BBC: ಬಿಬಿಸಿ ಕಚೇರಿ ಮೇಲೆ ಐಟಿ ಶೋಧ, ಎರಡನೇ ದಿನವೂ ಮುಂದುವರಿಕೆ; ಕಾಗದ ರೂಪದ ದಾಖಲೆಗಳ ಇ-ಕಾಪಿ ತಯಾರಿಕೆ

|

Updated on: Feb 15, 2023 | 2:18 PM

IT Survey On BBC Office: ತೆರಿಗೆ ವಂಚನೆ ಆರೋಪದ ಮೇಲೆ ಲಂಡನ್ ಮೂಲದ ಬಿಬಿಸಿ ಮಾಧ್ಯಮ ಸಂಸ್ಥೆಯ ದೆಹಲಿ ಕಚೇರಿಯಲ್ಲಿ ಐಟಿ ಅಧಿಕಾರಿಗಳ ತಂಡ ಬುಧವಾರವೂ ಪರಿಶೀಲನೆಗಳನ್ನು ಕೈಗೊಂಡಿದೆ. ಇಂದು ಕೆಲ ಕಾಗದಪತ್ರಗಳ ಇ-ಪ್ರತಿ ತಯಾರಿಸುವ ಕೆಲಸ ಮಾಡಲಾಗಿದೆ.

BBC: ಬಿಬಿಸಿ ಕಚೇರಿ ಮೇಲೆ ಐಟಿ ಶೋಧ, ಎರಡನೇ ದಿನವೂ ಮುಂದುವರಿಕೆ; ಕಾಗದ ರೂಪದ ದಾಖಲೆಗಳ ಇ-ಕಾಪಿ ತಯಾರಿಕೆ
ಬಿಬಿಸಿ ಕಚೇರಿ
Follow us on

ನವದೆಹಲಿ: ಬಿಬಿಸಿ ಕಚೇರಿಯಲ್ಲಿ ಐಟಿ ಅಧಿಕಾರಿಗಳ ನಡೆಸುತ್ತಿರುವ ಶೋಧ ಕಾರ್ಯಾಚರಣೆ (IT Survey In BBC Office) ಎರಡನೇ ದಿನವೂ ನಡೆದಿದೆ. ಬುಧವಾರ ಐಟಿ ಅಧಿಕಾರಿಗಳು ಬಿಬಿಸಿ ಕಚೇರಿಯಲ್ಲಿರುವ ಹಣಕಾಸು ದತ್ತಾಂಶದ ಕಾಗದಪತ್ರಗಳ ಇಪ್ರತಿಯನ್ನು ತಯಾರಿಸಿದೆ ಎಂದು ಹೇಳಲಾಗುತ್ತಿದೆ.

ಬಿಬಿಸಿಯಿಂದ ತೆರಿಗೆ ವಂಚನೆ ಆಗಿರುವ ಆರೋಪದ ಹಿನ್ನೆಲೆಯಲ್ಲಿ ಐಟಿ ಇಲಾಖೆ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ನಿನ್ನೆ ಬೆಳಗ್ಗೆ 11:30ಗಂಟೆಗೆ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಿಗೆ ಐಟಿ ಅಧಿಕಾರಿಗಳ ತಂಡಗಳು ಹೋಗಿ ಪರಿಶೀಲನೆ ಆರಂಭಿಸಿದ್ದವು. ಆರಂಭದಲ್ಲಿ ಇದು ಐಟಿ ರೇಡ್ ಎಂಬ ಮಾಹಿತಿ ಮಾಧ್ಯಮಗಳಿಗೆ ಬಂದಿತ್ತು. ಆದರೆ ಇದು ರೇಡ್ ಅಲ್ಲ, ಕೇವಲ ಸರ್ವೆ ಮಾತ್ರ ಮಾಡಲಾಗುತ್ತಿದೆ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿತು.

2012ರಿಂದ ಇಲ್ಲಿಯವರೆಗೆ ಬಿಬಿಸಿ ಕಚೇರಿಯಲ್ಲಿ ದಾಖಲಾದ ಹಣಕಾಸು ವಿವರವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಮೊಬೈಲ್​ಗಳ ದತ್ತಾಂಶಗಳನ್ನು ಬೇರೆ ಮೊಬೈಲ್​ಗೆ ನಕಲು ಮಾಡಿಕೊಳ್ಳಲಾಗಿದೆ.

ಬಿಬಿಸಿ ಅಂಗ ಸಂಸ್ಥೆಗಳ ವರ್ಗಾವಣೆ ವೆಚ್ಚ ಮತ್ತು ಅಂತಾರಾಷ್ಟ್ರೀಯ ತೆರಿಗೆ ಪಾವತಿಯಲ್ಲಿ ಅಕ್ರಮಗಳು ನಡೆದಿವೆ ಎಂಬುದು ಆರೋಪ. ಲಂಡನ್ ಮೂಲದ ಬಿಬಿಸಿ ಸಂಸ್ಥೆಗೆ ಈ ಪ್ರಕರಣದಲ್ಲಿ ಹಿಂದೆ ಕೆಲ ಬಾರಿ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಅದಕ್ಕೆ ಸಂಸ್ಥೆ ಸಹಕರಿಸಿರಲಿಲ್ಲ. ಹೀಗಾಗಿ, ಕಚೇರಿಗಳಿಗೆ ಹೋಗಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮಾಡಿದ್ದಾರೆ.

ಪ್ರತೀಕಾರ ಕ್ರಮ ಎಂದು ಟೀಕೆ

ಕೆಲ ವಾರಗಳ ಹಿಂದೆ ಬಿಬಿಸಿ ಗುಜರಾತ್ ಗಲಭೆ ಘಟನೆಗಳ ಬಗ್ಗೆ ಎರಡು ಸಂಚಿಕೆಯ ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಿತ್ತು. ಗಲಭೆ ಘಟನೆಗೆ ಸರ್ಕಾರ ಹೇಗೆ ಪ್ರಚೋದನೆ ಕೊಟ್ಟಿತು, ಆಗ ಸಿಎಂ ಆಗಿದ್ದ ನರೇಂದ್ರ ಮೋದಿ ಪಾತ್ರ ಏನಿತ್ತು ಎಂಬಿತ್ಯಾದಿ ಸಂಗತಿಯನ್ನು ಕೆಲ ಸಾಕ್ಷಿಗಳನ್ನು ಉಲ್ಲೇಖಿಸಿ ಡಾಕ್ಯುಮೆಂಟರಿ ಮಾಡಲಾಗಿತ್ತು.

ಈ ಸಾಕ್ಷ್ಯಚಿತ್ರವನ್ನು ಸರ್ಕಾರ ನಿಷೇಧಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದ ಎಲ್ಲಾ ವಿಡಿಯೋಗಳನ್ನು ತೆಗೆದುಹಾಕಲಾಗಿದೆ. ವಿದೇಶಗಳಲ್ಲಿ ಮಾತ್ರ ಈ ಸಾಕ್ಷ್ಯಚಿತ್ರವನ್ನು ನೋಡಬಹುದು. ಜೆಎನ್​ಯು ಮೊದಲಾದ ಕೆಲ ಕಡೆ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಿದವರ ಮೇಲೆ ಸರ್ಕಾರ ಕ್ರಮ ಕೂಡ ಕೈಗೊಂಡಿತು.

ಗುಜರಾತ್ ಗಲಭೆ ಘಟನೆ ವಿಚಾರದಲ್ಲಿ ನರೇಂದ್ರ ಮೋದಿ ಪಾತ್ರ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ಕ್ಲೀನ್ ಚಿಟ್ ಕೊಟ್ಟಿದೆ. ಅದರೂ ಕೂಡ ಪ್ರಧಾನಿಯ ತೇಜೋವಧೆ ಮಾಡುವ ಪಿತೂರಿಯೊಂದಿಗೆ ಈ ಸಾಕ್ಷ್ಯಚಿತ್ರವನ್ನು ಚುನಾವಣಾ ಸಮಯದಲ್ಲಿ ಬಿಡುಗಡೆ ಮಾಡಲಾಗಿದೆ ಎಂಬುದು ಸರ್ಕಾರದ ಸಮರ್ಥಕರ ವಾದ.

ಬಿಬಿಸಿ ಡಾಕ್ಯುಮೆಂಟರಿ ಬಿಡುಗಡೆಗೆ ಪ್ರತಿಯಾಗಿ ಸರ್ಕಾರ ಪ್ರತೀಕಾರ ಕ್ರಮವಾಗಿ ಕಚೇರಿಗಳ ಮೇಲೆ ದಾಳಿ ಮಾಡಿಸಿದೆ ಎಂದು ವಿಪಕ್ಷಗಳು ಟೀಕಿಸಿವೆ.

Published On - 2:18 pm, Wed, 15 February 23