ದೆಹಲಿ: ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ (Amit Shah) ತಮ್ಮ ಗಟ್ಟಿಯಾದ ಧ್ವನಿ ಕೋಪವನ್ನು ಪ್ರತಿಬಿಂಬಿಸುವುದಿಲ್ಲ. ಇದು ತಯಾರಿಕೆಯಲ್ಲಿನ ದೋಷ ( manufacturing defect) ಎಂದು ಹೇಳಿದಾಗ ಸದನದಲ್ಲಿ ನಗುವೋ ನಗು. ಯಾವುದಕ್ಕೂ ನಾನು ಕೋಪಗೊಳ್ಳುವುದಿಲ್ಲ ಎಂದು ಶಾ ಹೇಳಿದರು. ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ 2022(Criminal Procedure (Identification) Bill 2022) ಅನ್ನು ಸೋಮವಾರ ಸದನದಲ್ಲಿ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದ ಅಮಿತ್ ಶಾ, ಅಪರಾಧದ ತನಿಖೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಮಾಡಲು ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಈ ಮಸೂದೆ ಹೊಂದಿದೆ ಎಂದು ಹೇಳಿದರು. ಖಾಸಗಿತನದ ಹಕ್ಕು ಸೇರಿದಂತೆ ಮಸೂದೆಯ ಬಗ್ಗೆ ವಿರೋಧ ಪಕ್ಷದ ಸದಸ್ಯರ ಆತಂಕವನ್ನು ನಿವಾರಿಸಲು ಅವರು ಪ್ರಯತ್ನಿಸಿದರು. ಪ್ರತಿಪಕ್ಷ ಸದಸ್ಯರು ಟೀಕೆ ಮಾಡಿದಾಗ ಅಮಿತ್ ಶಾ ಅವರು “ದಾದಾ” ಹೇಳಿದ ವಿಷಯಕ್ಕೆ ಪ್ರತಿಕ್ರಿಯಿಸುವುದಾಗಿ ಹೇಳಿದರು. ದಾದಾಗೆ ಸಚಿವರು ಕೋಪದ ಸ್ವರದಲ್ಲಿ ಪ್ರತಿಕ್ರಿಯಿಸುತ್ತಾರೆ ಎಂದು ತೃಣಮೂಲ ಕಾಂಗ್ರೆಸ್ ಸದಸ್ಯರೊಬ್ಬರು ಲಘು ಧಾಟಿಯಲ್ಲಿ ವ್ಯಂಗ್ಯವಾಡಿದಾಗ, ಸಚಿವರು ತಮ್ಮ ಉತ್ತರದಿಂದ ಎಲ್ಲರನ್ನೂ ನಗುವಂತೆ ಮಾಡಿದರು. “ನಾನು ಯಾವತ್ತೂ ಯಾರನ್ನೂ ಬೈಯುವುದಿಲ್ಲ . ನನ್ನ ಧ್ವನಿ ಸ್ವಲ್ಪ ಗಟ್ಟಿಯಾಗಿದೆ. ಇದು ನನ್ನ ತಯಾರಿಕೆಯ ದೋಷವಾಗಿದೆ. ನಾನು ಕೋಪಗೊಳ್ಳುವುದಿಲ್ಲ, ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಎಂದು ಅವರು ಹೇಳಿದರು.
ಸಂಸತ್ ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಿತು. ಮಸೂದೆ ಅಂಗೀಕಾರದ ವೇಳೆ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಚೌಧರಿ ಅವರಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ನಾವು ಏನು ಮಾಡುತ್ತಿದ್ದೇವೆ ಎಂದು ನೀವು ಭಾವಿಸುತ್ತೀರಿ. ನಾವು ದೇಶಕ್ಕಾಗಿ ನಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ” ಎಂದು ಹೇಳಿದ್ದರು.
“ಅಪರಾಧದ ತನಿಖೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ತ್ವರಿತಗೊಳಿಸಲು” ಅಂತಹ ಅಳತೆಗಳನ್ನು ನೀಡಬೇಕಾದ ವ್ಯಕ್ತಿಗಳ ಸೂಕ್ತವಾದ ದೇಹದ ಅಳತೆಗಳನ್ನು ತೆಗೆದುಕೊಳ್ಳಲು ಕಾನೂನು ಅನುಮತಿಯನ್ನು ಒದಗಿಸುವ ಮಸೂದೆಯನ್ನು ಸದನವು ನಂತರ ಚರ್ಚೆಗೆ ತೆಗೆದುಕೊಂಡಿತು.
ಬೆರಳಿನ ಗುರುತುಗಳು, ಪಾಮ್-ಪ್ರಿಂಟ್ ಮತ್ತು ಫೂಟ್ ಪ್ರಿಂಟ್, ಛಾಯಾಚಿತ್ರಗಳು, ಐರಿಸ್ ಮತ್ತು ರೆಟಿನಾ ಸ್ಕ್ಯಾನ್, ಭೌತಿಕ ಮತ್ತು ಜೈವಿಕ ಮಾದರಿಗಳು ಮತ್ತು ಅವುಗಳ ವಿಶ್ಲೇಷಣೆಯನ್ನು ಸೇರಿಸಲು “ಮಾಪನಗಳನ್ನು” ವ್ಯಾಖ್ಯಾನಿಸಲು ಮಸೂದೆಯು ಪ್ರಯತ್ನಿಸುತ್ತದೆ.
ಇದು ಮಾಪನಗಳ ದಾಖಲೆಯನ್ನು ಕೆಲೆ ಹಾಕಲು, ಸಂಗ್ರಹಿಸಲು ಮತ್ತು ಸಂರಕ್ಷಿಸಲು ಮತ್ತು ದಾಖಲೆಗಳ ಹಂಚಿಕೆ, ಪ್ರಸರಣ, ನಾಶ ಮತ್ತು ವಿಲೇವಾರಿಗಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗೆ ಅಧಿಕಾರ ನೀಡಲು ಪ್ರಯತ್ನಿಸುತ್ತದೆ.
ಯಾವುದೇ ವ್ಯಕ್ತಿಗೆ ಅಳತೆಗಳನ್ನು ನೀಡುವಂತೆ ನಿರ್ದೇಶಿಸಲು ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡಲು ಮತ್ತು ಅಳತೆಗಳನ್ನು ನೀಡಲು ವಿರೋಧಿಸುವ ಅಥವಾ ನಿರಾಕರಿಸುವ ಯಾವುದೇ ವ್ಯಕ್ತಿಯ ಅಳತೆಗಳನ್ನು ತೆಗೆದುಕೊಳ್ಳಲು ಪೊಲೀಸ್ ಅಥವಾ ಜೈಲು ಅಧಿಕಾರಿಗೆ ಅಧಿಕಾರ ನೀಡಲು ಮಸೂದೆಯು ಪ್ರಯತ್ನಿಸುತ್ತದೆ.
ಲೋಕಸಭೆಯಲ್ಲಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರು ಮಸೂದೆಯನ್ನು ಮಂಡಿಸಿದರು.
ಇದನ್ನೂ ಓದಿ: ನವರಾತ್ರಿ ವೇಳೆ ದಕ್ಷಿಣ ದೆಹಲಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆಯುಕ್ತರಿಗೆ ಪತ್ರ ಬರೆದ ಮೇಯರ್
Published On - 10:35 pm, Mon, 4 April 22