ದೆಹಲಿ: 3ನೇ ಹಂತದ ಲಾಕ್ಡೌನ್ ಮುಗಿಯಲು ಕೌಂಟ್ಡೌನ್ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ 3rd ಸ್ಟೇಜ್ ಲಾಕ್ಡೌನ್ ಡೇಟ್ ಕೊನೆಯಾಗುತ್ತೆ. ಹೀಗಾಗಿ ನಿನ್ನೆ ಪಿಎಂ ಮೋದಿ ಮಹತ್ವದ ಸಭೆ ನಡೆಸಿದ್ರು. ಎಲ್ಲಾ ರಾಜ್ಯಗಳ ಸಿಎಂಗಳು ಈ ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಹಾಗಾದ್ರೆ ಲಾಕ್ಡೌನ್ ಎಂಡ್ ಆಗುತ್ತಾ ಅಥವಾ ಮತ್ತೆ ಮುಂದಕ್ಕೆ ಹೋಗುತ್ತಾ..? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಆರ್ಥಿಕ ವಿಚಾರ ಬದಿಗಿಟ್ಟು ಕೋಟ್ಯಂತರ ಜೀವಗಳನ್ನ ಉಳಿಸುವುದಕ್ಕಾಗಿ ಲಾಕ್ಡೌನ್ ಘೋಷಣೆಯಾಗಿತ್ತು. ಕಿಲ್ಲರ್ ಕೊರೊನಾ ಸಾವಿನ ಜಾಲ ದೇಶಾದ್ಯಂತ ವಿಸ್ತರಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಹೀಗೆ ಇದುವರೆಗೂ ಒಟ್ಟು 3 ಹಂತದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಮೇ 17ಕ್ಕೆ 3ನೇ ಹಂತದ ಲಾಕ್ಡೌನ್ ಕೂಡ ಎಂಡ್ ಆಗಲಿದೆ. ಆದ್ರೆ ಲಾಕ್ಡೌನ್ ಪರ್ವ ಇಲ್ಲಿಗೆ ಮುಗಿಯುತ್ತಾ? ಇಲ್ಲ ಮತ್ತೆ ಮುಂದುವರಿಯುತ್ತಾ ಅನ್ನೋ ಪ್ರಶ್ನೆಗೆ ನಿನ್ನೆ ನಡೆದ ಪ್ರಧಾನಿ ಮೋದಿ ನೇತೃತ್ವದ ಸಭೆ ಭಾಗಶಃ ಉತ್ತರ ನೀಡಿದೆ.
ಲಾಕ್ಡೌನ್ 4.0ಗೂ ನಡೆದಿದೆಯಾ ಸಿದ್ಧತೆ?
ಯೆಸ್, ಅತ್ತ ಲಾಕ್ಡೌನ್ ಮುಗಿಯಲಿದೆ ಅಂತಾ ಜನ ಅತ್ಯುತ್ಸಾಹದಲ್ಲಿದ್ದರೆ. ಮತ್ತೊಂದ್ಕಡೆ ಕೆಲ ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಾ ಸಾಗಿದೆ. ಇದೆಲ್ಲದ್ರ ಪರಿಣಾಮ ದೇಶದ ಬಹುಪಾಲು ರಾಜ್ಯಗಳು ಲಾಕ್ಡೌನ್ ಪರ ಇದ್ದರೂ, ಆರ್ಥಿಕ ಚಟುವಟಿಕೆ ಮುಂದುವರಿಸಬೇಕೆಂಬ ಸಲಹೆಯನ್ನೂ ನೀಡಿವೆ. ಹಾಗಾದ್ರೆ ಯಾರ ಯಾರ ಅಭಿಪ್ರಾಯ ಏನಾಗಿತ್ತು ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ.
ಲಾಕ್ಡೌನ್ ಯಾರಿಗೆ ಬೇಕು?
ಮಹಾರಾಷ್ಟ್ರದಲ್ಲೇ ಅತಿಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದವರೆಗೂ ಮಹಾರಾಷ್ಟ್ರದಲ್ಲಿ 22,171 ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಆದೇಶ ಹಿಂಪಡೆಯದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಪಡೆಗಳ ಸಹಕಾರವನ್ನೂ ಉದ್ಧವ್ ಠಾಕ್ರೆ ಕೋರಿದ್ದಾರೆ.
ಮಹಾರಾಷ್ಟ್ರದಂತೆ ಪಶ್ಚಿಮ ಬಂಗಾಳ ಕೂಡ ಲಾಕ್ಡೌನ್ ಪರವಿದ್ದು, ಯಾವುದೇ ಕಾರಣಕ್ಕೂ ಲಾಕ್ಡೌನ್ ಹಿಂಪಡೆಯಬೇಡಿ ಅಂತಾ ಮನವಿ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಬೇಡ ಅಂತಾ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಟಾಂಗ್ ನೀಡಿದ್ದಾರೆ. ಅಲ್ಲದೆ ಈ ಹೋರಾಟದಲ್ಲಿ ಒಗ್ಗಟ್ಟಿನ ಮಂತ್ರವನ್ನೂ ಅವರು ಜಪಿಸಿದ್ದಾರೆ.
7204 ಕೊರೊನಾ ಕೇಸ್ಗಳು ಕನ್ಫರ್ಮ್ ಆಗಿರುವ ತಮಿಳುನಾಡಿನ ಪರಿಸ್ಥಿತಿಯೂ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಹೀಗಾಗಿ ತಮಿಳುನಾಡಿನಲ್ಲಿ ರೈಲು, ವಿಮಾನ ಸಂಚಾರ ಆರಂಭಿಸದಂತೆ ವಿರೋಧ ವ್ಯಕ್ತವಾಗಿದೆ. ಮೇ 31ರವರೆಗೆ ಈ ನಿಯಮ ಪಾಲಿಸುವಂತೆ ತಮಿಳುನಾಡು ಸಿಎಂ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಈ ಮೂಲಕ ಲಾಕ್ಡೌನ್ 4.0ಗೆ ಪಳನಿಸ್ವಾಮಿ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಂತೆಯೇ ತೆಲಂಗಾಣ ಕೂಡ ರೈಲುಗಳ ಓಡಾಟಕ್ಕೆ ವಿರೋಧ ವ್ಯಕ್ತಪಡಿಸಿದೆ. ಈವರೆಗೂ ತೆಲಂಗಾಣದಲ್ಲಿ 1196 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಜನರ ಓಡಾಟ ಹೆಚ್ಚಾದರೆ ಮತ್ತಷ್ಟು ಅಪಾಯ ಎಂಬ ಸಂದೇಶವನ್ನ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ನೀಡಿದ್ದಾರೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು 7 ಸಾವಿರದಷ್ಟು ಕೊರೊನಾ ಕೇಸ್ಗಳು ಕನ್ಫರ್ಮ್ ಆಗಿವೆ. ಆದರೂ ಆರ್ಥಿಕ ಚಟುವಟಿಕೆ ಪುನಾರಂಭಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಇದೇ ವೇಳೆ ರೆಡ್ ಝೋನ್ ಹೊರತುಪಡಿಸಿ ಉಳಿದೆಡೆ ವಿನಾಯಿತಿ ನೀಡುವಂತೆ ಕೇಜ್ರಿ ಸಲಹೆ ನೀಡಿದ್ದಾರೆ.
ಭಾಗಶಃ ದೆಹಲಿ ಸಿಎಂ ರೀತಿಯ ಅಭಿಪ್ರಾಯವನ್ನೇ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಕೂಡ ವ್ಯಕ್ತಪಡಿಸಿದ್ದಾರೆ. ಪಂಜಾಬ್ನಲ್ಲಿ ಇಲ್ಲಿಯವರೆಗೂ 1823 ‘ಕೊರೊನಾ’ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಕ್ರಮ ಕೈಗೊಂಡು ಆರ್ಥಿಕತೆ ಪುನಾರಂಭಕ್ಕೆ ಅಮರೀಂದರ್ ಸಿಂಗ್ ಮನವಿ ಮಾಡಿದ್ದಾರೆ.
ಇದಿಷ್ಟೇ ಅಲ್ಲ, ಆಂಧ್ರಪ್ರದೇಶ, ಕೇರಳ, ರಾಜಸ್ಥಾನ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಲಾಕ್ಡೌನ್ ಮುಂದುವರಿಸುವ ಬಗ್ಗೆ ಸಲಹೆ ನೀಡಿವೆ. ಆದ್ರೆ ಲಾಕ್ಡೌನ್ ನಡುವೆಯೂ ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸದಂತೆ ಮನವಿ ಮಾಡಿವೆ.
ಲಾಕ್ಡೌನ್ 4.0 ಫಿಕ್ಸ್?
ಲಾಕ್ಡೌನ್ 3.0 ಘೋಷಿಸುವಾಗ ನೀಡಿದ್ದ ವಿನಾಯಿತಿಗಳ ನಿಯಮವನ್ನ ಮತ್ತೆ ಅನುಸರಿಸಬಹುದು. ಅಲ್ಲದೆ ‘ಗ್ರೀನ್ ಜೋನ್’ಗಳನ್ನ ಬಿಟ್ಟು ಉಳಿದ ಪ್ರದೇಶಗಳಲ್ಲಿ ಇನ್ನಷ್ಟು ಬಿಗಿ ನಿಲುವುಗಳನ್ನ ಜಾರಿಗೊಳಿಸುವ ಸಾಧ್ಯತೆ ಇದೆ. ಮತ್ತೊಂದ್ಕಡೆ ಜೋನ್ಗಳ ವಿಂಗಡಣೆಯಲ್ಲೂ ಕೇಂದ್ರ ಸರ್ಕಾರ ಬದಲಾವಣೆ ತರುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಲಾಕ್ಡೌನ್ 3.0ಗಿಂತ ಮತ್ತಷ್ಟು ಡಿಸ್ಕೌಂಟ್ಕೊಟ್ಟು ಲಾಕ್ಡೌನ್4.0 ಜಾರಿ ಮಾಡಬಹುದು ಎನ್ನಲಾಗ್ತಿದೆ.
ಒಟ್ನಲ್ಲಿ ನಿನ್ನೆ ನಡೆದ ಸುದೀರ್ಘ ಚರ್ಚೆ ಲಾಕ್ಡೌನ್ ನಿಯಮದಲ್ಲಿ ಹಲವು ಬದಲಾವಣೆಗೆ ಕಾರಣವಾಗುವ ಹಿಂಟ್ ಕೊಟ್ಟಿದೆ. ಒಂದ್ಕಡೆ ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತಬೇಕು, ಇದರ ಜೊತೆಗೇ ಕೊರೊನಾ ಸೋಂಕಿಗೂ ಒಂದು ಗತಿ ಕಾಣಿಸಬೇಕು. ಇದು ಬಹುದೊಡ್ಡ ಸವಾಲಿನ ಕೆಲಸವಾದ್ರೂ ಆರ್ಥಿಕತೆಯ ಬಾಗಿಲನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ. ಇದನ್ನೇ ಪ್ರಧಾನಿ ಮೋದಿ ಕೂಡ ಪ್ರತಿಪಾದಿಸಿದ್ದು, ಲಾಕ್ಡೌಣ್ 4.0 ಭವಿಷ್ಯ ಇನ್ನೇನು ಕೆಲವೇ ದಿನಗಳಲ್ಲಿ ಡಿಸೈಡ್ ಆಗಲಿದೆ.