ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಕೊವಿಡ್-19 ಲಸಿಕೆ ತಾಲೀಮು ಅಭಿಯಾನ ಶುರುವಾಗಿದ್ದು, ಆರೋಗ್ಯ ಸಚಿವ ಹರ್ಷವರ್ಧನ್ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಹರ್ಷವರ್ಧನ್, ಇಂದಿನಿಂದ ದೇಶಾದ್ಯಂತ ಕೊರೊನಾ ಲಸಿಕೆ ಪ್ರಾಯೋಗಿಕ ಅಭಿಯಾನ ಶುರುವಾಗಿದೆ. ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ನಡೆಸಲಾದ ಲಸಿಕೆ ಪ್ರಯೋಗ ಅಭಿಯಾನದ ನಂತರ ತಜ್ಞರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವರು ನೀಡಿರುವ ಮಾಹಿತಿ, ವರದಿಯನ್ನೊಳಗೊಂಡ ಹೊಸ ಮಾರ್ಗಸೂಚಿಯಂತೆ ಇದೀಗ ದೇಶಾದ್ಯಂತ ಕೊವಿಡ್-19 ಲಸಿಕೆಯ ಡ್ರೈ ರನ್ ಶುರು ಮಾಡಲಾಗಿದೆ. ದೆಹಲಿಯಲ್ಲಿ ಮಾತ್ರವಲ್ಲ, ದೇಶಾದ್ಯಂತ ಎಲ್ಲರಿಗೂ ಉಚಿತವಾಗಿಯೇ ಕೊರೊನಾ ಲಸಿಕೆ ನೀಡುತ್ತೇವೆ ಎಂದು ತಿಳಿಸಿದರು.
ಈ ಪ್ರಯೋಗ ಹಂತದ ಲಸಿಕೆ ಅಭಿಯಾನದಲ್ಲಿ ನಿಜವಾದ ಲಸಿಕೆಯನ್ನು ಜನರಿಗೆ ಕೊಡುವುದಿಲ್ಲ. ಆದರೆ ಉಳಿದೆಲ್ಲ ಪ್ರಕ್ರಿಯೆಗಳೂ ಹಂತಹಂತವಾಗಿ ನಡೆಯುತ್ತವೆ. ಇನ್ನು ಲಸಿಕೆ ಕುರಿತಾದ ವದಂತಿಗಳಿಗೆ ಜನರು ಕಿವಿಗೊಡಬಾರದು. ಲಸಿಕೆ ಫಲ ಕೊಡುವುದು ಎಷ್ಟು ಮುಖ್ಯವೋ.. ಅಷ್ಟೇ ಜನರ ಆರೋಗ್ಯವೂ ನಮ್ಮ ಸರ್ಕಾರಕ್ಕೆ ಮಖ್ಯ. ಪೋಲಿಯೋ ಲಸಿಕೆ ಬಂದಾಗಲೂ ಹಲವು ವದಂತಿಗಳು ಹಬ್ಬಿದ್ದವು. ಆದರೆ ಜನರು ಅದನ್ನೆಲ್ಲ ನಂಬದೆ ವ್ಯಾಕ್ಸಿನ್ ತೆಗೆದುಕೊಂಡ ಪರಿಣಾಮ ಇಂದು ದೇಶ ಪೋಲಿಯೋ ಮುಕ್ತವಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಲಸಿಕೆ ಅಭಿಯಾನದ ಪೂರ್ವಸಿದ್ಧತೆ ಮೊದಲ ಹಂತದಲ್ಲಿ ಡಿ. 28 -29ರಂದು ಆಂಧ್ರ ಪ್ರದೇಶ, ಆಸ್ಸಾಂ, ಗುಜರಾತ್ ಮತ್ತು ಪಂಜಾಬ್ಗಳಲ್ಲಿ ನಡೆದಿತ್ತು. ಪ್ರತಿ ರಾಜ್ಯದ ಎರಡು ಜಿಲ್ಲೆಗಳಿಂದ, ಒಟ್ಟು 25 ಜನರನ್ನು ಒಳಗೊಂಡು ಪ್ರಯೋಗ ಮಾಡಲಾಗಿತ್ತು. ಈಗ ದೇಶಾದ್ಯಂತ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಆಯ್ದ ಪ್ರದೇಶಗಳಲ್ಲಿ ಲಸಿಕೆ ತಾಲೀಮು ಅಭಿಯಾನ ಶುರುವಾಗಿದೆ. ದೆಹಲಿಯಲ್ಲಿ ಮೂರು ಕಡೆಗಳಲ್ಲಿ ವ್ಯಾಕ್ಸಿನೇಶನ್ ನಡೆಸಲಾಗುತ್ತಿದೆ.
ಸಿಹಿ ಸುದ್ದಿ: ಭಾರತದಲ್ಲಿ ಕೊವಿಶೀಲ್ಡ್ ವ್ಯಾಕ್ಸಿನ್ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದ DCGI ..!
Published On - 1:01 pm, Sat, 2 January 21