ಶಿಕ್ಷಣ, ಸಂಶೋಧನೆ ಕ್ಷೇತ್ರದಲ್ಲಿ ಧಾರವಾಡ-ಮದ್ರಾಸ್ ಐಐಟಿ ನಡುವೆ ಒಪ್ಪಂದ; ಸಚಿವ ಪ್ರಲ್ಹಾದ್ ಜೋಶಿ ಎದುರಲ್ಲೇ ಸಹಿ

ಕೇಂದ್ರ ಶಿಕ್ಷಣ ಸಚಿವರಾದ ಪ್ರಲ್ಹಾದ್ ಜೋಶಿ ಇಂದು ತಮಿಳುನಾಡಿನ ಪ್ರಸಿದ್ಧ ಐಐಟಿ ಮದ್ರಾಸ್ ಕ್ಯಾಂಪಸ್‌ಗೆ ಭೇಟಿ ನೀಡಿದ್ದರು. ಧಾರವಾಡ ಐಐಟಿ ಮತ್ತು ಐಐಟಿ ಮದ್ರಾಸ್ ನಡುವೆ ಶಿಕ್ಷಣ, ಸಂಶೋಧನೆ ಹಾಗೂ ಉದ್ಯಮಶೀಲತೆ ಕ್ಷೇತ್ರದ ಐತಿಹಾಸಿಕ ಸಹಯೋಗದ ಒಪ್ಪಂದದ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ತೆರಳಿದ್ದ ಸಚಿವ ಪ್ರಲ್ಹಾದ್ ಜೋಶಿ ಅಲ್ಲಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ಐಐಟಿ ಮದ್ರಾಸ್ ಮತ್ತು ಧಾರವಾಡದ ಐಐಟಿ ನಡುವೆ ಒಪ್ಪಂದ ಏರ್ಪಟ್ಟಿದೆ. ಸಚಿವ ಪ್ರಲ್ಹಾದ್ ಜೋಶಿಯವರ ಎದುರಲ್ಲೇ ಎರಡೂ ಐಐಟಿಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಶಿಕ್ಷಣ, ಸಂಶೋಧನೆ ಕ್ಷೇತ್ರದಲ್ಲಿ ಧಾರವಾಡ-ಮದ್ರಾಸ್ ಐಐಟಿ ನಡುವೆ ಒಪ್ಪಂದ; ಸಚಿವ ಪ್ರಲ್ಹಾದ್ ಜೋಶಿ ಎದುರಲ್ಲೇ ಸಹಿ
ಪ್ರಲ್ಹಾದ್ ಜೋಶಿ
Image Credit source: TV9

Updated on: Oct 08, 2026 | 6:02 PM

ಮುಖ್ಯಾಂಶಗಳು

  • ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಸಮ್ಮುಖದಲ್ಲಿ ಉಭಯ ಸಂಸ್ಥೆಗಳು ಒಪ್ಪಂದಕ್ಕೆ ಸಹಿ
  • ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ
  • ಜಾಗತಿಕ ನಾಯಕತ್ವದತ್ತ ಭಾರತದ ಪಯಣಕ್ಕೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಆಶಿಸಿದ ಜೋಶಿ

ಚೆನ್ನೈ, ಅಕ್ಟೋಬರ್ 8: ಶಿಕ್ಷಣ, ಸಂಶೋಧನೆ ಮತ್ತು ಉದ್ಯಮಶೀಲತಾ ಕ್ಷೇತ್ರಗಳ ಸಹಯೋಗಕ್ಕೆ ಐಐಟಿ ಮದ್ರಾಸ್ ಮತ್ತು ಕೇಂದ್ರ ಶಿಕ್ಷಣ ಸಚಿವರ ತವರು ಕ್ಷೇತ್ರ ಧಾರವಾಡದ ಐಐಟಿ ನಡುವೆ ಒಪ್ಪಂದ ಏರ್ಪಟ್ಟಿದ್ದು, ಉಭಯ ಸಂಸ್ಥೆಗಳು ಇಂದು ಸಚಿವ ಪ್ರಲ್ಹಾದ್ ಜೋಶಿಯವರ ಸಮ್ಮುಖದಲ್ಲೇ ಒಪ್ಪಂದಕ್ಕೆ ಸಹಿ ಹಾಕಿವೆ. ಈ ವೇಳೆ ಎರೆಡೂ ಐಐಟಿ ಸಂಸ್ಥೆಗಳಿಗೆ ಶುಭ ಕೋರಿದ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, “ಮದ್ರಾಸ್ ಮತ್ತು ಧಾರವಾಡ ಐಐಟಿಗಳ ಈ ತಿಳಿವಳಿಕೆ ಒಪ್ಪಂದವು ಶಿಕ್ಷಣ, ಸಂಶೋಧನೆ, ಹೊಸ ಹೊಸ ಯೋಜನೆಗಳ ಹಂಚಿಕೆಯು ಯಶಸ್ಸಿಗೆ ದಾರಿ ಮಾಡಿಕೊಡಲಿ ಎಂದು ಆಶಿಸಿದರು.

ಐಐಟಿ ಮದ್ರಾಸ್ ಮತ್ತು ಐಐಟಿ ಧಾರವಾಡ ನಾಯಕತ್ವದ ಈ ಪಾಲುದಾರಿಕೆ ಐಐಟಿ ವ್ಯವಸ್ಥೆಯೊಳಗಿನ ಸಹಯೋಗಕ್ಕೆ ಮಾದರಿಯಾಗಬೇಕು ಮತ್ತು ಜ್ಞಾನ, ಆವಿಷ್ಕಾರ, ನಾವೀನ್ಯತೆಯಲ್ಲಿ ಜಾಗತಿಕ ನಾಯಕನಾಗುವ ಭಾರತದ ಪಯಣಕ್ಕೆ ವಿಶಿಷ್ಠ ಕೊಡುಗೆ ನೀಡಬೇಕೆಂದು ಕರೆ ನೀಡಿದರು.

ಐಐಟಿ ಮದ್ರಾಸ್ ಮತ್ತು ಐಐಟಿ ಧಾರವಾಡದ ನಡುವೆ ಏರ್ಪಟ್ಟ ಈ ಒಪ್ಪಂದ ಸಂತೋಷದ ಸಂಗತಿ ಎಂದ ಸಚಿವರು, ಧಾರವಾಡ ನನ್ನ ಲೋಕಸಭಾ ಕ್ಷೇತ್ರವೇ ಆಗಿದ್ದರಿಂದ ನನಗಿದು ಮಹತ್ವದ್ದಾಗಿದೆ ಎಂದು ಹೇಳಿದರು.

ಧಾರವಾಡ ಐಐಟಿಯು ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕವಾಗಿ ಅನನ್ಯ ಸೇವೆಯಲ್ಲಿ ತೊಡಗಿದೆ. ಇದು ನಮ್ಮ ಹೊಸ ಐಐಟಿಗಳಲ್ಲಿ ಒಂದಾಗಿದ್ದರೂ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೇಶದ ಸ್ವಾತಂತ್ರ್ಯಕ್ಕೆ ಹೊಸ ದಿಕ್ಕು ತೋರಿದ ಗಾಂಧೀಜಿ, ಶಾಸ್ತ್ರೀಜಿ ಆದರ್ಶ ನಮ್ಮೆಲ್ಲರಿಗೂ ಪ್ರೇರಣೆ: ಪ್ರಲ್ಹಾದ್ ಜೋಶಿ

ಐಐಟಿ ಮದ್ರಾಸ್‌ನಂತಹ ಅನುಭವಿ ಮತ್ತು ವಿಸ್ತಾರ ವ್ಯಾಪ್ತಿ ಹೊಂದಿರುವ ಸಂಸ್ಥೆಯೊಂದಿಗೆ ಧಾರವಾಡದ ಪಾಲುದಾರಿಕೆ ಶೈಕ್ಷಣಿಕ, ಸಂಶೋಧನೆ ಮತ್ತು ಉದ್ಯಮಶೀಲತಾ ಕ್ಷೇತ್ರಗಳಲ್ಲಿ ನಮ್ಮ ಉತ್ತರ ಕರ್ನಾಟಕವನ್ನು ಮತ್ತಷ್ಟು ಬಲಪಡಿಸುವಲ್ಲಿ ನೆರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮದ್ರಾಸ್ -ಧಾರವಾಡ ಐಐಟಿಗಳ ಒಪ್ಪಂದವು ಒಂದು ಆರಂಭವಷ್ಟೇ. ಇದರ ನಿಜವಾದ ಮೌಲ್ಯವು, ಇದರ ನಂತರ ಕೈಗೊಳ್ಳಲಾಗುವ ಚಟುವಟಿಕೆಗಳ ಮೂಲಕವೇ ನಿರ್ಧಾರವಾಗುತ್ತದೆ. ಹಾಗಾಗಿ ಈ ಪಾಲುದಾರಿಕೆಗೆ ಸ್ಪಷ್ಟ ಗುರಿಗಳನ್ನು ನಿಗದಿಪಡಿಸುವಂತೆ ಮತ್ತು ನಿರಂತರ ಸಾಂಸ್ಥಿಕ ಬೆಂಬಲ ನೀಡುವಂತೆ ಸಲಹೆ ನೀಡಿದರು.


ನಮ್ಮ ಐಐಟಿಗಳು ಭಾರತದ ಅತ್ಯಂತ ಪ್ರಬಲ ಜ್ಞಾನ ಕೇಂದ್ರಗಳಾಗಿವೆ. ಆದರೆ ಯಾವುದೇ ಐಐಟಿಗಳ ಸಾಮರ್ಥ್ಯವು ಕೇವಲ ಆಯಾ ಕ್ಯಾಂಪಸ್‌ಗಳಿಗೆ ಸೀಮಿತವಾಗಿರಬಾರದು ಎಂದು ಸಚಿವ ಪ್ರಲ್ಹಾದ್ ಜೋಶಿ ಸಲಹೆ ನೀಡಿದರು. ಜ್ಞಾನ ಹಂಚಿಕೊಂಡಷ್ಟು ವೃದ್ಧಿಸುತ್ತದೆ. ಸಾಮರ್ಥ್ಯಗಳನ್ನು ಸಂಯೋಜಿಸಿದಷ್ಟು ಹೆಚ್ಚಿನ ಸಂಶೋಧನೆಗಳಾಗುತ್ತವೆ. ಪ್ರತಿಯೊಂದು ಪಾಲುದಾರಿಕಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ನಾವೀನ್ಯತೆ ವೇಗ ಪಡೆಯುತ್ತದೆ ಎಂದರು.

ಮದ್ರಾಸ್-ಧಾರವಾಡ ಐಐಟಿಗಳ ಪಾಲುದಾರಿಕೆಯು ತಮ್ಮ ಪೂರಕ ಸಾಮರ್ಥ್ಯಗಳನ್ನು ಸಂಯೋಜಿಸಲು ಮತ್ತು ಮಹತ್ವಾಕಾಂಕ್ಷೆಯ ಜಂಟಿ ಸಂಶೋಧನೆಯನ್ನು ಕೈಗೊಳ್ಳಲು ಅನುವು ಮಾಡಿಕೊಡಬೇಕು. ಇದರಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವ ಮುಖ್ಯವಾಗಿದೆ ಎಂದರು.

ಇದನ್ನೂ ಓದಿ: ಸರ್​ನೇಮ್ ಕದಿಯಬಹುದು, ಸಂಸ್ಕಾರ ಕದಿಯೋಕಾಗಲ್ಲ: ರಾಹುಲ್ ವಿರುದ್ಧ ಸ್ಮೃತಿ, ಪ್ರಲ್ಹಾದ್ ಜೋಶಿ, ಗಜೇಂದ್ರ ಶೇಖಾವತ್ ಕಿಡಿ

ಅಧ್ಯಾಪಕರ ವಿನಿಮಯ, ವಿದ್ಯಾರ್ಥಿ ವಿನಿಮಯ ಹಾಗೂ ಪ್ರಯೋಗಾಲಯ, ಗ್ರಂಥಾಲಯ, ಸಂಶೋಧನಾ ಪರಿಕರಗಳು ಮತ್ತು ಇತರ ಸಾಂಸ್ಥಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ನಿಬಂಧನೆಯು ಈ ಸೌಲಭ್ಯಗಳನ್ನು ಎರಡೂ ಸಂಸ್ಥೆಗಳಲ್ಲಿ ಪೂರ್ಣ ಸಾಮರ್ಥ್ಯಕ್ಕೆ ಬಳಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದರು.

ಉಭಯ ಸಂಸ್ಥೆಗಳ ಶೈಕ್ಷಣಿಕ ಪ್ರಕಟಣೆಗಳು ಮತ್ತು ಸಂಶೋಧನಾ ವರದಿಗಳ ವಿನಿಮಯವು ಜ್ಞಾನ ಹಂಚಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಜಂಟಿ ಕಾರ್ಯಾಗಾರ, ವಿಚಾರ ಸಂಕಿರಣ, ಉಪನ್ಯಾಸ ಮತ್ತು ಸಮ್ಮೇಳನಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಾಮಾನ್ಯ ಆಸಕ್ತಿಗಳನ್ನು ಗುರುತಿಸಲು, ಹೊಸ ಆಲೋಚನೆಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದರು.

ಐಐಟಿ ಮದ್ರಾಸ್ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಬಲವಾದ ಪರಿಸರ ವ್ಯವಸ್ಥೆ ನಿರ್ಮಿಸಿದೆ. ಧಾರವಾಡ ಐಐಟಿ ಸಹ ಇದರ ಅನುಭವದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಪ್ರಾದೇಶಿಕವಾಗಿ ಕೊಡುಗೆ ನೀಡುವಾಗ ಪೇಟೆಂಟ್‌, ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು, ಉದ್ಯಮ ಪಾಲುದಾರಿಕೆಗಳು ಮತ್ತು ಸಾಮಾಜಿಕ ಪರಿಹಾರದತ್ತ ಹೊಸ ಹೊಸ ಆಲೋಚನೆಗಳ ಅಗತ್ಯವಿದೆ ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us