ಮುಂಬೈ: ಬಿಜೆಪಿಯ ದೇವೇಂದ್ರ ಫಡ್ನವೀಸ್ 2ನೇ ಬಾರಿಗೆ ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ . ಎನ್.ಸಿಪಿ ಪಕ್ಷದ ಅಜಿತ್ ಪವಾರ್ ಇದಕ್ಕೆ ಬೆಂಬಲ ನೀಡಿದ್ದಾರೆ. ಹೀಗೆ ಬಿಜೆಪಿಯ ದೇವೇಂದ್ರ ಫಡ್ನವೀಸ್ 2ನೇ ಬಾರಿಗೆ ಸಿಎಂ ಆಗಲು ಸಹಾಯ ಮಾಡಿದ್ದು ಶರದ್ ಪವಾರ್ ಕುಟುಂಬದೊಳಗಿನ ಕಲಹ. ಈ ಕಲಹದಿಂದಲೇ ಅಜಿತ್ ಪವಾರ್ ತಮ್ಮ ಚಿಕ್ಕಪ್ಪನ ವಿರುದ್ದವೇ ಬಂಡಾಯ ಸಾರಿದ್ದಾರೆ.
ಪವಾರ್ ಕುಟುಂಬದೊಳಗೆ ಪಕ್ಷದ ಮೇಲಿನ ಹಿಡಿತಕ್ಕಾಗಿ ಕಲಹ:
ಮಹಾರಾಷ್ಟ್ರದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ 2ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಸಹಾಯ ಮಾಡಿದ್ದು ಶರದ್ ಪವಾರ್ ಕುಟುಂಬದೊಳಗಿನ ಕಲಹ. ಶರದ್ ಪವಾರಗೆ ಅಜಿತ್ ಪವಾರ್ ಸ್ವಂತ ಅಣ್ಣನ ಮಗ. ತನ್ನ ಚಿಕ್ಕಪ್ಪನ ವಿರುದ್ಧವೇ ಅಜಿತ್ ಪವಾರ್ ಈಗ ಬಂಡಾಯ ಎದ್ದಿದ್ದಾರೆ. ಅಜಿತ್ ಪವಾರ್ ಹೀಗೆ ಬಂಡಾಯವೇಳಲು ಕಾರಣವಾಗಿದ್ದು ಕೌಟುಂಬಿಕ ಕಲಹ.
ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆ ಸಂಬಂಧ ಶರದ್ ಪವಾರ್ ಹಾಗೂ ಅಜಿತ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಭಿನ್ನಾಭಿಪ್ರಾಯವೂ ಬೂದಿ ಮುಚ್ಚಿದ ಕೆಂಡದಂತಿತ್ತು. ಈಗ ಅದು ಸ್ಪೋಟಗೊಂಡಿದೆ. ಟಿಕೆಟ್ ಹಂಚಿಕೆಯ ಭಿನ್ನಾಭಿಪ್ರಾಯ ಮಾತ್ರವಲ್ಲದೇ, ಅಜಿತ್ ಪವಾರ್ ತಮ್ಮ ಪುತ್ರ ಪಾರ್ಥಗೆ ಮಾಲ್ವಲ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೇಳಿದ್ರು. ಆದರೆ, ಟಿಕೆಟ್ ನೀಡಲು ಶರದ್ ಪವಾರ್ ಹಿಂದೇಟು ಹಾಕಿದ್ದರು. ಆದರೂ ಒತ್ತಡಕ್ಕೆ ಮಣಿದು ಟಿಕೆಟ್ ನೀಡಿದ್ರು.
ಆದರೇ ಪಾರ್ಥ ಪವಾರ್ ಚುನಾವಣೆಯಲ್ಲಿ ಬಾರಿ ಅಂತರದಿಂದ ಸೋಲನ್ನಪ್ಪಿದ್ದಾರೆ. ಮತ್ತೊಂದೆಡೆ ಶರದ್ ಪವಾರ್ ಅವರ ಮತ್ತೊಬ್ಬ ಸೋದರನ ಮಗ ರೋಹಿತ್ ಪವಾರ್, ಅಸೆಂಬ್ಲಿ ಚುನಾವಣೆಯಲ್ಲಿ ಕರಜತ್ ಜಮಖೇಢ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಇದು ಅಜಿತ್ ಪವಾರ್ಗೆ ಅಭದ್ರತೆಯನ್ನು ಹೆಚ್ಚಿಸಿತು.
ಹಗರಣಗಳಿಂದ ಬಚಾವ್ ಆಗಲು ಬಿಜೆಪಿಗೆ ಅಜಿತ್ ಬೆಂಬಲ:
ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಜೊತೆಗೆ ಎನ್.ಸಿಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾಗ ಇದೇ ಅಜಿತ್ ಪವಾರ್ ಡಿಸಿಎಂ ಆಗಿದ್ದರು . ಆಗ ಮಹಾರಾಷ್ಟ್ರ ಸರ್ಕಾರದಲ್ಲಿ ಅಜಿತ್ ಪವಾರ್ ನೀರಾವರಿ ಖಾತೆ ಮಂತ್ರಿಯೂ ಆಗಿದ್ದರು. ಈ ವೇಳೆಯಲ್ಲೇ ನೀರಾವರಿ ಕ್ಷೇತ್ರದಲ್ಲಿ ಹಗರಣ ನಡೆಸಿದ ಆರೋಪವೂ ಇದೆ.
ಇದರ ಬಗ್ಗೆ ದೇವೇಂದ್ರ ಫಡ್ನವೀಸ್ ಎಸಿಬಿ ತನಿಖೆಗೂ ಆದೇಶ ನೀಡಿದ್ದಾರೆ. ಜತೆಗೇ ಅಜಿತ್ ಪವಾರ್ ವಿರುದ್ದ ಮಹಾರಾಷ್ಟ್ರ ಸಹಕಾರ ಬ್ಯಾಂಕ್ ನಲ್ಲಿ 25 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆಸಿದ ಆರೋಪವೂ ಇದೆ. ಇದರ ಬಗ್ಗೆ ಇ.ಡಿ. ಕೇಸ್ ದಾಖಲಿಸಿಕೊಂಡಿದೆ. ಹೀಗಾಗಿ ಎಸಿಬಿ ತನಿಖೆ ಹಾಗೂ ಇ.ಡಿ. ತನಿಖೆಯಿಂದ ತಪ್ಪಿಸಿಕೊಳ್ಳಲು ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ನೀಡಿ ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿದೆ.
ಶರದ್ ಪವಾರ್ ಕುಟುಂಬದೊಳಗಿನ ಕಲಹ ಈಗ ಬಯಲಿಗೆ ಬಂದಿದೆ ಅನ್ನೋ ಮಾತುನ್ನು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಶಿವಸೇನೆ, ಎನ್.ಸಿಪಿ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಒಪ್ಪಿಗೆ ನೀಡದೇ ಇದ್ದರೇ, ಎನ್.ಸಿಪಿಯ ಒಂದು ಬಣವೇ ಬಿಜೆಪಿ ಜೊತೆಗೆ ಹೋಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನಾಯಕರು ಮೊದಲೇ ಸೋನಿಯಾಗಾಂಧಿಗೆ ಎಚ್ಚರಿಸಿದ್ದರು.
ಜತೆಗೇ ಬಿಜೆಪಿ ನಾಯಕರು ಪ್ರಪುಲ್ ಪಟೇಲ್ ಮೂಲಕ ಶರದ್ ಪವಾರ್ ಮನವೊಲಿಸಿ ಎನ್.ಸಿಪಿ ಬೆಂಬಲ ಪಡೆಯುವ ಪ್ರಯತ್ನ ಮಾಡಿದ್ದರು. ಬಿಜೆಪಿ ಬೆಂಬಲಿಸಿದರೇ, ಶರದ್ ಪವಾರ್ ಹಾಗೂ ಪ್ರಪುಲ್ ಪಟೇಲ್ ವಿರುದ್ಧದ ಇ.ಡಿ. ಕೇಸ್ ನಿಂದ ಬಚಾವ್ ಮಾಡುವ ಭರವಸೆ ನೀಡಿದ್ರು. ಹೀಗಾಗಿಯೇ ಸೋನಿಯಾ ಗಾಂಧಿ ಕೂಡ ಶಿವಸೇನೆ ಜೊತೆಗಿನ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ, ಕೊನೆಗೂ ಸೋನಿಯಾಗಾಂಧಿಗೆ ಇದ್ದ ಭಯ ನಿಜವಾಗಿದೆ. ಮೈತ್ರಿಗೆ ಒಪ್ಪಿಗೆ ನೀಡದೇ ಇದ್ದರೇ, ಕರ್ನಾಟಕ ಮಾದರಿಯಲ್ಲಿ ತಮ್ಮ ಶಾಸಕರನ್ನು ಬಿಜೆಪಿ ತನ್ನಡೆಗೆ ಸೆಳೆದುಕೊಳ್ಳಬಹುದು ಅನ್ನೋ ಸೋನಿಯಾಗಾಂಧಿ ಭಯ ಈಗ ನಿಜವಾಗಿದೆ.
Published On - 8:02 am, Sun, 24 November 19