ಜಾಗತಿಕ ಹಣಕಾಸು ಲೋಕಕ್ಕೆ ನಾವೇ ಕಿಂಗ್ ಎಂದು ಬೀಗುತ್ತಿರುವ ಪಾಕಿಸ್ತಾನ; ಮಾಜಿ ಐಎಂಎಫ್ ನಿರ್ದೇಶಕರಿಂದ ಸತ್ಯಾಂಶ ಬಹಿರಂಗ
1953ರ ಬಳಿಕ ಐಎಂಎಫ್ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ಸ್ಥಾನ ಪಾಕಿಸ್ತಾನಕ್ಕೆ ಸಿಕ್ಕಿದೆ. 2027ರಲ್ಲಿ ಪಾಕಿಸ್ತಾನ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ವರ್ಗದ ಜನರು ಇದು ಪಾಕಿಸ್ತಾನದ ಹೊಸ ತಾಕತ್ತು ಎಂದು ಹೇಳುತ್ತಿದ್ದಾರೆ. ಆದರೆ, ಮಾಜಿ ಐಎಂಎಫ್ ಅಧಿಕಾರಿ ಪ್ರಕಾರ ಪಾಕಿಸ್ತಾನಕ್ಕೆ ದಕ್ಕಿರೋದು ಅಲಂಕಾರಿಕ ಸ್ಥಾನವಷ್ಟೇ ಹೊರತು ಹೊಸ ಶಕ್ತಿ ಅಲ್ಲ ಎಂದಿದ್ದಾರೆ.

ಮುಖ್ಯಾಂಶಗಳು
- 1953ರ ಬಳಿಕ ಐಎಂಎಫ್ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ಸ್ಥಾನ ಪಾಕಿಸ್ತಾನಕ್ಕೆ ಸಿಕ್ಕಿದೆ.
- ಸೋಷಿಯಲ್ ಮೀಡಿಯಾದಲ್ಲಿ ಕೆಲ ವರ್ಗದ ಜನರು ಇದು ಪಾಕಿಸ್ತಾನದ ಹೊಸ ತಾಕತ್ತು ಎಂದು ಹೇಳುತ್ತಿದ್ದಾರೆ.
- ಮಾಜಿ ಐಎಂಎಫ್ ಅಧಿಕಾರಿ ಪ್ರಕಾರ ಪಾಕಿಸ್ತಾನಕ್ಕೆ ದಕ್ಕಿರೋದು ಅಲಂಕಾರಿಕ ಸ್ಥಾನವಷ್ಟೇ ಎಂದಿದ್ದಾರೆ.
ನವದೆಹಲಿ, ಅಕ್ಟೋಬರ್ 19: ಐಎಂಎಫ್ ಮತ್ತು ವಿಶ್ವಬ್ಯಾಂಕ್ಗಳಿಂದ ಸಾಲ ಪಡೆಯಲು ಹರಸಾಹಸ ಮಾಡುತ್ತಿರುವ ಪಾಕಿಸ್ತಾನ ಇದೀಗ ಆ ಎರಡು ಜಾಗತಿಕ ಹಣಕಾಸು ಸಂಸ್ಥೆಗಳ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸುತ್ತಿದೆ. ಆದರೆ, ಜಾಗತಿಕ ಹಣಕಾಸು ಕ್ಷೇತ್ರದ ಅತ್ಯುಚ್ಚ ಸ್ಥಾನವನ್ನು ತಾನು ಪಡೆದಿದ್ದೇನೆ. ಇದು ಐತಿಹಾಸಿಕ ಮೈಲಿಗಲ್ಲು ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ, ಐಎಂಎಫ್ನ ಮಾಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ವೊಬ್ಬರು ಪಾಕಿಸ್ತಾನ ಗಳಿಸಿದ ಸ್ಥಾನಮಾನದ ಕುರಿತು ವಾಸ್ತವ ಬಿಚ್ಚಿಟ್ಟಿದ್ದಾರೆ. ಇದು ಪಾಕಿಸ್ತಾನಕ್ಕೆ ಸಿಕ್ಕಿರುವ ಪವರ್ ಅಲ್ಲ, ಬದಲಾಗಿ ಪ್ರೋಟೋಕಾಲ್ ಎಂದು ಕೃಷ್ಣಮೂರ್ತಿ ವಿ ಸುಬ್ರಮಣಿಯನ್ ಹೇಳಿದ್ದಾರೆ.
ಜಾಗತಿಕ ಹಣಕಾಸು ಸಂಸ್ಥೆಗಳಾದ ಐಎಂಎಫ್ ಮತ್ತು ವರ್ಲ್ಡ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷತೆ ಪಾಕಿಸ್ತಾನಕ್ಕೆ ಸಿಕ್ಕಿದೆ. 2027ರ ಐಎಂಎಫ್ ಮತ್ತು ವರ್ಲ್ಡ್ ಬ್ಯಾಂಕ್ ವಾರ್ಷಿಕ ಮಹಾಸಭೆಯು ಪಾಕಿಸ್ತಾನದ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಇದು ವರ್ಷ ವರ್ಷ ಬದಲಾಗುವ ಅಲಂಕಾರಿಕ ಸ್ಥಾನವಷ್ಟೇ. 2025ರಲ್ಲಿ ಕಾಬೊ ವೆರ್ಡೆಗೆ ಅಧ್ಯಕ್ಷತೆ ಸಿಕ್ಕಿತ್ತು. ಈ ವರ್ಷ ಪರಗ್ವೆ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತದೆ. ಮುಂದಿನ ವರ್ಷ ಪಾಕಿಸ್ತಾನಕ್ಕೆ ಅಧ್ಯಕ್ಷತೆ ಸಿಕ್ಕಿದೆ. ಇದು ಪ್ರೋಟೋಕಾಲ್ ಅಷ್ಟೇ ಎಂದು ಕೆ.ವಿ. ಸುಬ್ರಮಣಿಯನ್ ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಷರತ್ತು ಒಪ್ಪಿದರೆ 7 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಮುಕ್ತ: ಇರಾನ್‌ನಿಂದ ಹೊಸ ಪ್ರಸ್ತಾವನೆ
ಪಾಕಿಸ್ತಾನಕ್ಕೆ 1953ರಲ್ಲಿ ಈ ಅಧ್ಯಕ್ಷತೆ ಸ್ಥಾನ ಸಿಕ್ಕಿತ್ತು. 74 ವರ್ಷದ ಬಳಿಕ ಮತ್ತೆ ಆ ಸ್ಥಾನ ಬಂದಿದೆ. ವರ್ಲ್ಡ್ ಬ್ಯಾಂಕ್ನಲ್ಲಿ ಪಾಕಿಸ್ತಾನ ಪರವಾಗಿ ಗವರ್ನರ್ ಆಗಿರುವ ಆ ದೇಶದ ಆರ್ಥಿಕ ವ್ಯವಹಾರಗಳ ಸಚಿವ ಆಹಾದ್ ಖಾನ್ ಚೀಮಾ ಅವರು 2027ರ ಐಎಂಎಫ್ ವರ್ಲ್ಡ್ ಬ್ಯಾಂಕ್ ಮಹಾಸಭೆಯ ಅಧ್ಯಕ್ಷತೆ ವಹಿಸುತ್ತಾರೆ ಎನ್ನಲಾಗಿದೆ.
ಪಾಕಿಸ್ತಾನಕ್ಕೆ ಈ ಸ್ಥಾನ ಸಿಕ್ಕಿರುವುದು ಐತಿಹಾಸಿಕ ಮೈಲಿಗಲ್ಲು. ಜಾಗತಿಕ ಆರ್ಥಿಕ ಮತ್ತು ಅಭಿವೃದ್ಧಿ ಸಂಬಂಧಿ ಚರ್ಚೆಗಳಿಗೆ, ಹಾಗೂ ಸದಸ್ಯ ರಾಷ್ಟ್ರಗಳ ನಡುವೆ ರಚನಾತ್ಮಕವಾದ ಮಾತುಕತೆಗಳಿಗೆ ಪಾಕಿಸ್ತಾನ ಕೊಡುಗೆ ನೀಡಲಿದೆ ಎಂದು ಆ ದೇಶದ ಆರ್ಥಕ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ. ಆದರೆ, ಭಾರತದಲ್ಲಿ ಕೆಲ ನೆಟ್ಟಿಗರು ಪಾಕಿಸ್ತಾನವನ್ನು ಹೊಗಳಿ, ಮೋದಿಯನ್ನು ತೆಗಳಲು ಇದನ್ನು ಬಳಸಿಕೊಳ್ಳುತ್ತಿರುವುದುಂಟು.
ಇದನ್ನೂ ಓದಿ: 20 ವರ್ಷಗಳ ದಾಖಲೆ ಮುರಿಯಲಿದೆ ಭಾರತದ ಜಿಡಿಪಿ ದರ; ಕೊರಿಯನ್ ಅರ್ಥಶಾಸ್ತ್ರಜ್ಞರ ವಿಶ್ಲೇಷಣೆ ಇಲ್ಲಿದೆ
ಪಾಕಿಸ್ತಾನಕ್ಕೆ ಈ ಅಧ್ಯಕ್ಷ ಸ್ಥಾನ ಸಿಕ್ಕಿರುವುದನ್ನು ಕೆಲವರು ಆ ದೇಶ ಜಾಗತಿಕ ಮಟ್ಟದಲ್ಲಿ ಪ್ರಭಾವಿ ಸ್ಥಾನ ಪಡೆದಿದೆ ಎಂದು ತುಲನೆ ಮಾಡುತ್ತಿದ್ದಾರೆ. ಹಾಗೆಯೇ, ಭಾರತವು ಜಿ20 ಮತ್ತು ಬ್ರಿಕ್ಸ್ ಗುಂಪುಗಳ ಅಧ್ಯಕ್ಷತೆ ಹೊಂದಿದ್ದನ್ನು ಪಾಕಿಸ್ತಾನದ ಈ ಹೊಸ ಸ್ಥಾನಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಐಎಂಎಫ್ ಮಾಜಿ ಅಧಿಕಾರಿ ಕೃಷ್ಣಮೂರ್ತಿ ವಿ ಸುಬ್ರಮಣಿಯನ್ ಅವರು ಈ ಹೋಲಿಕೆಗೂ ಟಾಂಟ್ ಕೊಟ್ಟಿದ್ದಾರೆ.
ಕೆ.ವಿ. ಸುಬ್ರಮಣಿಯನ್ ಅವರ ಟ್ವೀಟ್
On equating with India’s G20 & BRICS presidencies: Setting the agenda >> Managing the speakers’ queue!
Equating India’s G20 and BRICS presidencies with Pakistan’s rotating IMF-World Bank Annual Plenary chairmanship is a false equivalence.
India’s G20 presidency set the agenda for a major forum of global economic cooperation; its BRICS presidency drove an emerging-economies platform.
Pakistan’s role is to preside over an annual meeting.
Bottom line: Setting the agenda >> Managing the speakers’ queue.
— Prof. Krishnamurthy V Subramanian (@SubramanianKri) October 18, 2026
‘ಭಾರತದ ಜಿ20 ಅಧ್ಯಕ್ಷತೆಯು ಜಾಗತಿಕ ಆರ್ಥಿಕ ಸಹಕಾರಗಳ ಪ್ರಮುಖ ವೇದಿಕೆಗಾಗಿ ಅಜೆಂಡಾ ನಿರ್ಮಿಸಿತ್ತು. ಬ್ರಿಕ್ಸ್ ಅಧ್ಯಕ್ಷತೆಯು ಉದಯೋನ್ಮುಖ ಆರ್ಥಿಕತೆಗಳಿಗೆ ವೇದಿಕೆ ಸೃಷ್ಟಿಸಿತ್ತು. ಪಾಕಿಸ್ತಾನ ವಾರ್ಷಿಕ ಸಭೆಯ ಅಧ್ಯಕ್ಷತೆ ಮಾತ್ರ ವಹಿಸುತ್ತಿದೆ ಅಷ್ಟೇ’ ಎಂದು ಕೆ.ವಿ. ಸುಬ್ರಮಣಿಯನ್ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Mon, 19 October 26




