
ಲಕ್ನೋ, ಅಕ್ಟೋಬರ್ 08: ಪಾಟ್ನಾದಿಂದ ಉತ್ತರ ಪ್ರದೇಶದ ಲಕ್ನೋಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನಕ್ಕೆ ಸುಮಾರು 17,000 ಅಡಿ ಎತ್ತರದಲ್ಲಿ ಭೀಕರ ಸಿಡಿಲು ಬಡಿದ ಘಟನೆ ನಡೆದಿದೆ. ಸಿಡಿಲಾಘಾತದ ತೀವ್ರತೆಗೆ ವಿಮಾನದ ಮುಂಭಾಗ ಗಂಭೀರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್, ಪೈಲಟ್‌ಗಳ ಸಮಯಪ್ರಜ್ಞೆಯಿಂದಾಗಿ ವಿಮಾನದಲ್ಲಿದ್ದ 104 ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಇಂಡಿಗೋ ಸಂಸ್ಥೆಯ ವಿಮಾನ ಸಂಖ್ಯೆ 6E925 ಪಾಟ್ನಾ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 3.10ಕ್ಕೆ ಹೊರಟು ಸಂಜೆ 4.20ಕ್ಕೆ ಲಕ್ನೋ ತಲುಪಬೇಕಿತ್ತು.
ಲಕ್ನೋ ಸಮೀಪಿಸುತ್ತಿದ್ದಂತೆ ಪ್ರತಿಕೂಲ ಹವಾಮಾನ ಎದುರಾಗಿ ಭಾರೀ ಗುಡುಗು-ಮಿಂಚಿನ ನಡುವೆ ವಿಮಾನಕ್ಕೆ ಸಿಡಿಲು ಅಪ್ಪಳಿಸಿದೆ. ಪರಿಣಾಮವಾಗಿ ಮುಂಭಾಗದ ರೇಡಾರ್ ಕವಚ ಜಖಂಗೊಂಡಿತು. ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ ಪೈಲಟ್, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಸಂಜೆ 4.05ಕ್ಕೆ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು.
ಇದೇ ವಿಮಾನವು ಲಕ್ನೋದಿಂದ ಅಹಮದಾಬಾದ್‌ಗೆ (6E6968) ತೆರಳಬೇಕಿತ್ತು. ಹಾನಿಗೊಳಗಾದ ವಿಮಾನವನ್ನು ತಪಾಸಣೆಗಾಗಿ ಅಲ್ಲೇ ನಿಲ್ಲಿಸಿ, ಪ್ರಯಾಣಿಕರಿಗೆ ಮತ್ತೊಂದು ಬದಲಿ ವಿಮಾನ ವ್ಯವಸ್ಥೆ ಮಾಡಿ ಸಂಜೆ 6.22ಕ್ಕೆ ಅಹಮದಾಬಾದ್‌ಗೆ ಕಳುಹಿಸಿಕೊಡಲಾಯಿತು. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಅಗರ್ತಲಾಕ್ಕೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ವಿದ್ಯುತ್ ವ್ಯವಸ್ಥೆ ಸ್ಥಗಿತಗೊಂಡಿತ್ತು. 141 ಪ್ರಯಾಣಿಕರನ್ನು ಬದಲಿ ವಿಮಾನದಲ್ಲಿ ಕಳುಹಿಸಲಾಗಿತ್ತು.
ಮತ್ತಷ್ಟು ಓದಿ: ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನ ದಿಢೀರ್ 9,000 ಅಡಿಗೆ ಕುಸಿತ, ಎಮರ್ಜೆನ್ಸಿ ಘೋಷಣೆ: ಲಂಡನ್ಗೆ ವಾಪಸ್
ಬೆಂಗಳೂರಿನಲ್ಲಿ ಟೇಲ್-ಸ್ಟ್ರೈಕ್: ಕಳೆದ ತಿಂಗಳು ಗುವಾಹಟಿಯಿಂದ ಬೆಂಗಳೂರಿಗೆ ಬಂದಿದ್ದ ಇಂಡಿಗೋ A321 ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಬಾರಿ ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ ಬಾಲದ ಭಾಗವು ರನ್‌ವೇಗೆ ತಾಗಿ ಅಸಹಜ ಸಂಪರ್ಕ ಅನುಭವಿಸಿತ್ತು.
ಆಧುನಿಕ ವಿಮಾನಗಳನ್ನು ಅಲ್ಯೂಮಿನಿಯಂ ಅಥವಾ ವಾಹಕ ಜಾಲರಿಗಳಿಂದ ನಿರ್ಮಿಸಲಾಗಿರುತ್ತದೆ. ಸಿಡಿಲು ಬಡಿದಾಗ ವಿದ್ಯುತ್ ಪ್ರವಾಹವು ಹೊರಮೈ ಮೂಲಕ ಹರಿದು ವಿಮಾನದ ಬಾಲ ಅಥವಾ ರೆಕ್ಕೆಯ ತುದಿಯಿಂದ ಹೊರಹೋಗುತ್ತದೆ. ಆದರೆ ಕೆಲವೊಮ್ಮೆ ರೇಡಾರ್ ಇರುವ ಮುಂಭಾಗದ ಸಂಯೋಜಿತ ಫೈಬರ್ ಭಾಗಗಳಿಗೆ ನೇರ ಹೊಡೆತ ಬಿದ್ದಾಗ ಹೀಗೆ ಬಿರುಕು ಅಥವಾ ಗುಳಿ ಬೀಳುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ