾದರು.
Dehradun: Tirath Singh Rawat takes oath as Chief Minister of Uttarakhand pic.twitter.com/Y9U7ZAQiHl
— ANI (@ANI) March 10, 2021
ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ಗವರ್ನರ್ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿದ ನಂತರ ರಾಜೀನಾಮೆ ನೀಡಿದ್ದರು. ತಮ್ಮದೇ ಪಕ್ಷದ ಶಾಸಕರಿಂದ ತ್ರಿವೇಂದ್ರ ಸಿಂಗ್ ‘ಅಸಮರ್ಥ ಮುಖ್ಯಮಂತ್ರಿ’ (below average) ಎನಿಸಿಕೊಂಡಿದ್ದರು. ರಾವತ್ ನಾಯಕತ್ವ ಮುಂದುವರಿದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಬಹುತೇಕ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿದೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವಲ್ಲಿ ರಾವತ್ ವಿಫಲರಾಗಿದ್ದಾರೆ ಎಂದು ಶಾಸಕರು ಆರೋಪಿಸಿದ್ದರು.
ಪಕ್ಷದ ನಿರ್ಧಾರದಂತೆ ರಾಜೀನಾಮೆ ರಾಜ್ಯಕ್ಕೆ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲು ಪಕ್ಷವು ನನಗೆ ಅವಕಾಶ ನೀಡಿತ್ತು. ನನಗೆ ಇಂಥ ಅವಕಾಶ ಸಿಗಬಹುದು ಎಂದು ನಾನೆಂದೂ ಭಾವಿಸಿರಲಿಲ್ಲ. ಇದೀಗ ಪಕ್ಷವು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಮತ್ತೊಬ್ಬರಿಗೆ ನೀಡಬೇಕು ಎಂದು ಚಿಂತನೆ ನಡೆಸಿದೆ ಎಂದು ರಾವತ್ ಡೆಹ್ರಾಡೂನ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Congratulations to Shri @TIRATHSRAWAT on taking oath as the Chief Minister of Uttarakhand. He brings with him vast administrative and organisational experience. I am confident under his leadership the state will continue to scale new heights of progress.
— Narendra Modi (@narendramodi) March 10, 2021
ತಿರತ್ ಸಿಂಗ್ ರಾವತ್ ಗೆ ಮೋದಿ ಅಭಿನಂದನೆ ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಿರತ್ ಸಿಂಗ್ ರಾವತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಉತ್ತಮ ಆಡಳಿತ ಮತ್ತು ವ್ಯವಸ್ಥಿತವಾದ ಸಂಘಟನಾ ಅನುಭವವನ್ನು ಹೊಂದಿದ್ದಾರೆ . ಅವರ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿಯ ಉತ್ತುಂಗಕ್ಕೇರುವ ಭರವಸೆ ಇದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Uttarakhand CM: ಉತ್ತರಾಖಂಡ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯನ್ನು ಘೋಷಿಸಿದ ಬಿಜೆಪಿ; ತಿರತ್ ಸಿಂಗ್ ರಾವತ್ಗೆ ಸಿಎಂ ಪಟ್ಟ