Narendra Modi: ಮೋದಿ ವಿಶ್ವದಲ್ಲೇ ಅತ್ಯಂತ ಜನಪ್ರಿಯ, ಪ್ರಮುಖ ನಾಯಕ; ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಶ್ಲಾಘನೆ

|

Updated on: Mar 02, 2023 | 8:34 PM

ನರೇಂದ್ರ ಮೋದಿ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ನಾಯಕ ಎಂದು ಬಣ್ಣಿಸಿrಉವ ಜಾರ್ಜಿಯಾ ಮೆಲೋನಿ, ಮೋದಿ ಅವರು ವಿಶ್ವದ ಪ್ರಮುಖ ನಾಯಕರಾಗಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ವಿಶ್ವದಲ್ಲೇ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ನಾಯಕ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಬಣ್ಣಿಸಿದ್ದಾರೆ. ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರು ವಿಶ್ವದ ಪ್ರಮುಖ ನಾಯಕರಾಗಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರು ಜಾಗತಿಕ ಮಟ್ಟದ ಎಲ್ಲ ನಾಯಕರ ಪೈಕಿ ಅತ್ಯಂತ ಪ್ರೀತಿಪಾತ್ರರಾಗಿದ್ದಾರೆ. ಅವರು ಜಾಗತಿಕ ಮಟ್ಟದ ಪ್ರಮುಖ ನಾಯಕ ಎಂಬುದು ಸಾಬೀತಾಗಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ರಕ್ಷಣೆ, ಇಂಧನ, ಸೈಬರ್ ಭದ್ರತೆ ಹಾಗೂ ಇತರ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಭಾಗಿತ್ವವನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದೂ ಅವರು ತಿಳಿಸಿದರು.

ಭಾರತ – ಇಟಲಿ ನಡುವಣ ಬಾಂಧವ್ಯ ಬಲವಾಗಿದೆ. ಹೀಗಾಗಿ ನಾವು ಕಾರ್ಯತಂತ್ರದ ಪಾಲುದಾರರಾಗಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ರಷ್ಯಾ – ಉಕ್ರೇನ್ ಯುದ್ಧವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದನ್ನು ಭಾರತ ಆರಂಭದಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ ಎಂದು ಮೋದಿ ಹೇಳಿದರು. ಉಕ್ರೇನ್ ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಭಾರತ ಪೂರ್ಣ ಸಿದ್ಧವಿದೆ. ಇಂಡೋ-ಪೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ಕೈಗೊಳ್ಳಲಾಗುವ ಉಪಕ್ರಮಕ್ಕೆ ಸೇರಲು ಇಟಲಿ ನಿರ್ಧರಿಸಿರುವುದು ಸಂತಸದ ವಿಚಾರ ಎಂದೂ ಅವರು ತಿಳಿಸಿದರು.

ಇದನ್ನೂ ಓದಿ: Narendra Modi: ಉಕ್ರೇನ್ ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಿದ್ಧ; ಇಟಲಿ ಪ್ರಧಾನಿ ಭೇಟಿ ಬಳಿಕ ಮೋದಿ ಹೇಳಿಕೆ

ಭಯೋತ್ಪಾದನೆ, ಪ್ರತ್ಯೇಕತಾವಾದದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಟಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ ಎಂದು ಉಭಯ ನಾಯಕರು ಹೇಳಿದರು.

ಇದಕ್ಕೂ ಮುನ್ನ ‘8ನೇ ರೈಸಿನಾ ಡೈಲಾಗ್ 2023’ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಎರಡು ದಿನಗಳ ಭಾರತ ಭೇಟಿಗೆ ಬಂದಿರುವ ಮೆಲೋನಿ ಅವರನ್ನು ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಲಾಯಿತು. ಮೋದಿಯವರು ಇಟಲಿ ಪ್ರಧಾನಿಯನ್ನು ಸ್ವಾಗತಿಸಿದರು. ಜತೆಗೆ ಇಟಲಿಯ ಮಹಿಳಾ ಮತ್ತು ಅತ್ಯಂತ ಕಿರಿಯ ಪ್ರಧಾನಿಯಾಗಿರುವುದಕ್ಕೆ ಅಭಿನಂದಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ