ಜಗತ್ತಿನ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದ ಭಾರತ

ಕೇಂದ್ರ ಸರ್ಕಾರದ ತೈಲ, ಬಂದರು ಮತ್ತು ಜಲಮಾರ್ಗ ಸಚಿವಾಲಯ ಹೊರಡಿಸಿರುವ ಇತ್ತೀಚಿನ ‘ಬಿಮ್ಕೋ-ಐಸಿಎಸ್ ಸೆಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026’ರ ಪ್ರಕಾರ, ಜಾಗತಿಕ ಸಾಗರ ಕ್ಷೇತ್ರದಲ್ಲಿ ಭಾರತವು ಅತ್ಯಂತ ಪ್ರಮುಖ ಸಾಧನೆ ಮಾಡಿದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದೆ. 2015ರಲ್ಲಿ ಜಾಗತಿಕವಾಗಿ 5ನೇ ಸ್ಥಾನದಲ್ಲಿದ್ದ ಭಾರತ, ಕಳೆದ ಒಂದು ದಶಕದಲ್ಲಿ ಹಂತ-ಹಂತವಾಗಿ ಬೆಳೆದು 2026ರ ವೇಳೆಗೆ 2ನೇ ಸ್ಥಾನಕ್ಕೇರಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಹಡಗುಗಳಲ್ಲಿ 3,11,936 ಭಾರತೀಯ ನಾವಿಕರು ಸೇವೆ ಸಲ್ಲಿಸುತ್ತಿದ್ದಾರೆ.

ಜಗತ್ತಿನ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದ ಭಾರತ
India
Image Credit source: x

Updated on: Jul 28, 2026 | 8:19 PM

ನವದೆಹಲಿ, ಜುಲೈ 28: ಭಾರತವು ಜಾಗತಿಕ ಸಾಗರ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 2015ರಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದ್ದ ಭಾರತ, ಇದೀಗ 2026ರ ವೇಳೆಗೆ ವಿಶ್ವದ 2ನೇ ಅತಿ ದೊಡ್ಡ ನಾವಿಕರ ಸರಬರಾಜು ದೇಶವಾಗಿ ಹೊರಹೊಮ್ಮಿದೆ. ‘ಬಿಮ್ಕೋ-ಐಸಿಎಸ್ ಸೆಫೇರರ್ ವರ್ಕ್‌ಫೋರ್ಸ್ ರಿಪೋರ್ಟ್ 2026’ (BIMCO-ICS Seafarer Workforce Report 2026) ವರದಿಯ ಪ್ರಕಾರ, ಜಾಗತಿಕ ಹಡಗು ರವಾನೆ ಉದ್ಯಮಕ್ಕೆ ಭಾರತವು ಬರೋಬ್ಬರಿ 3,11,936 ನಾವಿಕ ವೃತ್ತಿಪರರನ್ನು ನೀಡುವ ಮೂಲಕ, ಜಾಗತಿಕ ಸಾಗರ ಕಾರ್ಮಿಕ ಶಕ್ತಿಯಲ್ಲಿ ಶೇ. 12.16ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಈ ಪಟ್ಟಿಯಲ್ಲಿ ಫಿಲಿಪೈನ್ಸ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ದೇಶ ಚೀನಾ, ರಷ್ಯಾ ಮತ್ತು ಇಂಡೋನೇಷ್ಯಾಗಳನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ.

2015ರಲ್ಲಿ ಭಾರತದ ಪಾಲು ಕೇವಲ ಶೇ. 5.2ರಷ್ಟಿತ್ತು (5ನೇ ಸ್ಥಾನ). 2021ರಲ್ಲಿ ಇದು ಶೇ. 6ಕ್ಕೆ ಏರಿಕೆಯಾಗಿತ್ತು. ಆದರೆ ಕಳೆದ ದಶಕದಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದ್ದು, ಶೇ. 12.16ರಷ್ಟು ಏರಿಕೆ ಕಾಣುವ ಮೂಲಕ ಭಾರತ ನಿರ್ಣಾಯಕ ಸಾಧನೆ ಮಾಡಿದೆ.

ವಿಶ್ವದ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು ಅಧಿಕಾರಿಗಳ ಪೈಕಿ ಭಾರತೀಯರು ಶೇ. 13.41ರಷ್ಟು ಪಾಲನ್ನು ಹೊಂದಿದ್ದಾರೆ. ಹಾಗೂ ರೇಟಿಂಗ್ಸ್ ವಿಭಾಗದಲ್ಲಿ ಶೇ. 11.29ರಷ್ಟು ಪಾಲು ಹೊಂದಿದ್ದಾರೆ.

ಇದನ್ನೂ ಓದಿ: ರಷ್ಯಾದ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ; ಭಾರತೀಯ ನಾವಿಕ ಸಾವಿಗೆ ಭಾರತ ಖಂಡನೆ

ಪ್ರಸ್ತುತ ವಿಶ್ವದಲ್ಲೇ 25.7 ಲಕ್ಷ ನಾವಿಕರ ಪೂರೈಕೆಯಿದ್ದು, 25.5 ಲಕ್ಷ ನಾವಿಕರ ಬೇಡಿಕೆಯಿದೆ. ಜಾಗತಿಕವಾಗಿ ಅರ್ಹ ಅಧಿಕಾರಿಗಳ ಅಭಾವವಿರುವುದರಿಂದ ಭಾರತೀಯ ನಾವಿಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ್ ಸೋನೋವಾಲ್ ಅವರು 2021ರಿಂದ ಕೈಗೊಂಡ ಮೂಲಸೌಕರ್ಯ ಹಾಗೂ ಶಾಸಕಾಂಗ ಸುಧಾರಣೆಗಳು ಈ ಸಾಧನೆಗೆ ಪ್ರಮುಖ ಕಾರಣವಾಗಿವೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನಾವಿಕರನ್ನು ನಿಯೋಜಿಸಬೇಡಿ; ಹಡಗು ಕಂಪನಿ ಮಾಲೀಕರಿಗೆ ಭಾರತ ಆದೇಶ

ಈ ವರದಿಯನ್ನು ಸ್ವಾಗತಿಸಿ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಸಾರ್ವತ್ರಿಕ ನಾಯಕತ್ವದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ನಾವು ಈಗ ‘ಮಿಷನ್ ಶೇ. 20’ ಎಂಬ ಮುಂದಿನ ರಾಷ್ಟ್ರೀಯ ಗುರಿಯನ್ನು ಹೊಂದಿದ್ದೇವೆ. ಜಾಗತಿಕವಾಗಿ ಮರ್ಚೆಂಟ್ ಹಡಗುಗಳಲ್ಲಿ ಸೇವೆ ಸಲ್ಲಿಸುವ ಪ್ರತಿ 5 ನಾವಿಕರಲ್ಲಿ ಒಬ್ಬರು ಭಾರತೀಯರಾಗಿರಬೇಕು ಎಂಬುದು ನಮ್ಮ ಆಶಯವಾಗಿದೆ. ಸಾಗರ ಶಿಕ್ಷಣದ ಸಾಮರ್ಥ್ಯವನ್ನು ವಿಸ್ತರಿಸುವ ಮೂಲಕ ಮತ್ತು ಡಿಜಿಟಲ್ ತಂತ್ರಜ್ಞಾನ ಬಳಸಿ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us