ಬಲೂಚಿಸ್ತಾನದಲ್ಲಿ ಕಲಾತ್ ರಾಜಮನೆತನದ ರಾಜಕುಮಾರನ ಅಪಹರಣ,ಮೂವರು ಅಂಗರಕ್ಷಕರೂ ಬಂದೂಕುಧಾರಿಗಳ ವಶಕ್ಕೆ
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಐತಿಹಾಸಿಕ ಕಲಾತ್ ರಾಜಮನೆತನದ ರಾಜಕುಮಾರ ಮುಹಮ್ಮದ್ ಖಾನ್ ಅಹ್ಮದ್‌ಜೈ ಅವರನ್ನ ಸಶಸ್ತ್ರ ಬಂದೂಕುಧಾರಿಗಳು ಅಪಹರಿಸಿದ್ದಾರೆ. ಅವರ ಮೂವರು ಭದ್ರತಾ ಸಿಬ್ಬಂದಿಯನ್ನೂ ಕರೆದೊಯ್ಯಲಾಗಿದೆ. ಘಟನೆ ಬೆನ್ನಲ್ಲೇ ಭದ್ರತಾ ಪಡೆಗಳು ಐವರು ಉಗ್ರರನ್ನು ಹತ್ಯೆ ಮಾಡಿವೆ. ಬಲೂಚ್ ರಾಷ್ಟ್ರೀಯತೆಯ ಪ್ರತೀಕವಾಗಿರುವ ಈ ರಾಜಮನೆತನದ ಕುಡಿಯ ಅಪಹರಣದಿಂದ ಸ್ಥಳೀಯರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಕ್ವೆಟ್ಟಾ, ಅಕ್ಟೋಬರ್ 28: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಐತಿಹಾಸಿಕ ಕಲಾತ್ ರಾಜಮನೆತನದ ರಾಜಕುಮಾರ ಮುಹಮ್ಮದ್ ಖಾನ್ ಅಹ್ಮದ್‌ಜೈ ಅವರನ್ನು ಶಸ್ತ್ರಸಜ್ಜಿತ ಬಂದೂಕುಧಾರಿಗಳು ಅಪಹರಿಸಿದ್ದಾರೆ. ಅವರ ಜೊತೆಗಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನೂ ಕರೆದೊಯ್ಯಲಾಗಿದೆ. ಈ ಘಟನೆಯ ಬೆನ್ನಲ್ಲೇ ಖುಜ್ದಾರ್ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಐವರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜಕುಮಾರನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕ್ವೆಟ್ಟಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಸೋಮವಾರ ರಾತ್ರಿ ಪ್ರಿನ್ಸ್ ಅಹ್ಮದ್‌ಜೈ ಅವರು ಖುಜ್ದಾರ್‌ನಿಂದ ಕಲಾತ್ ಕಡೆಗೆ ಹೆದ್ದಾರಿಯಲ್ಲಿ ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ವಾಹನವನ್ನು ಅಡ್ಡಗಟ್ಟಿದೆ. ನಂತರ ರಾಜಕುಮಾರ ಮತ್ತು ಅವರ ಮೂವರು ಭದ್ರತಾ ಸಿಬ್ಬಂದಿಯನ್ನು ಬಲವಂತವಾಗಿ ಅಪರಿಚಿತ ಸ್ಥಳಕ್ಕೆ ಎಳೆದೊಯ್ದಿದ್ದಾರೆ.
ಯಾವುದೇ ಸಂಘಟನೆ ಹೊಣೆ ಹೊತ್ತಿಲ್ಲ: ರಾಜಕುಮಾರ ಮತ್ತು ಅವರ ಸಿಬ್ಬಂದಿಯನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬುದು ತಿಳಿದುಬಂದಿಲ್ಲ. ಘಟನೆ ನಡೆದು ಹಲವು ಗಂಟೆಗಳು ಕಳೆದರೂ ಯಾವುದೇ ಬಂಡುಕೋರ ಅಥವಾ ಅಪಹರಣಕಾರರ ಸಂಘಟನೆ ಇದರ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ.
ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ. ಅಪಹರಣ ನಡೆದ ಬೆನ್ನಲ್ಲೇ ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯ ಖರಕ್ ಪ್ರದೇಶದಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಗುಪ್ತಚರ ಆಧಾರಿತ ಮಿಂಚಿನ ಕಾರ್ಯಾಚರಣೆ ನಡೆಸಿವೆ. ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ನಡೆಸಿದ ವೇಳೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ ಮುಖ್ಯಮಂತ್ರಿಯ ಗೃಹ ವ್ಯವಹಾರಗಳ ಸಲಹೆಗಾರ ಬಾಬರ್ ಯೂಸಫ್‌ಜೈ ತಿಳಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ಹಣಕಾಸು ಲೋಕಕ್ಕೆ ನಾವೇ ಕಿಂಗ್ ಎಂದು ಬೀಗುತ್ತಿರುವ ಪಾಕಿಸ್ತಾನ; ಮಾಜಿ ಐಎಂಎಫ್ ನಿರ್ದೇಶಕರಿಂದ ಸತ್ಯಾಂಶ ಬಹಿರಂಗ
ಐತಿಹಾಸಿಕ ಸ್ಥಾನಮಾನ: “ಖಾನ್ ಆಫ್ ಕಲಾತ್” ಎಂಬುದು ಬಲೂಚಿಸ್ತಾನದ ಪ್ರಾಚೀನ ರಾಜಪ್ರಭುತ್ವದ ಸಂಸ್ಥಾನವಾದ ‘ಕಲಾತ್ ಖಾನೇಟ್’ ಆಡಳಿತಗಾರರ ಐತಿಹಾಸಿಕ ಬಿರುದಾಗಿದೆ. ಬ್ರಾಹುಯಿ ನೇತೃತ್ವದ ಈ ರಾಜಮನೆತನವು ಆಧುನಿಕ ಬಲೂಚಿಸ್ತಾನದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾರ್ವಭೌಮ ಗುರುತನ್ನು ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಬಲೂಚ್ ಜನರಲ್ಲಿ ಕಲಾತ್ ರಾಜಮನೆತನದ ಬಗ್ಗೆ ಅಪಾರ ಭಕ್ತಿ ಮತ್ತು ಪೂಜ್ಯಭಾವನೆಯಿದೆ. ಬಲೂಚ್ ರಾಷ್ಟ್ರೀಯತೆಯ ಪ್ರತೀಕವಾಗಿ ಈ ಕುಟುಂಬವನ್ನು ಕಾಣಲಾಗುತ್ತದೆ.
ಪ್ರಸ್ತುತ ಕಲಾತ್‌ನ 35ನೇ ಖಾನ್ ಆಗಿರುವ ಮೀರ್ ಸುಲೇಮಾನ್ ದಾವೂದ್ ಖಾನ್ ಅವರು ಪಾಕಿಸ್ತಾನ ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯ ಹಾಗೂ ಬಲೂಚ್ ಸ್ವಾತಂತ್ರ್ಯ ಹೋರಾಟದ ನಿಲುವಿನಿಂದಾಗಿ ಕಳೆದ ಹಲವು ವರ್ಷಗಳಿಂದ ಯುನೈಟೆಡ್ ಕಿಂಗ್‌ಡಮ್ (UK) ಮತ್ತು ವೇಲ್ಸ್‌ನಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದಾರೆ. ಇದೀಗ ಅಪಹರಣಕ್ಕೊಳಗಾಗಿರುವುದು ಅವರ ಪುತ್ರ ಪ್ರಿನ್ಸ್ ಮುಹಮ್ಮದ್ ಖಾನ್ ಅಹ್ಮದ್‌ಜೈ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ಸ್ಥಳೀಯ ಬಲೂಚ್ ಬಂಡುಕೋರರು (ಬಿಎಲ್ಎ ಸೇರಿದಂತೆ) ದಶಕಗಳಿಂದ ಸಶಸ್ತ್ರ ಸಂಘರ್ಷ ನಡೆಸುತ್ತಿದ್ದಾರೆ.
ಇಂತಹ ಸೂಕ್ಷ್ಮ ವಾತಾವರಣದಲ್ಲಿ ರಾಜಮನೆತನದ ಕುಡಿಯನ್ನೇ ಗುರಿಯಾಗಿಸಿ ನಡೆದಿರುವ ಈ ಅಪಹರಣವು ಪ್ರಾಂತ್ಯದಲ್ಲಿ ಭಾರಿ ಪ್ರಕ್ಷುಬ್ಧತೆಗೆ ಕಾರಣವಾಗಿದ್ದು, ಸರ್ಕಾರದ ವೈಫಲ್ಯದ ವಿರುದ್ಧ ಸ್ಥಳೀಯರಲ್ಲಿ ಆಕ್ರೋಶ ಭುಗಿಲೆದ್ದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




