ದೆಹಲಿ: ಭಾರತದಲ್ಲಿ ಪ್ರತಿದಿನ 3 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಕೊವಿಡ್ ಲಸಿಕೆಯ ಕೊರತೆ ತೀವ್ರವಾಗಿದೆ. ಹೀಗಿರುವಾಗ ದೇಶದಲ್ಲಿ ಕೊವಿಡ್ ಲಸಿಕೆ ಕೊರತೆ ಜುಲೈ ತಿಂಗಳವರೆಗೆ ಮುಂದುವರಿಯಲಿದೆ ಎಂದು ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ಹೇಳಿರುವುದಾಗಿ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ. ಜುಲೈ ತಿಂಗಳಲ್ಲಿ ಕೊವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ಪೂನಾವಾಲಾ ಹೇಳಿದ್ದಾರೆ.
2021 ಜುಲೈ ತಿಂಗಳಲ್ಲಿ ಕೊವಿಡ್ ಲಸಿಕೆಯ ಉತ್ಪಾದನೆ 6-7 ಕೋಟಿ ಡೋಸ್ ನಿಂದ 10 ಕೋಟಿಗೆ ಏರಿಸಲಾಗುವುದು ಎಂದಿದ್ದಾರೆ ಪೂನಾವಾಲಾ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೊವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾದ ಬೆನ್ನಲ್ಲೇ ಪೂನಾವಾಲಾ ಲಸಿಕೆ ಕೊರತೆ ಕುರಿತು ಈ ರೀತಿ ಹೇಳಿದ್ದಾರೆ.
ಜನವರಿಯಲ್ಲಿ ಕೊವಿಡ್ -19 ಪ್ರಕರಣಗಳು ಕಡಿಮೆಯಾಗಲು ಪ್ರಾರಂಭಿಸಿದಾಗ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಅಪ್ಪಳಿಸಬಹುದೆಂದು ಅಧಿಕಾರಿಗಳು ನಿರೀಕ್ಷಿಸಿರಲಿಲ್ಲ. ಭಾರತದಲ್ಲಿ ಸಾಂಕ್ರಾಮಿಕ ರೋಗವು ಕ್ಷೀಣಿಸಿದೆ ಎಂದೇ ಎಲ್ಲರೂ ಭಾವಿಸಿದ್ದರು. ಉತ್ಪಾದನೆ ಮಾಡಲು ಯಾವುದೇ ಬೇಡಿಕೆ ಇರಲಿಲ್ಲ, ನಾವು ವರ್ಷಕ್ಕೆ 1 ಶತಕೋಟಿಗಿಂತ ಹೆಚ್ಚಿನ ಡೋಸ್ ಉತ್ಪಾದನೆ ಮಾಡಬೇಕಾಗಿದೆ ಎಂದು ನಾವು ಭಾವಿಸಿರಲಿಲ್ಲ ಎಂದು ಪೂನಾವಾಲಾ ಹೇಳಿದ್ದಾರೆ.
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಬ್ರಿಟನ್ ನಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯನ್ನು ಉತ್ಪಾದಿಸುತ್ತಿದೆ.
ಏತನ್ಮಧ್ಯೆ, ಪೂರೈಕೆ ಮಾಡಲು ಹೆಣಗಾಡುತ್ತಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇತರ ದೇಶಗಳಲ್ಲಿ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ. ಕಳೆದ ವಾರ ಸೆರಮ್ ಇನ್ಸ್ಟಿಟ್ಯೂಟ್ ತನ್ನ ಮಾಸಿಕ ಉತ್ಪಾದನೆಯನ್ನು ಜುಲೈ ವೇಳೆಗೆ 10 ಕೋಟಿ ಡೋಸ್‌ಗೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು. ಭಾರತದ ಹಲವಾರು ರಾಜ್ಯಗಳಲ್ಲಿ ಕೊವಿಡ್ ಲಸಿಕೆ ಕೊರತೆ ಇದೆ.
ಕೋವಿಶೀಲ್ಡ್ ಲಸಿಕೆ 300 ರೂಪಾಯಿಗೆ ರಾಜ್ಯ ಸರ್ಕಾರಗಳಿಗೆ ಒದಗಿಸಲು ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಮ್ಮತಿ
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಕೊರೊನಾ ಸೋಂಕು ನಿರೋಧಕ ಲಸಿಕೆ ಕೋವಿಶೀಲ್ಡ್ನ ಪ್ರತಿ ಡೋಸ್ ₹ 300ಕ್ಕೆ ರಾಜ್ಯ ಸರ್ಕಾರಕ್ಕೆ ಒದಗಿಸಲು ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ಒಪ್ಪಿಕೊಂಡಿದ್ದಾರೆ.
ಕಂಪನಿಯು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇರುವ ಸಂಪನ್ಮೂಲದಲ್ಲಿಯೇ ಹೆಚ್ಚಿನ ಸಂಖ್ಯೆಯ ಲಸಿಕೆ ಬಾಟಲಿಗಳನ್ನು ಖರೀದಿಸಲು ರಾಜ್ಯಗಳಿಗೆ ಅನುಕೂಲ ಮಾಡಿಕೊಡಲೆಂದು ‘ಉದಾರ’ ಮನೋಭಾವದಿಂದ ಕಂಪನಿಯು ಲಸಿಕೆಯ ಬೆಲೆಯಲ್ಲಿ ಶೇ 25ರಷ್ಟು ರಿಯಾಯ್ತಿ ನೀಡಲು ನಿರ್ಧರಿಸಿದೆ. ಪ್ರತಿ ಡೋಸ್ ಇನ್ನು ಮುಂದೆ ರಾಜ್ಯ ಸರ್ಕಾರಗಳಿಗೆ ₹ 300ಕ್ಕೆ ಲಭ್ಯವಾಗಲಿದೆ ಎಂದು ಹೇಳಿದೆ.
ದೇಶದ ಅತಿದೊಡ್ಡ ಲಸಿಕೆ ಉತ್ಪಾದಕಾ ಕಂಪನಿಯಾಗಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈ ಹಿಂದೆ ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ನ ಪ್ರತಿ ಡೋಸ್ ₹ 400ಕ್ಕೆ ಒದಗಿಸಲು ಒಪ್ಪಿಕೊಂಡಿತ್ತು. ಖಾಸಗಿ ಆಸ್ಪತ್ರೆಗಳಿಗೆ ಈ ದರ ₹ 600 ಆಗಿರುತ್ತದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಕ್ಸ್‌ಫರ್ಡ್-ಆಸ್ಟ್ರಜೆನೆಕಾ ಲಸಿಕೆಯ ಭಾರತೀಯ ಆವೃತ್ತಿಯಾಗಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ನೀಡಲಾಗುತ್ತಿದೆ. ಇದರ ಜೊತೆಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನೂ ಭಾರತದಲ್ಲಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರಗಳಿಗೆ ಕೋವ್ಯಾಕ್ಸಿನ್ ₹ 600ಕ್ಕೆ ಸಿಗುತ್ತಿದೆ. ಖಾಸಗಿ ಆಸ್ಪತ್ರೆಗಳು ₹ 1200 ಪಾವತಿಸಿ ಪಡೆದುಕೊಳ್ಳುತ್ತಿವೆ.
ಇದನ್ನೂ ಓದಿ: ಬೆಂಗಳೂರಿನ ಕೆಲವೆಡೆ ಕೊರೊನಾ ಲಸಿಕೆ ಕೊರತೆ; ಎರಡನೇ ಡೋಸ್ ಪಡೆಯಲು ಬಂದವರಿಗೆ ಲಸಿಕೆಯೇ ಸಿಗುತ್ತಿಲ್ಲ
(India’s Covid19 vaccine shortage will continue till July vaccines is expected to increase in July says Serum Institute Adar Poonawalla)
Published On - 1:40 pm, Mon, 3 May 21