ಸುದ್ದಿ ಪ್ರಕಾಶಕರ ಕಂಟೆಂಟ್​ಗೆ ಟೆಕ್ ಕಂಪನಿಗಳು ಪಾವತಿ ಮಾಡಲೇಬೇಕು; ಕೇಂದ್ರದಿಂದ ದಿಟ್ಟ ನಿಲುವು

|

Updated on: Jan 21, 2023 | 1:42 PM

ಭವಿಷ್ಯದ ಪತ್ರಿಕೋದ್ಯಮ ಮತ್ತು ಮುದ್ರಣ ಹಾಗೂ ಡಿಜಿಟಲ್ ಸೇರಿದಂತೆ ಸುದ್ದಿ ಉದ್ಯಮಗಳ ಹಣಕಾಸು ಆರೋಗ್ಯಕ್ಕಾಗಿ ಇದು ಅತ್ಯಗತ್ಯ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಸುದ್ದಿ ಪ್ರಕಾಶಕರ ಕಂಟೆಂಟ್​ಗೆ ಟೆಕ್ ಕಂಪನಿಗಳು ಪಾವತಿ ಮಾಡಲೇಬೇಕು; ಕೇಂದ್ರದಿಂದ ದಿಟ್ಟ ನಿಲುವು
ಸಾಂದರ್ಭಿಕ ಚಿತ್ರ
Image Credit source: ijnet
Follow us on

ನವದೆಹಲಿ: ದೊಡ್ಡ ತಂತ್ರಜ್ಞಾನ ಕಂಪನಿಗಳು (Tech Companies) ಆದಾಯದ ನ್ಯಾಯೋಚಿತ ಹಂಚಿಕೆ ವಿಧಾನವನ್ನು ಅನುಸರಿಸಲೇಬೇಕು. ಸುದ್ದಿ ಪ್ರಕಾಶಕರು (News Publishers) ಡಿಜಿಟಲ್ ವೇದಿಕೆಯಲ್ಲಿ (Digital Platforms) ಪಬ್ಲಿಷ್ ಮಾಡುವ ವಿಷಯಗಳಿಗೆ (ಕಂಟೆಂಟ್​​ಗಳಿಗೆ) ಪಾವತಿ ಮಾಡಬೇಕು. ಆದಾಯ ಹಂಚಿಕೆಯಲ್ಲಿ ಅಸಮತೋಲನ ಹೋಗಲಾಡಿಸಬೇಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭವಿಷ್ಯದ ಪತ್ರಿಕೋದ್ಯಮ ಮತ್ತು ಮುದ್ರಣ ಹಾಗೂ ಡಿಜಿಟಲ್ ಸೇರಿದಂತೆ ಸುದ್ದಿ ಉದ್ಯಮಗಳ ಹಣಕಾಸು ಆರೋಗ್ಯಕ್ಕಾಗಿ ಇದು ಅತ್ಯಗತ್ಯ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಮತ್ತು ಮಾಹಿತಿ ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ. ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘಟನೆ (DNPA) ಆಯೋಜಿಸಿದ್ದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘಟನೆಯು ದೇಶದ ಪ್ರಮುಖ 17 ಸುದ್ದಿ ಪ್ರಕಾಶಕರನ್ನು ಒಳಗೊಂಡಿದೆ.

‘ಸುದ್ದಿ ಉದ್ಯಮಗಳ ಬೆಳವಣಿಗೆಗಾಗಿ, ಅದರಲ್ಲೂ ಮುಖ್ಯವಾಗಿ ಡಿಜಿಟಲ್ ಸುದ್ದಿ ತಾಣಗಳ ಪ್ರಕಾಶಕರಿಗೆ ಟೆಕ್ ಕಂಪನಿಗಳು ಆದಾಯ ಹಂಚಿಕೆ ಮಾಡಬೇಕು. ಯಾಕೆಂದರೆ ಕಂಟೆಂಟ್​ಗಳ ಮೂಲ ಸೃಷ್ಟಿಕರ್ತರು ಪ್ರಕಾಶಕರಾಗಿದ್ದಾರೆ. ಇತರರು ಸೃಷ್ಟಿಸಿದ ಕಂಟೆಂಟ್​ಗಳ ಸಂಗ್ರಾಹಕರಾಗಿ ಕಾರ್ಯನಿರ್ವಹಿಸುವುದಷ್ಟೇ ಟೆಕ್ ಕಂಪನಿಗಳ ಕೆಲಸ. ಹೀಗಾಗಿ ಸುದ್ದಿ ಪ್ರಕಾಶಕರಿಗೂ ಆದಾಯದಲ್ಲಿ ನ್ಯಾಯೋಚಿತ ಪಾಲು ದೊರೆಯಬೇಕಿದೆ’ ಎಂದು ಅಪೂರ್ವ ಚಂದ್ರ ಹೇಳಿದ್ದಾರೆ.

ಇದನ್ನೂ ಓದಿ: Social Media Influencers: ಸಾಮಾಜಿಕ ಮಾಧ್ಯಮ ಪ್ರಭಾವಿಗಳೇ ಎಚ್ಚರ; ಬಂದಿದೆ ಹೊಸ ನಿಯಮ, ತಪ್ಪಿದರೆ 50 ಲಕ್ಷ ದಂಡ

ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್​​ ಹಾಗೂ ಯುರೋಪ್ ದೇಶಗಳಲ್ಲಿ ಕೈಗೊಂಡಿರುವ ಉಪಕ್ರಮಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ಈ ದೇಶಗಳಲ್ಲಿ ಸುದ್ದಿ ಪ್ರಕಾಶಕರು ಮತ್ತು ಸಂಗ್ರಾಹಕರ ನಡುವಣ ಆದಾಯ ಹಂಚಿಕೆಗೆ ಸಂಬಂಧಿಸಿ ನಿಯಮಗಳನ್ನು ರೂಪಿಸಿರುವ ಬಗ್ಗೆ ಅವರು ಉಲ್ಲೇಖಿಸಿದ್ದಾರೆ.

ಕಂಟೆಟ್ ರಚನೆ ಮತ್ತು ಅದರ ಹಣಗಳಿಕೆಯ ನಡುವಿನ ಅಸಮತೋಲನ ನಿಯಂತ್ರಿಸುವ ಭರವಸೆಯಿದೆ. ಜಾಹೀರಾತು ತಂತ್ರಜ್ಞಾನ ಕಂಪನಿಗಳು, ವೇದಿಕೆಗಳು ಇಂದು ಹೊಂದಿರುವ ಶಕ್ತಿ ಹಾಗೂ ಸುದ್ದಿ ಪ್ರಕಾಶಕರ ನಡುವಣ ಅಸಮತೋಲನವೂ ನಿವಾರಣೆಯಾಗಲಿದೆ ಎಂದು ರಾಜೀವ್ ಚಂದ್ರಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ