ದೆಹಲಿ: ಸಾಲುಸಾಲು ಸೋಲುಗಳಿಂದ ಕಂಗೆಟ್ಟಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಇದೀಗ ಮತ್ತೊಂದು ಸಂಕಟ ಎದುರಾಗಿದೆ. ಒಂದು ರಾಷ್ಟ್ರೀಯ ಪಕ್ಷದ ಸಂಘಟನೆ ಅಷ್ಟು ಸುಲಭದ ಮಾತಲ್ಲ. ಕಾರ್ಯಕರ್ತರು, ನಾಯಕರು ಎಷ್ಟು ಅಗತ್ಯವೋ, ಆರ್ಥಿಕ ಸಂಪನ್ಮೂಲವೂ ಅಷ್ಟೇ ಅಗತ್ಯ ಅನಿವಾರ್ಯ. ಆದರೆ ಗತ ಇತಿಹಾಸದ ವೈಭವವನ್ನು ಸ್ಮರಿಸಿಕೊಳ್ಳುವುದರಲ್ಲೇ ತೃಪ್ತಿ ಪಡುತ್ತಿರುವ ಕಾಂಗ್ರೆಸ್ಗೆ (Indian National Congress) ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಗಾದೆಮಾತು ಸರಿಹೊಂದುತ್ತಿದೆ. ದೇಶದ ಎಲ್ಲೆಡೆ ವ್ಯಾಪಿಸಿರುವ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿರುವ, ಹಿಂದೊಮ್ಮೆ ಕೇಂದ್ರ ಸರ್ಕಾರ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಕೇಂದ್ರ ಸರ್ಕಾರ ಎಂಬಂತಿದ್ದ ದೈತ್ಯ ಪಕ್ಷಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಎಐಸಿಸಿ ತನ್ನ ರಾಜ್ಯ ಘಟಕಗಳಿಗೆ ಆರ್ಥಿಕ ಸಂಪನ್ಮೂಲವನ್ನು ಶೇಖರಿಸುವಂತೆ ತುರ್ತು ಸಂದೇಶ ರವಾನಿಸಿದೆ.
ಸದ್ಯ ಕಾಂಗ್ರೆಸ್ನ ಹಿಡಿತದಲ್ಲಿರುವ ರಾಜ್ಯಗಳೆಂದರೆ ಜಾರ್ಖಂಡ್ ಮತ್ತು ಪಂಜಾಬ್ ಮ್ತತು ಛತ್ತೀಸಗಢ. ಈ ರಾಜ್ಯಗಳ ಪ್ರಮುಖ ಕಾಂಗ್ರೆಸ್ ನಾಯಕರ ಮೇಲೆ ಇದೀಗ ಹೆಚ್ಚಿನ ಒತ್ತಡ ಬಿದ್ದಿದೆ ಎನ್ನುತ್ತದೆ ಆಂಗ್ಲ ಜಾಲತಾಣವೊಂದರ ವರದಿ. ಎಐಸಿಸಿ ಪದಾಧಿಕಾರಿಗಳು ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಪಂಜಾಬ್ ರಾಜ್ಯಗಳ ಕಾಂಗ್ರೆಸ್ ನಾಯಕರಿಗೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸುವಂತೆ ಪ್ರತ್ಯೇಕ ಸಂದೇಶವನ್ನು ಕಳುಹಿಸಿದ್ದಾರೆ. ಅಲ್ಲದೇ ಅಧಿಕಾರದಲ್ಲಿರುವ ಕಾಂಗ್ರೆಸ್ನ ಎಲ್ಲ ಸಚಿವರಿಗೂ, ಇನ್ನಿತರ ಘಟಕಗಳ ಪದಾಧಿಕಾರಿಗಳ ಇನ್ಬಾಕ್ಸ್ಗೂ ಈ ವಿಶೇಷ ಸಂದೇಶ ದೆಹಲಿಯಿಂದ ರವಾನೆಯಾಗಿದೆ.
ಇಳಿಕೆಯಾಗಿದೆ ದೇಣಿಗೆ, ಪುರಾತನ ಪಕ್ಷಕ್ಕೆ ಇದೆಂಥಾ ದುಃಸ್ಥಿತಿ?
ಕಾಂಗ್ರೆಸ್ 2014ಕ್ಕಿಂತ ಮುನ್ನ ಅತಿ ಹೆಚ್ಚು ದೇಣಿಗೆ ಪಡೆಯುವ ರಾಜಕೀಯ ಪಕ್ಷಗಳ ಸಾಲಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅಂದಿನ ಪರಿಸ್ಥಿತಿಗೆ ಅದು ವಿಶೇಷವೇನೂ ಆಗಿರಲಿಲ್ಲ. ಆದರೆ ಕಾಂಗ್ರೆಸ್ಗೆ ಹರಿದುಬರುತ್ತಿದ್ದ ಅಪಾರ ಪ್ರಮಾಣದ ದೇಣಿಗೆ ಇಳಿಮುಖವಾಗಿದ್ದೇ 2014ರ ನಂತರ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಯಾವಾಗ ದೇಶದ ಅಧಿಕಾರ ಕೇಂದ್ರವನ್ನು ದೆಹಲಿಗೆ ವರ್ಗಾಯಿಸಿದರೋ, ಕಾಂಗ್ರೆಸ್ಗೆ ಸಂದಾಯವಾಗುತ್ತಿದ್ದ ದೇಣಿಗೆಯ ಹರಿವು ಇಳಿಮುಖವಾಯಿತು. ರಾಜಕೀಯ ಪಕ್ಷಗಳಿಗೆ ದೇಣಿಗೆ ದೊರೆಯುವ ಪ್ರಮುಖ ಮೂಲಗಳೇ ಕಾರ್ಪೋರೇಟ್ ಕಂಪನಿಗಳು. ಬಿಜೆಪಿಯ ಅಶ್ವಮೇಧ ಕುದುರೆ ನಾಗಾಲೋಟದಿಂದ ಜಿಗಿದಂತೆಲ್ಲ ಕಾಂಗ್ರೆಸ್ನಲ್ಲಿ ಕಾರ್ಪೊರೇಟ್ ಕಂಪನಿಗಳ ಆಸಕ್ತಿ ಕುಂಠಿತವಾಯಿತು. ಬಿಜೆಪಿ 2019ರಲ್ಲಿ ಮತ್ತೆ ಅಧಿಕಾರ ಹಿಡಿದಾಗ ಇದು ಪಾತಾಳ ಸೇರಿತು ಎಂದು ಅಂಕಿಅಂಶಗಳೇ ಹೇಳುತ್ತವೆ.
ಬರುತ್ತಿವೆ ಸಾಲುಸಾಲು ಚುನಾವಣೆ; ತುಂಬಬೇಕಿದೆ ಬೊಕ್ಕಸ
ಇಷ್ಟು ದಿನ ಹೇಗೋ ನಿಭಾಯಿಸಿದ್ದಾಯಿತು, ಆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಚುನಾವಣೆಗಳನ್ನು ಪಕ್ಷ ಎದುರಿಸಬೇಕಿದೆ. ಖಾಲಿ ಜೇಬಿಟ್ಟುಕೊಂಡು ಪೇಟೆಗೆ ಹೋದರೆ ಒಂದು ಸಾಮಾಗ್ರಿಯನ್ನೂ ಖರೀದಿಸಲಾಗದು ಎಂಬುದು ನಮಗೂ ನಿಮಗೂ ತಿಳಿದಿರುವ ಸಾಮಾನ್ಯ ಲೆಕ್ಕಾಚಾರ. ಇಲ್ಲಿ ಕಾಂಗ್ರೆಸ್ಗೂ ಇದೇ ಲೆಕ್ಕಾಚಾರ ಅನ್ವಯಿಸುತ್ತದೆ. ಮುಂಬರುವ ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಜೇಬು ತುಂಬಿರಲೇಬೇಕು. ಆದರೆ ಈಗಿನ ಪರಿಸ್ಥಿತಿ ಚುನಾವಣೆ ಎದುರಿಸಲು ಆರ್ಥಿಕ ಚೈತನ್ಯ ನೀಡಲಾರದು.
ಕಟ್ಟಬೇಕಿದೆ ಪಕ್ಷದ ಕಟ್ಟಡ
ಇಷ್ಟೇ ಅಲ್ಲದೇ ದೆಹಲಿಯಲ್ಲಿ ಕಾಂಗ್ರೆಸ್ ಹೊಸ ಕಟ್ಟಡ ನಿರ್ಮಿಸುತ್ತಿದೆ. ಈ ಕಾಮಗಾರಿಗೂ ಹಣದ ಸಮಸ್ಯೆ ಎದುರಾಗಿದೆ ಎಂದು ಮೂಲಗಳು ಹೇಳುತ್ತವೆ. ಕಾಂಗ್ರೆಸ್ ಆರ್ಥಿಕ ಚೇತರಿಕೆಯ ಮಾರ್ಗವನ್ನು ಶೀಘ್ರದಲ್ಲೇ ಕಂಡುಕೊಳ್ಳಬೇಕಿದೆ. ಇದೇ ಯೋಚನೆಯಲ್ಲಿ ಚಿಂತಾಕ್ರಾಂತರಾಗಿರುವ ಪಕ್ಷದ ವರಷ್ಠರು ಅಧಿಕಾರದಲ್ಲಿರುವ ರಾಜ್ಯಗಳಾದ ಪಂಜಾಬ್, ರಾಜಸ್ಥಾನ ಮತ್ತು ಛತ್ತೀಸಗಢದ ನಾಯಕರಿಗೆ ವಿಶೇಷ ಕರೆ ನಿಡಿದ್ದಾರೆ. ಅಲ್ಲದೇ ದೇಶದ ಉದ್ದಗಲಕ್ಕೂ ಇರುವ ಆಯ್ಕೆಯಾದ ಜನಪ್ರತಿನಿಧಿಗಳ ಬಳಿಯೂ ದೇಣಿಗೆ ನೀಡುವಂತೆ ಕೋರುವ ಸಾಧ್ಯತೆಗಳೂ ಇವೆಯಂತೆ. ಅದರಲ್ಲೂ ದೇಣಿಗೆಯನ್ನು ಸಂದಾಯ ಮಾಡದೇ ಬಾಕಿ ಇಟ್ಟುಕೊಂಡಿರುವ ಹಿರಿಯ ಜನಪ್ರತಿನಿಧಿಗಳಂತೂ ಆದಷ್ಟು ಬೇಗ ಬಾಕಿ ಮೊತ್ತವನ್ನು ಚುಕ್ತಾ ಮಾಡಲೇಬೇಕಾಗಿರುವುದು ಸತ್ಯ.
ರಾಜಕೀಯ ಮುಂದಾಳತ್ವದ ಸಮಸ್ಯೆಯ ಜತೆಗೆ ಆರ್ಥಿಕ ಸಮಸ್ಯೆಗಳೂ ಹೆಗಲೇರಿದರೆ ಕಾಂಗ್ರೆಸ್ನ ಮುಂದಿನ ದಿನಗಳು ಇನ್ನಷ್ಟು ದುಸ್ತರವಾಗಲಿವೆ. ಈ ಕಾರಣಕ್ಕಾದರೂ ಕಾಂಗ್ರೆಸ್ ಆರ್ಥಿಕ ಸಮಸ್ಯೆಗೆ ‘ಮ್ಯಾಜಿಕ್’ನಂತಹ ಪರಿಹಾರ ಹುಡುಕಲೇಬೇಕಿದೆ.