ಹ್ಯಾಂಗ್ ಆಗಲ್ಲ, ಪಾವತಿ ವಿಫಲಗೊಳ್ಳಲ್ಲ,ಇನ್ಮುಂದೆ ರೈಲಿನಲ್ಲಿ ನೀವೇ ಆರಿಸಿಕೊಳ್ಳಿ ನಿಮ್ಮಿಷ್ಟದ ಸೀಟು, ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದ ಐಆರ್​ಸಿಟಿಸಿ

IRCTC New Website Launch: IRCTC ಹೊಸ ವೆಬ್‌ಸೈಟ್ ಈಗ ವೇಗದ ರೈಲು ಟಿಕೆಟ್ ಬುಕಿಂಗ್‌ಗೆ ಲಭ್ಯ. ಹ್ಯಾಂಗ್ ಆಗುವಿಕೆ, ಪಾವತಿ ವೈಫಲ್ಯಗಳು ಇನ್ನು ಇರಲ್ಲ. ಇನ್ಮುಂದೆ ನಿಮ್ಮಿಷ್ಟದ ಸೀಟು ಆರಿಸಿ, ಏಕ ಪರದೆಯಲ್ಲೇ ಸೀಟು ಲಭ್ಯತೆ ನೋಡಿ. ಫೇರ್ ಕ್ಯಾಲೆಂಡರ್, ಕಡಿಮೆ ಕ್ಯಾಪ್ಚಾದಂತಹ ವೈಶಿಷ್ಟ್ಯಗಳು ಲಭ್ಯ. ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕ್ ಮಾಡುವ ಸಾಮರ್ಥ್ಯದೊಂದಿಗೆ ಇದು IRCTC ಡಿಜಿಟಲ್ ರೂಪಾಂತರದ ಭಾಗವಾಗಿದೆ.

ಹ್ಯಾಂಗ್ ಆಗಲ್ಲ, ಪಾವತಿ ವಿಫಲಗೊಳ್ಳಲ್ಲ,ಇನ್ಮುಂದೆ ರೈಲಿನಲ್ಲಿ ನೀವೇ ಆರಿಸಿಕೊಳ್ಳಿ ನಿಮ್ಮಿಷ್ಟದ ಸೀಟು, ಹೊಸ ವೆಬ್​ಸೈಟ್ ಬಿಡುಗಡೆ ಮಾಡಿದ ಐಆರ್​ಸಿಟಿಸಿ
ರೈಲು

Updated on: Jul 15, 2026 | 12:23 PM

ನವದೆಹಲಿ, ಜುಲೈ 15: ರೈಲು ಟಿಕೆಟ್(Railway Ticket) ಬುಕ್ ಮಾಡುವಾಗ, ಅದರಲ್ಲೂ ವಿಶೇಷವಾಗಿ ಬೆಳಗ್ಗೆ 10 ಮತ್ತು 11 ಗಂಟೆಯ ‘ತತ್ಕಾಲ್’ ಸಮಯದಲ್ಲಿ ವೆಬ್‌ಸೈಟ್ ಹ್ಯಾಂಗ್ ಆಗಿ, ಪಾವತಿ ವಿಫಲಗೊಂಡು ಕೋಪಗೊಂಡ ಉದಾಹರಣೆಗಳು ನಿಮ್ಮ ಜೀವನದಲ್ಲಿ ನೂರಾರು ಇರಬಹುದು. ಆದರೆ ಇನ್ಮುಂದೆ ಆ ಕಿರಿಕಿರಿ ಇರುವುದಿಲ್ಲ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇಂದು ತನ್ನ ಸಂಪೂರ್ಣ ಹೊಸ ವಿನ್ಯಾಸದ, ಅಲ್ಟ್ರಾ-ಫಾಸ್ಟ್ ಟಿಕೆಟ್ ಬುಕಿಂಗ್ ವೆಬ್‌ಸೈಟ್ ಅನ್ನು ದೇಶಕ್ಕೆ ಸಮರ್ಪಿಸಿದೆ. ಹೊಸ ಪ್ಲಾಟ್‌ಫಾರ್ಮ್ ಕೇವಲ ನೋಡಲು ಸುಂದರವಾಗಿರದೆ, ಗರಿಷ್ಠ ದಟ್ಟಣೆಯ ಸಮಯದಲ್ಲಿಯೂ ಜಿಟಿ ಜಿಟಿ ಎನ್ನದೆ ಸೂಪರ್ ಫಾಸ್ಟ್ ಆಗಿ ಕೆಲಸ ಮಾಡುವ ಬಲಿಷ್ಠ ತಂತ್ರಜ್ಞಾನವನ್ನು ಹೊಂದಿದೆ. ಇಂದೇ ಈ ವೆಬ್​ಸೈಟ್ ಬಿಡುಗಡೆಗೊಳ್ಳಲಿದೆ.

ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಮರ್ಥ್ಯ

ಇದುವರೆಗೆ ಇದ್ದ ಹಳೆಯ ವೆಬ್‌ಸೈಟ್ ವ್ಯವಸ್ಥೆಯಲ್ಲಿ ಪ್ರತಿ ನಿಮಿಷಕ್ಕೆ ಕೇವಲ 32,000 ಟಿಕೆಟ್‌ಗಳನ್ನು ಮಾತ್ರ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ಇಂದಿನಿಂದ ಜಾರಿಗೆ ಬಂದಿರುವ ಹೊಸ ಇಂಟರ್ಫೇಸ್ ಪ್ರತಿ ನಿಮಿಷಕ್ಕೆ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡುವ ಬೃಹತ್ ಸಾಮರ್ಥ್ಯ ಹೊಂದಿದೆ.

ಅಷ್ಟೇ ಅಲ್ಲದೆ, ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಬ್ಯಾಕೆಂಡ್ ಅನ್ನು ನವೀಕರಿಸಲಾಗಿದ್ದು, ಹಿಂದೆ ನಿಮಿಷಕ್ಕೆ 4 ಲಕ್ಷ ಜನರು ಸರ್ಚ್ ಮಾಡಬಹುದಿತ್ತು, ಆದರೆ ಈಗ ನಿಮಿಷಕ್ಕೆ 40 ಲಕ್ಷಕ್ಕೂ ಹೆಚ್ಚು ಜನರು ಒಟ್ಟಿಗೆ ರೈಲುಗಳ ಸೀಟುಗಳ ಲಭ್ಯತೆಯನ್ನು ಪರಿಶೀಲಿಸಿದರೂ ವೆಬ್‌ಸೈಟ್ ಕಿಂಚಿತ್ತೂ ನಿಧಾನವಾಗುವುದಿಲ್ಲ.

ಪ್ರಯಾಣಿಕರ ಮನಗೆಲ್ಲಲಿರುವ 4 ಅದ್ಭುತ ಹೊಸ ಫೀಚರ್‌ಗಳು

ಕೇವಲ ವೇಗವಷ್ಟೇ ಅಲ್ಲ, ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಗಿನ ಸೂಪರ್ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

ಮತ್ತಷ್ಟು ಓದಿ: Train Ticket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕೆ!​

ನಿಮ್ಮಿಷ್ಟದ ಸೀಟು ಆಯ್ಕೆ: ಇದುವರೆಗೆ ಸೀಟುಗಳನ್ನು ಕಂಪ್ಯೂಟರ್ ತಾನಾಗಿಯೇ ಹಂಚುತ್ತಿತ್ತು . ಆದರೆ ಇನ್ಮುಂದೆ ನೀವು ಫ್ಲೈಟ್ ಟಿಕೆಟ್ ಬುಕ್ ಮಾಡುವ ಮಾದರಿಯಲ್ಲೇ, ಲಭ್ಯವಿರುವ ಸೀಟುಗಳ ಪೈಕಿ ನಿಮ್ಮ ನೆಚ್ಚಿನ ಸೀಟನ್ನು ನೀವೇ ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಳ್ಳಬಹುದು.

ಸಿಂಗಲ್ ಸ್ಕ್ರೀನ್ ಡಿಸ್ಪ್ಲೇ: ಹಿಂದೆ ಸ್ಲೀಪರ್, ಎಸಿ 3-ಟೈರ್, ಎಸಿ 2-ಟೈರ್ ಸೀಟುಗಳನ್ನು ನೋಡಲು ಪ್ರತ್ಯೇಕ ಟ್ಯಾಬ್‌ಗಳನ್ನು ಕ್ಲಿಕ್ ಮಾಡಬೇಕಿತ್ತು. ಈಗ ಒಂದೇ ಪರದೆಯ ಮೇಲೆ ಎಲ್ಲಾ ತರಗತಿಗಳ ಸೀಟುಗಳ ಲಭ್ಯತೆ ಕಾಣಿಸಲಿದೆ.

ಫೇರ್ ಕ್ಯಾಲೆಂಡರ್: ಒಂದು ವೇಳೆ ನಿಮ್ಮ ಪ್ರಯಾಣದ ದಿನಾಂಕ ಫ್ಲೆಕ್ಸಿಬಲ್ ಆಗಿದ್ದರೆ, ಯಾವ ದಿನದಂದು ಟಿಕೆಟ್ ದರ ಕಡಿಮೆ ಇದೆ ಅಥವಾ ಯಾವ ದಿನ ಸೀಟುಗಳು ಖಾಲಿ ಇವೆ ಎಂಬುದನ್ನು ಹೋಲಿಕೆ ಮಾಡಲು ‘ಫೇರ್ ಕ್ಯಾಲೆಂಡರ್’ ನೆರವಾಗಲಿದೆ.

ಕ್ಯಾಪ್ಚಾ ಕಿರಿಕಿರಿ ಮುಕ್ತಿ: ಪದೇ ಪದೇ ಬರುತ್ತಿದ್ದ ಅನಗತ್ಯ ಪಾಪ್-ಅಪ್‌ಗಳು, ಕಣ್ಣಿಗೆ ತೊಂದರೆ ಕೊಡುತ್ತಿದ್ದ ಜಾಹೀರಾತು ಬ್ಯಾನರ್‌ಗಳು ಮತ್ತು ಕಿರಿಕಿರಿ ಉಂಟುಮಾಡುತ್ತಿದ್ದ ಪುನರಾವರ್ತಿತ ‘ಕ್ಯಾಪ್ಚಾ (ಪರಿಶೀಲನೆ’ಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ.

ಪ್ರಾದೇಶಿಕ ಭಾಷೆಗಳ ಬೆಂಬಲ

ಹೊಸ ವೆಬ್‌ಸೈಟ್‌ನಲ್ಲಿ ಕನ್ನಡ ಸೇರಿದಂತೆ ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಮುಂದೆ ವಿದ್ಯಾರ್ಥಿಗಳು, ದಿವ್ಯಾಂಗ ಪ್ರಯಾಣಿಕರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ತಮ್ಮ ರಿಯಾಯಿತಿ ಟಿಕೆಟ್‌ಗಳನ್ನು ಯಾವುದೇ ಕಚೇರಿಗೆ ಅಲೆಯದೆ ಇದೇ ಏಕೀಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ಸುಲಭವಾಗಿ ಪಡೆಯಬಹುದು.

ಡಿಜಿಟಲ್ ರೈಲ್ವೆಯತ್ತ ಭಾರತದ ಹೆಜ್ಜೆ

ಈ ವೆಬ್‌ಸೈಟ್ ಉದ್ಘಾಟನೆಯು ಭಾರತೀಯ ರೈಲ್ವೆಯಲ್ಲಿ ನಡೆಯುತ್ತಿರುವ ಬೃಹತ್ ಡಿಜಿಟಲ್ ರೂಪಾಂತರದ ಒಂದು ಭಾಗವಾಗಿದೆ.

ಸೂಪರ್ ಆ್ಯಪ್ ಸದ್ಯದಲ್ಲೇ?: ರೈಲ್ವೆ ಇಲಾಖೆಯ ಆಂತರಿಕ ಮೂಲಗಳ ಪ್ರಕಾರ, ವೆಬ್‌ಸೈಟ್ ನವೀಕರಣದ ಬೆನ್ನಲ್ಲೇ ಐಆರ್‌ಸಿಟಿಸಿ, ಇನ್ಮುಂದೆ ಟಿಕೆಟ್ ಬುಕಿಂಗ್, ಲೈವ್ ಟ್ರೈನ್ ಸ್ಟೇಟಸ್, ಪಿಎನ್ಆರ್ ಚೆಕಿಂಗ್ ಮತ್ತು ರೈಲಿಗೆ ಆಹಾರ ಆರ್ಡರ್ ಮಾಡುವ ಎಲ್ಲಾ ಸೇವೆಗಳನ್ನೊಳಗೊಂಡ ಒಂದೇ ಒಂದು ‘ಸೂಪರ್ ಆ್ಯಪ್’ ಅನ್ನು ಸಹ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಒಟ್ಟಾರೆಯಾಗಿ, ಹಬ್ಬದ ಸೀಸನ್‌ಗಳಲ್ಲಿ ಊರಿಗೆ ಹೋಗಲು ಟಿಕೆಟ್ ಸಿಗದೆ ಪರದಾಡುತ್ತಿದ್ದ ಭಾರತೀಯ ಮಧ್ಯಮ ವರ್ಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಇಂದಿನಿಂದ ಅತ್ಯಂತ ಸುಲಭ ಹಾಗೂ ವಿಶ್ವಾಸಾರ್ಹ ಡಿಜಿಟಲ್ ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:10 pm, Wed, 15 July 26

Loading...
Unable to load recommendations.
Follow Us