ಭಾರತದಲ್ಲಿ ಕೊರೊನಾದಿಂದ ಸಾವು ಸಂಭವಿಸಿ ಭರ್ತಿ ಒಂದು ವರ್ಷ, ಸಾವಿಗೆ ನಾಂದಿ ಹಾಡಿದ್ದೇ ಕರ್ನಾಟಕ
ಸೌದಿ ಅರೇಬಿಯಾದಿಂದ ಉಮರಾ ತೀರ್ಥಯಾತ್ರೆಗೆ ಹೋಗಿ ಬಂದಿದ್ದ 76 ವರ್ಷದ ವೃದ್ದ ಕಲಬುರಗಿಯಲ್ಲಿ ಬಲಿಯಾದಾಗ ಕರ್ನಾಟಕಕ್ಕೂ ಕೊರೊನಾ ಕಾಲಿಟ್ಟೇ ಬಿಟ್ಟಿತಾ ಎಂಬ ಆತಂಕ ಆರಂಭವಾಗಿತ್ತು. 2020ರ ಮಾರ್ಚ್ 6ರಂದು ವೃದ್ಧನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.
ಕಲಬುರಗಿ: ಭಾರತದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯಲು ಆರಂಭಿಸಿ ವರ್ಷ ಕಳೆದಿದೆ. ಕೊರೊನಾಕ್ಕೆ ಭಾರತದಲ್ಲಿ ಮೊದಲ ಬಲಿಯಾಗಿಯೂ ಇಂದಿಗೆ (ಮಾರ್ಚ್ 10) ಸರಿಯಾಗಿ ಒಂದು ವರ್ಷ ತುಂಬಿದೆ. ವರ್ಷದ ಹಿಂದೆ ಅಂದರೆ ಮಾರ್ಚ್ 10, 2020ರಂದು ಕಲಬುರಗಿಯ ವೃದ್ಧನೋರ್ವ ಕೊರೊನಾ ಸೋಂಕಿಗೆ ಬಲಿಯಾಗುವ ಮೂಲಕ ಕೊವಿಡ್ನಿಂದಾಗಿ ದೇಶದಲ್ಲಿ ಮೊಟ್ಟ ಮೊದಲ ಸಾವು ಸಂಭವಿಸಿತ್ತು. ಆ ಕಹಿ ನೆನಪಿಗೀಗ ಒಂದು ವರ್ಷ.
ಸೌದಿ ಅರೇಬಿಯಾದಿಂದ ಉಮರಾ ತೀರ್ಥಯಾತ್ರೆಗೆ ಹೋಗಿ ಬಂದಿದ್ದ 76 ವರ್ಷದ ವೃದ್ದ ಕಲಬುರಗಿಯಲ್ಲಿ ಬಲಿಯಾದಾಗ ಕರ್ನಾಟಕಕ್ಕೂ ಕೊರೊನಾ ಕಾಲಿಟ್ಟೇ ಬಿಟ್ಟಿತಾ ಎಂಬ ಆತಂಕ ಆರಂಭವಾಗಿತ್ತು. 2020ರ ಮಾರ್ಚ್ 6ರಂದು ವೃದ್ಧನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ವೃದ್ಧನ ಸಾವಿನ ನಂತರ ದೇಶದಲ್ಲೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಲಾಕ್ಡೌನ್ ಪ್ರಾರಂಭವಾಗಿತ್ತು. ಈ ವಿಚಾರದಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಬುರಗಿ ಜಿಲ್ಲೆಯನ್ನು ಲಾಕ್ಡೌನ್ ಮಾಡಿ, ಸಂಚಾರವನ್ನು ಸಂಪೂರ್ಣ ಸ್ತಬ್ಧಗೊಳಿಸಿದ್ದರು.
ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಎರಡನೇ ಅಲೆಯ ಆತಂಕ ಎಲ್ಲರ ಮೊಗದಲ್ಲೂ ಇದೆಯಾದರೂ ಲಸಿಕೆ ಇರುವ ಕಾರಣ ಕೊಂಚ ಧೈರ್ಯವೂ ಇದೆ. ಆದರೆ, ಕಳೆದ ವರ್ಷ ಇದೇ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಯನ್ನು ನೆನೆಸಿಕೊಂಡರೆ ನಿಜಕ್ಕೂ ಭೀಕರ ಎನ್ನಿಸದೇ ಇರಲಾರದು. ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾದರೂ ಸುತ್ತಮುತ್ತಲಿನ ಎಲ್ಲರಲ್ಲೂ ಆತಂಕ ಉಲ್ಬಣಿಸುತ್ತಿತ್ತು. ಜೀವವನ್ನೇ ನುಂಗುವ ಸಾಂಕ್ರಾಮಿಕ ಕಾಯಿಲೆಯಂತೆ ಭಾಸವಾಗುತ್ತಿದ್ದ ಕೊರೊನಾ ಅಕ್ಷರಶಃ ಎಲ್ಲರ ಜಂಘಾಬಲವನ್ನೂ ಉಡುಗಿಸಿಬಿಟ್ಟಿತ್ತು.
ಸದ್ಯ ಕರ್ನಾಟಕದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 9,56,041 ಆಗಿದ್ದು, 12,373 ಜನ ಮೃತಪಟ್ಟಿದ್ದಾರೆ. ದೇಶಾದ್ಯಂತ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 1,12,62,707 ಆಗಿದ್ದು ಇಲ್ಲಿಯ ತನಕ ಒಟ್ಟಾರೆಯಾಗಿ 1,58,063 ಮಂದಿ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ. ಇನ್ನು ವಿಶ್ವದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 11,74,24,768 ಆಗಿದ್ದು ಒಟ್ಟು 26,08,231 ಜನ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ತಾನೇ ಸಿದ್ಧಪಡಿಸಿದ ಕೊವಿಡ್ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ; ಅಮೇರಿಕಾ ಒತ್ತಡವೋ, ಚೀನಾದ್ದೋ?
ಪಾಕ್ ಕೈಹಿಡಿದ ಭಾರತ: ಆತ್ಮನಿರ್ಭರ್ ಕೊರೊನಾ ಲಸಿಕೆ ಇದೀಗ ಪಾಕಿಸ್ತಾನಕ್ಕೂ ಪೂರೈಕೆ!