ನವದೆಹಲಿ, ಸೆಪ್ಟೆಂಬರ್ 19: ಖಾಲಿಸ್ತಾನೀ ಉಗ್ರನ ಹತ್ಯೆಯಲ್ಲಿ ಭಾರತದ ಕೈವಾಡ ಶಂಕಿಸಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು (Diplomat) ಕೆನಡಾ ಉಚ್ಚಾಟಿಸಿದ ಬೆನ್ನಲ್ಲೇ ಭಾರತವೂ ಪ್ರತಿಕ್ರಮ ಕೈಗೊಂಡಿದೆ. ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಉಚ್ಚಾಟಿಸಲಾಗಿದೆ. ಈ ಅಧಿಕಾರಿಗೆ ಐದು ದಿನದಲ್ಲಿ ತಮ್ಮ ದೇಶಕ್ಕೆ ಮರಳಬೇಕೆಂದು ಭಾರತ ಸರ್ಕಾರ ಸೂಚಿಸಿರುವುದು ತಿಳಿದುಬಂದಿದೆ. ಆದರೆ ಯಾವ ಅಧಿಕಾರಿ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ.
ಕೆನಡಾದ ರಾಜಭಾರ ಅಧಿಕಾರಿಯನ್ನು ಕರೆಸಿ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸುವ ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತ ವಿರೋಧಿ ಚಟುವಟಿಕೆಗಳಲ್ಲಿ ಮತ್ತು ಆಂತರಿಕ ವಿಚಾರಗಳಲ್ಲಿ ಕೆನಡಾದ ರಾಜತಾಂತ್ರಿಕ ಕೈವಾಡ ಹೆಚ್ಚುತ್ತಿರುವ ಬಗ್ಗೆ ಸರ್ಕಾರದೊಳಗೆ ಅಸಮಾಧಾನ ಇತ್ತು. ಅದರ ಪ್ರತೀಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
MEA says, “The High Commissioner of Canada to India was summoned today and informed about the decision of the Government of India to expel a senior Canadian diplomat based in India. The concerned diplomat has been asked to leave India within the next five days. The decision… pic.twitter.com/E3Uf9HVQLN
— ANI (@ANI) September 19, 2023
ಖಲಿಸ್ತಾನೀ ಉಗ್ರರ ವಿಚಾರದಲ್ಲಿ ಭಾರತ ಮತ್ತು ಕೆನಡಾ ಮಧ್ಯೆ ಸಂಬಂಧ ಇತ್ತೀಚಿನ ಕೆಲ ವರ್ಷಗಳಿಂದ ಹದಗೆಡುತ್ತಾ ಬರುತ್ತಿದೆ. ಪ್ರತ್ಯೇಕ ಪಂಜಾಬ್ ದೇಶಕ್ಕಾಗಿ ಹೋರಾಡುವ ಖಲಿಸ್ತಾನೀ ಉಗ್ರರಿಗೆ ಕೆನಡಾ ಭದ್ರ ನೆಲೆಯಾಗಿದೆ. ಕೆನಡಾ ಕೂಡ ಈ ಉಗ್ರರಿಗೆ ಕುಮ್ಮಕ್ಕು ಕೊಡುತ್ತಿರುವ ಆರೋಪ ಇದೆ. ಕೆನಡಾದಲ್ಲಿ ಖಾಲಿಸ್ತಾನೀ ಉಗ್ರರು ಹಿಂದೂಗಳ ಮೇಲೆ ಮತ್ತು ಹಿಂದೂಗಳ ಸ್ಥಳದ ಮೇಲೆ ದಾಳಿ ಮಾಡಿದ ಹಲವು ಘಟನೆಗಳು ನಡೆದಿವೆ. ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೆ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಕೆನಡಾ ಭಾರತೀಯ ರಾಯಭಾರ ಕಚೇರಿ ಅಧಿಕಾರಿಯನ್ನು ಉಚ್ಚಾಟಿಸುವ ಘಟನೆ ನಡೆದಿದೆ. ವರದಿ ಪ್ರಕಾರ ಭಾರತದ ರಾ ಗುಪ್ತಚರ ಸಂಸ್ಥೆಯ ಕೆನಡಾ ವಿಭಾಗದ ಮುಖ್ಯಸ್ಥರನ್ನು ಉಚ್ಚಾಟಿಸಿರುವ ಶಂಕೆ ಇದೆ.
ಇದನ್ನೂ ಓದಿ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ, ಭಾರತದ ಕೈವಾಡದ ಶಂಕೆ ಇದೆ ಎಂದ ಕೆನಡಾ, ಆರೋಪ ನಿರಾಕರಿಸಿದ ಭಾರತ
ಖಲಿಸ್ತಾನೀ ಟೈಗರ್ ಫೋರ್ಸ್ನ ಮುಖ್ಯಸ್ಥ ಹಾಗೂ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಕೆನಡಾ ವಿಭಾಗದ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಕೆನಡಾದ ಸರೇ ನಗರದ ಗುರುದ್ವಾರವೊಂದರಲ್ಲಿ ಆಗಂತುಕರು ಗುಂಡಿಟ್ಟು ಹತ್ಯೆಗೈದಿದ್ದರು. ಈ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂಬುದು ಕೆನಡಾದ ಶಂಕೆ. ಒಂದು ವೇಳೆ ಭಾರತದ ಪಾತ್ರ ಇದ್ದಲ್ಲಿ ಅದು ಕೆನಡಾದ ಸಾರ್ವಭೌಮತ್ವಕ್ಕೆ ಧಕ್ಕೆ ಮಾಡಿದಷ್ಟು ಗಂಭೀರವಾಗಿ ಪ್ರಕರಣವನ್ನ ಪರಿಗಣಿಸಲು ಕೆನಡಾ ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟದ ರೂವಾರಿ ಅರಾಫತ್ ಅಲಿ ಬಂಧನ ಪ್ರಕರಣ: ತನಿಖೆಯಲ್ಲಿ ಮತ್ತೊಂದು ವಿಧ್ವಂಸಕ ಮಾಹಿತಿ ಬಹಿರಂಗ
ನಿಜ್ಜರ್ ಹತ್ಯೆಗೂ ತನಗೂ ಸಂಬಂಧ ಇಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಕೆನಡಾದಲ್ಲಿ ಹಿಂದೂಗಳ ಮೇಲಿನ ದಾಳಿ ಘಟನೆಗಳಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಕೈವಾಡ ಇತ್ತು. ಮಾನವ ಕಳ್ಳಸಾಗಣೆ, ವ್ಯವಸ್ಥಿತ ಅಪರಾಧ ಇತ್ಯಾದಿಗಳಲ್ಲೂ ಆತ ಶಾಮೀಲಾಗಿದ್ದಾನೆ ಎಂದು ಭಾರತ ಪದೇ ಪದೇ ಕೆನಡಾವನ್ನು ಎಚ್ಚರಿಸುತ್ತಿತ್ತು. ಆದರೂ ಕೂಡ ಆತನನ್ನು ಕೆನಡಾ ಮುಕ್ತವಾಗಿ ಬಿಟ್ಟಿತ್ತು. ಭಾರತದ ಪಂಜಾಬ್ನ ಜಲಂಧರ್ನಲ್ಲಿ ಹಿಂದೂ ಅರ್ಚಕನ ಹತ್ಯೆ ಸಂಬಂಧ ನಿಜ್ಜರ್ ಕೈವಾಡ ಇದ್ದು ಆತನ ಸುಳಿವು ನೀಡಿದವರಿಗೆ 10 ಲಕ್ಷ ರೂ ಬಹುಮಾನ ಕೂಡ ಘೋಷಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Tue, 19 September 23