‘ಬೇಟಿ ಬಚಾವೋ, ಬೇಟಿ ಪಡಾವೋ’ ಬಗ್ಗೆ ಮರು ಚಿಂತನೆ ನಡೆಸಿ; ಬಿಜೆಪಿಗೆ ಅಖಿಲೇಶ್ ಯಾದವ್ ಸಲಹೆ

|

Updated on: Jun 10, 2023 | 6:10 PM

‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ತನ್ನ ಘೋಷಣೆಯನ್ನು ಬಿಜೆಪಿ ಮರುಚಿಂತನೆ ಮಾಡಿಕೊಳ್ಳಬೇಕು. ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಬೇಡಿಕೆ ಇಟ್ಟಾಗ ಅವರಿಗೆ ನ್ಯಾಯ ದೊರಕಿಸುವುದು ಬಿಜೆಪಿಯ ಜವಾಬ್ದಾರಿ ಎಂದಿದ್ದಾರೆ ಅಖಿಲೇಶ್.

‘ಬೇಟಿ ಬಚಾವೋ, ಬೇಟಿ ಪಡಾವೋ’ ಬಗ್ಗೆ ಮರು ಚಿಂತನೆ ನಡೆಸಿ; ಬಿಜೆಪಿಗೆ ಅಖಿಲೇಶ್ ಯಾದವ್ ಸಲಹೆ
ಅಖಿಲೇಶ್ .ಯಾದವ್
Follow us on

ಭಾರತ ಕುಸ್ತಿಪಟುಗಳ ಒಕ್ಕೂಟದ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ ಕುರಿತು ಮಾತನಾಡಿದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗುವಂತೆ ಮಾಡುವುದು ಬಿಜೆಪಿಯ ಪಕ್ಷದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ತನ್ನ ಘೋಷಣೆಯನ್ನು ಬಿಜೆಪಿ ಮರುಚಿಂತನೆ ಮಾಡಿಕೊಳ್ಳಬೇಕು. ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಬೇಡಿಕೆ ಇಟ್ಟಾಗ ಅವರಿಗೆ ನ್ಯಾಯ ದೊರಕಿಸುವುದು ಬಿಜೆಪಿಯ ಜವಾಬ್ದಾರಿ ಎಂದಿದ್ದಾರೆ ಅಖಿಲೇಶ್.

ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾದಲ್ಲಿ ಮುಳುಗಿಸಲು ಹರಿದ್ವಾರಕ್ಕೆ ತೆರಳುವುದಾಗಿ ಘೋಷಿಸಿದಾಗ ಅಖಿಲೇಶ್ ಯಾದವ್ ಅವರು, “ಈ ಬಾರಿ ತಾಯಿ ಗಂಗಾ ಹೆಣ್ಣು ಮಕ್ಕಳನ್ನು ಕರೆದಿದ್ದಾರೆ “ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಕುರಿತಾದ ಬಿಜೆಪಿಯ ಎಲ್ಲಾ ಘೋಷಣೆಗಳು ಪೊಳ್ಳು ಮತ್ತು ಮಹಿಳೆಯರ ಮತಗಳನ್ನು ಕಸಿದುಕೊಳ್ಳಲು ಮಾತ್ರ ಎಂದು ಇಂದಿನ ಘಟನೆ ಸ್ಪಷ್ಟಪಡಿಸಿದೆ #MurderOfDemocracy ಎಂದು ಟ್ವೀಟ್ ಮಡಿದ್ದಾರೆ.

ಜೂನ್ 15ರವರೆಗೆ ಕಾಲಾವಕಾಶ ಕೋರಿದ ಕೇಂದ್ರ ಸರ್ಕಾರ

ತನಿಖೆಯನ್ನು ಮುಕ್ತಾಯಗೊಳಿಸಲು ಕೇಂದ್ರವು ಜೂನ್ 15 ರವರೆಗೆ ಸಮಯ ಕೇಳಿದೆ, ಆದರೆ ಕುಸ್ತಿಪಟುಗಳ ಪ್ರತಿಭಟನೆ ಇನ್ನೂ ಮುಗಿದಿಲ್ಲ ಎಂದು ಸಾಕ್ಷಿ ಮಲಿಕ್ ಬುಧವಾರ ಹೇಳಿದ್ದಾರೆ. ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾದ ನಂತರ ಮಲಿಕ್ ಈ ಹೇಳಿಕೆ ನೀಡಿದ್ದಾರೆ. ಜೂನ್ 15 ರೊಳಗೆ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸುವವರೆಗೆ ನಮ್ಮ ಪ್ರತಿಭಟನೆಯನ್ನು ರದ್ದು ಮಾಡುವಂತೆ ನಮಗೆ ಕೇಳಲಾಗಿದೆ ಎಂದಿದ್ದಾರೆ ಅವರು.

ನಾವು ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಪೊಲೀಸ್ ತನಿಖೆಯನ್ನು ಜೂನ್ 15 ರೊಳಗೆ ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಡೆಸದಂತೆ ಸಚಿವರು ನಮಗೆ ಮನವಿ ಮಾಡಿದ್ದಾರೆ. ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ನೋಡಿಕೊಳ್ಳಲಾಗುವುದುಎಂದು ಅವರು ಹೇಳಿದರು. ಕುಸ್ತಿಪಟುಗಳ ವಿರುದ್ಧದ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಎಂದು ನಾವು ಮನವಿ ಮಾಡಿದ್ದೇವೆ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

ಒಲಿಂಪಿಕ್ ಪದಕ ವಿಜೇತರಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ವಿಜೇತ ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು, ಅದರಲ್ಲಿ ಒಂದನ್ನು ಅಪ್ರಾಪ್ತ ಬಾಲಕಿ ವಾಪಸ್ ಪಡೆದಿದ್ದಾಳೆ.

ಮೇ 10 ರಂದು, ಬಾಲಕಿ ಬ್ರಿಜ್ ಭೂಷಣ್ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 164 ರ ಅಡಿಯಲ್ಲಿ ನವದೆಹಲಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಳು. ಡಬ್ಲ್ಯುಎಫ್‌ಐ ಮುಖ್ಯಸ್ಥರು ಅವಳನ್ನು ಬಲವಂತವಾಗಿ ತನ್ನ ಕಡೆಗೆ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಘಟನೆ ನಂತರ ಅವಳು ವಿಚಲಿತಳಾಗಿದ್ದಳು. ನಂತರ ಆಕೆಗೆ ಆರೋಗ್ಯ ಸಮಸ್ಯೆಗಳ ಕಾಣಿಸಿಕೊಂಡಿತ್ತು ಎಂದು ದೂರಿನಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ: ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು ನಾನು ನೋಡಿದ್ದೇನೆ: ರೆಫರಿ ಸಾಕ್ಷ್ಯ

ಎಫ್‌ಐಆರ್‌ನಲ್ಲಿ, ಬ್ರಿಜ್ ಭೂಷಣ್ ತನ್ನ ಭುಜವನ್ನು ಬಲವಾಗಿ ಒತ್ತಿ ಉದ್ದೇಶಪೂರ್ವಕವಾಗಿ ಭುಜದ ಕೆಳಗೆ ಕೈ ಹಾಕಿದ್ದಾನೆ ಎಂದು ಹುಡುಗಿಯ ತಂದೆ ಆರೋಪಿಸಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರು ನೀನು ನನಗೆ ಸಹಕರಿಸು, ನಾನು ನಿನಗೆ ಸಹಕರಿಸುತ್ತೇನೆ, ಸಂಪರ್ಕದಲ್ಲಿರು ಎಂದು ಕುಸ್ತಿಪಟುವಿನಲ್ಲಿ ಹೇಳಿರುವುದಾಗಿ ಆರೋಪವಿದೆ.

ಆದಾಗ್ಯೂ, ದೂರು ನೀಡಿದ್ದ ಕುಸ್ತಿಪಟುವಿನ ಅಪ್ಪ, ಇತ್ತೀಚೆಗೆ ನಾನು ಮತ್ತು ನನ್ನ ಮಗಳು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥರ ವಿರುದ್ಧ ಕೆಲವು “ಸುಳ್ಳು ಆರೋಪಗಳನ್ನು” ಮಾಡಿರುವುದಾಗಿ ಹೇಳಿ ದೂರು ವಾಪಸ್ ಪಡೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ