
ಚೆನ್ನೈ, ಅಕ್ಟೋಬರ್ 26: ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಆರಂಭವಾದಾಗಿನಿಂದಲೂ ಭಾರಿ ಮಳೆ ಮತ್ತು ಸಿಡಿಲಿನ ಆರ್ಭಟ ಮುಂದುವರಿದಿದೆ. ಸಿಡಿಲು ಬಡಿದು ರಾಜ್ಯದ ವಿವಿಧ ಭಾಗಗಳಲ್ಲಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶವನ್ನು ಸ್ಥಳೀಯ ಆಡಳಿತ ತಾತ್ಕಾಲಿಕವಾಗಿ ನಿಷೇಧಿಸಿದೆ.
ಸಿಡಿಲು ಬಡಿದು 14 ಮಂದಿ ಮೃತಪಟ್ಟಿರುವುದನ್ನು ತಮಿಳುನಾಡಿನ ಕಂದಾಯ ಸಚಿವ ಕೆ.ಎ. ಸೆಂಗೋಟ್ಟೈಯನ್ ದೃಢಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ದಿನವೊಂದರಲ್ಲೇ 35 ಮಂದಿ ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸಚಿವರು ತಳ್ಳಿಹಾಕಿದ್ದು, ಇತರ ಸಾವುಗಳ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆಂಧ್ರ, ಒಡಿಶಾದಲ್ಲಿ ಅ. 28ಕ್ಕೆ ಚಂಡಮಾರುತ ಅಬ್ಬರ; ಕರ್ನಾಟಕದಲ್ಲೂ ಬಿರುಗಾಳಿ ಸಹಿತ ಮಳೆಯ ಅಲರ್ಟ್
ನೀಲಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 62 ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಅಧಿಕಾರಿಗಳು ತೆರವುಗೊಳಿಸಿದ್ದಾರೆ. ರಸ್ತೆಗೆ ಬಂಡೆಕಲ್ಲು ಬಿದ್ದು ಬಸ್ ಚಾಲಕರೊಬ್ಬರು ಮೃತಪಟ್ಟಿದ್ದು, ಅವರ ಕುಟುಂಬಕ್ಕೂ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಮಳೆ ಹಾಗೂ ಭೂಕುಸಿತದ ಭೀತಿಯ ಹಿನ್ನೆಲೆಯಲ್ಲಿ ನೀಲಗಿರಿ (ಊಟಿ), ಕೊಡೈಕೆನಾಲ್ ಮತ್ತು ಯೆರ್ಕಾಡ್ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ. ಸ್ಥಳೀಯ ನಿವಾಸಿಗಳು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಜಿಲ್ಲಾಧಿಕಾರಿಗಳ ಪಾಸ್ ಪಡೆದು ಪ್ರಯಾಣಿಸಲು ಅನುಮತಿಸಲಾಗಿದೆ.
ಇದನ್ನೂ ಓದಿ: Karnataka Weather Forecast: ತಗ್ಗಿದ ಮಳೆ ಅಬ್ಬರ, ಒಣ ಹವೆ-ಚಳಿಯ ಮುನ್ಸೂಚನೆ
ತಮಿಳುನಾಡಿನ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಲ್ಲಿ ಮುಂಬರುವ 48 ಗಂಟೆಗಳ ಕಾಲ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ನದಿ ತೀರ ಹಾಗೂ ತಗ್ಗು ಪ್ರದೇಶಗಳ ಜನರು ಜಾಗರೂಕರಾಗಿರಲು ಮತ್ತು ಅಗತ್ಯವಿಲ್ಲದೆ ಮನೆಯಿಂದ ಹೊರಬಾರದಂತೆ ಸರ್ಕಾರ ಮನವಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ