
ನವದೆಹಲಿ, ಅಕ್ಟೋಬರ್ 28: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆ ಮುಂದುವರೆದಿರುವಾಗ, ಭಾರತವು ಪಾಕಿಸ್ತಾನದ ಸಚಿವರೊಬ್ಬರಿಗೆ ಎಸ್ಸಿಒ ಶೃಂಗಸಭೆಗೆ ಆಹ್ವಾನ ನೀಡಿದೆ. ನವೆಂಬರ್ 20ರಿಂದ 22ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ನಾಗರಿಕ ಸಂವಾದ ವೇದಿಕೆಗೆ ಪಾಕಿಸ್ತಾನ ಸೇರಿದಂತೆ ಎಲ್ಲಾ 10 ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಲಾಗಿದೆ. ಆದರೆ, ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನವನ್ನು ಯಾರು ಪ್ರತಿನಿಧಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ.
ಎಸ್ಸಿಒಎಂದರೆ ಶಾಂಘೈ ಸಹಕಾರ ಸಂಘಟನೆ. ಇದು ಏಷ್ಯಾದ ಹಲವು ದೇಶಗಳು ಸದಸ್ಯರಾಗಿರುವ ಪ್ರಾದೇಶಿಕ ಸಂಘಟನೆಯಾಗಿದೆ. ಈ ಸಂಘಟನೆಯ ಮೂಲಕ ಸದಸ್ಯ ರಾಷ್ಟ್ರಗಳು ಭದ್ರತೆ, ಆರ್ಥಿಕ ಸಹಕಾರ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಚರ್ಚಿಸುತ್ತವೆ. ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ನಾಗರಿಕ ಸಂವಾದ ವೇದಿಕೆಯ ಮುಖ್ಯ ಉದ್ದೇಶ ವಿವಿಧ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದು. ಕಲೆ, ಸಾಹಿತ್ಯ, ಸಂಪ್ರದಾಯಗಳು ಮತ್ತು ಐತಿಹಾಸಿಕ ಸಂಪರ್ಕಗಳ ಮೂಲಕ ಜನರ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆ ಮುಂದುವರೆದಿರುವಾಗ, ಭಾರತವು ಪಾಕಿಸ್ತಾನದ ಸಚಿವರೊಬ್ಬರಿಗೆ ಎಸ್ಸಿಒ ಶೃಂಗಸಭೆಗೆ ಆಹ್ವಾನ ನೀಡಿದೆ. ನವೆಂಬರ್ 20 ರಿಂದ 22ರವರೆಗೆ ದೆಹಲಿಯಲ್ಲಿ ನಡೆಯಲಿರುವ ಶಾಂಗೈ ಸಹಕಾರ ಸಂಘಸಭೆಯ ಸಭೆಗೆ ಪಾಕಿಸ್ತಾನಕ್ಕೂ ಆಹ್ವಾನ ನೀಡಲಾಗಿದೆ.
ಭಾರತ, ಪಾಕಿಸ್ತಾನ, ಚೀನಾ, ರಷ್ಯಾ, ಇರಾನ್, ಕಜಕಿಸ್ತಾನ, ಕಿರ್ಗಿಸ್ತಾನ್, ತಜಿಕಿಸ್ತಾನ, ಉಜ್ಬೇಕಿಸ್ತಾನ ಮತ್ತು ಬೆಲಾರಸ್ ಸೇರಿದಂತೆ ಎಸ್ಸಿಒದ ಎಲ್ಲಾ 10 ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಇತರ ಪಾಲುದಾರ ರಾಷ್ಟ್ರಗಳ ಪ್ರತಿನಿಧಿಗಳೂ ಭಾಗವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ‘ಕಾಶ್ಮೀರಿಗಳಿಗೆ ಪಾಕಿಸ್ತಾನದ ರಕ್ಷಣೆ, ಕೇಂದ್ರ ಸರ್ಕಾರ ಮೌನ’: ತೀವ್ರ ವಿವಾದಕ್ಕೆ ಗುರಿಯಾದ ಫಾರೂಕ್ ಅಬ್ದುಲ್ಲಾ ಹೇಳಿಕೆ
ಪಾಕಿಸ್ತಾನಕ್ಕೆ ಆಹ್ವಾನ ನೀಡಿರುವುದು ಏಕೆ ಮಹತ್ವದ್ದು?
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ 2025ರ ಮೇ ತಿಂಗಳಲ್ಲಿ ಭಾರತವು ಆಪರೇಷನ್ ಸಿಂಧೂರ್ ನಡೆಸಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಮತ್ತಷ್ಟು ಉದ್ವಿಗ್ನಗೊಂಡಿದ್ದವು.
ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚಿ ಅವರಿಗೆ ಭಾರತ ಆಹ್ವಾನ ನೀಡಿರುವುದು ಗಮನ ಸೆಳೆದಿದೆ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, 2023ರಲ್ಲಿ ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಗೋವಾದಲ್ಲಿ ನಡೆದ SCO ಸಭೆಯಲ್ಲಿ ಭಾಗವಹಿಸಿದ ನಂತರ, ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ ಮೊದಲ ಸಂದರ್ಭವಾಗಲಿದೆ. ಆದರೆ, ಪಾಕಿಸ್ತಾನ ಈ ಆಹ್ವಾನವನ್ನು ಸ್ವೀಕರಿಸಿದೆಯೇ ಮತ್ತು ಯಾರು ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ.
ಈ ಕಾರ್ಯಕ್ರಮದಿಂದ ಭಾರತ–ಪಾಕ್ ಸಂಬಂಧ ಸುಧಾರಿಸಲಿದೆಯೇ?
ಈ ಆಹ್ವಾನವನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಬದಲಾವಣೆ ಎಂದು ಈಗಲೇ ಪರಿಗಣಿಸಲು ಸಾಧ್ಯವಿಲ್ಲ. ಇದು ಮುಖ್ಯವಾಗಿ ಎಸ್ಸಿಒ ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂವಾದ ಮತ್ತು ಸಹಕಾರವನ್ನು ಉತ್ತೇಜಿಸುವ ಕಾರ್ಯಕ್ರಮವಾಗಿದೆ. ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತ ಮತ್ತು ಪಾಕಿಸ್ತಾನ ಎಸ್ಸಿಒ ದಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಭಾಗವಹಿಸುತ್ತಿವೆ. ಪಾಕಿಸ್ತಾನವು 2027ರಲ್ಲಿ ಎಸ್ಸಿಒ ನಾಯಕರ ಶೃಂಗಸಭೆಯನ್ನು ಆಯೋಜಿಸುವ ನಿರೀಕ್ಷೆಯೂ ಇದೆ.
ಒಟ್ಟಿನಲ್ಲಿ, ಪಾಕಿಸ್ತಾನದ ಸಚಿವರು ಭಾರತಕ್ಕೆ ಭೇಟಿ ನೀಡುತ್ತಾರೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಅವರು ಭಾಗವಹಿಸಿದರೆ, ಆಪರೇಷನ್ ಸಿಂಧೂರ್ ನಂತರ ಎರಡೂ ದೇಶಗಳ ನಡುವಿನ ಸಂಪರ್ಕದ ದೃಷ್ಟಿಯಿಂದ ಈ ಭೇಟಿ ಮಹತ್ವ ಪಡೆಯಬಹುದು. ಆದರೆ, ಇದರಿಂದ ದ್ವಿಪಕ್ಷೀಯ ಸಂಬಂಧಗಳಲ್ಲಿ ತಕ್ಷಣವೇ ಬದಲಾವಣೆ ಆಗಲಿದೆ ಎಂದು ಹೇಳಲು ಸಾಧ್ಯವಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ