ಶಿವಸೇನೆ ಆಪ್ತರಿಗೆ ಸೇರಿದ 12 ಸ್ಥಳಗಳಲ್ಲಿ ಐಟಿ ದಾಳಿ; ಬಿಜೆಪಿ ವಿರುದ್ಧ ಆದಿತ್ಯ ಠಾಕ್ರೆ ಕಿಡಿ

| Updated By: Lakshmi Hegde

Updated on: Mar 08, 2022 | 6:45 PM

ಭಜರಂಗ್​ ಖರ್ಮಟೆಯವರನ್ನು ಈ ಹಿಂದೆ ಮಾಜಿ ಸಚಿವ ಅನಿಲ್​ ದೇಶ್​ಮುಖ್​ (ವಸೂಲಿ ಪ್ರಕರಣದಲ್ಲಿ ಇದೀಗ ಬಂಧಿತರಾಗಿರುವ)ಗೆ ಸಂಬಂಧಪಟ್ಟ ಪ್ರಕರಣದಲ್ಲೂ ಇ.ಡಿ.ವಿಚಾರಣೆಗೆ ಒಳಪಡಿಸಿತ್ತು.

ಶಿವಸೇನೆ ಆಪ್ತರಿಗೆ ಸೇರಿದ 12 ಸ್ಥಳಗಳಲ್ಲಿ ಐಟಿ ದಾಳಿ; ಬಿಜೆಪಿ ವಿರುದ್ಧ ಆದಿತ್ಯ ಠಾಕ್ರೆ ಕಿಡಿ
ಆದಿತ್ಯ ಠಾಕ್ರೆ
Follow us on

ಮಹಾರಾಷ್ಟ್ರದಲ್ಲಿ ಶಿವಸೇನೆ ಪ್ರಮುಖ ನಾಯಕರ ಆಪ್ತರಿಗೆ ಸಂಬಂಧಪಟ್ಟ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಇಂದು ದಾಳಿ ನಡೆಸಿದೆ. ರಾಹುಲ್ ಕನಾಲ್​, ಸದಾನಂದ್ ಕದಮ್​ ಮತ್ತು ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಜರಂಗ್ ಖರ್ಮಟೆಯವರಿಗೆ ಸೇರಿದ, ಮುಂಬೈ ಮತ್ತು ಪುಣೆಯಲ್ಲಿರುವ ಸ್ಥಳಗಳಲ್ಲಿ ಐಟಿ ರೈಡ್ ಆಗಿದೆ. ಇವರಲ್ಲಿ ರಾಹುಲ್ ಕನಾಲ್​, ಶಿವಸೇನೆ ಯುವ ನಾಯಕ, ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಸಚಿವ, ಸಿಎಂ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಯ ಆಪ್ತ ಸ್ನೇಹಿತ. ಇನ್ನು ಸದಾನಂದ್ ಕದಮ್​, ಶಿವಸೇನೆ ನಾಯಕ ರಾಮದಾಸ್​ ಕದಮ್​ ಅವರ ಸೋದರ ಮತ್ತು ಶಿವಸೇನೆ ನಾಯಕ, ಸಾರಿಗೆ ಸಚಿವ ಅನಿಲ್​ ಪರಬ್​​ರ ವ್ಯಾಪಾರ ಪಾಲುದಾರ. ಭಜರಂಗ್ ಖರ್ಮಟೆಯೂ ಕೂಡ ಅನಿಲ್ ಪರಬ್​​ ಅವರ ಆಪ್ತರು ಎನ್ನಲಾಗಿದೆ.

ಇವರಲ್ಲಿ ಭಜರಂಗ್​ ಖರ್ಮಟೆಯವರನ್ನು ಈ ಹಿಂದೆ ಮಾಜಿ ಸಚಿವ ಅನಿಲ್​ ದೇಶ್​ಮುಖ್​ (ವಸೂಲಿ ಪ್ರಕರಣದಲ್ಲಿ ಇದೀಗ ಬಂಧಿತರಾಗಿರುವ)ಗೆ ಸಂಬಂಧಪಟ್ಟ ಪ್ರಕರಣದಲ್ಲೂ ಇ.ಡಿ.ವಿಚಾರಣೆಗೆ ಒಳಪಡಿಸಿತ್ತು. ಮಹಾರಾಷ್ಟ್ರದ ಗೃಹ ಮತ್ತು ಸಾರಿಗೆ ಇಲಾಖೆಯಲ್ಲಿ ನಡೆದ ವರ್ಗಾವಣೆ, ನೇಮಕಾತಿಗೆ ಸಂಬಂಧಪಟ್ಟು ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗಿತ್ತು. ಇದೀಗ ಈ ಮೂವರಿಗೆ ಸೇರಿದ ಸ್ಥಳಗಳ ಮೇಲೆ ಐಟಿ ದಾಳಿಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಆದಿತ್ಯ ಠಾಕ್ರೆ, ಕೇಂದ್ರದ ತನಿಖಾದಳಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ, ಆಂಧ್ರಪ್ರದೇಶದಲ್ಲಿ ಆಗಿದ್ದೂ ಇದೇ. ಈಗ ಮಹಾರಾಷ್ಟ್ರದಲ್ಲೂ ಹೀಗೆ ರೇಡ್​ಗಳು ನಡೆಯುತ್ತಿವೆ. ಕೇಂದ್ರದ ತನಿಖಾ ದಳಗಳೆಲ್ಲ ಬಿಜೆಪಿಯ ಪ್ರಚಾರಕ್ಕೆ ಬಳಕೆಯಾಗುತ್ತಿವೆ. ಇದೆಲ್ಲ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ ಎಂದಿದ್ದಾರೆ. ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಶಿವಸೇನೆ ನಾಯಕ ಯಶ್ವಂತ್ ಜಾಧವ್​ ಅವರಿಗೆ ಸೇರಿದ ಸ್ಥಳಗಳಲ್ಲಿ ರೇಡ್ ಮಾಡಿತ್ತು. ಇವರಿಗೆ ಆಪ್ತರಾಗಿದ್ದ ಗುತ್ತಿಗೆದಾರರ ಮನೆ ಮೇಲೂ ದಾಳಿ ನಡೆದಿತ್ತು. ಅಂದಿನ ದಾಳಿ ಸಂದರ್ಭದಲ್ಲಿ ಯಶ್ವಂತ್ ಜಾಧವ್​ ಮತ್ತು ಅವರ ಕುಟುಂಬದವರ ಹೆಸರಿನಲ್ಲಿದ್ದ ಸುಮಾರು 130 ಕೋಟಿ ರೂಪಾಯಿ ಆಸ್ತಿಯನ್ನು ಅದು ಜಪ್ತಿ ಮಾಡಿತ್ತು.

ಇದನ್ನೂ ಓದಿ: David warner: ಕೊಹ್ಲಿಯಂತೆ ಮೈದಾನದಲ್ಲೇ ಡೇವಿಡ್ ವಾರ್ನರ್ ಸಖತ್ ಸ್ಟೆಪ್: ವಿಡಿಯೋ ವೈರಲ್

Published On - 6:41 pm, Tue, 8 March 22