ಜೆಇಇ 2021 (ಜಂಟಿ ಪ್ರವೇಶ ಪರೀಕ್ಷೆ) ಮೇ ತಿಂಗಳಲ್ಲಿ ನಡೆಯಬೇಕಿದ್ದ ಮುಖ್ಯಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ಮುಂದೂಡಿದೆ. 2ನೇ ಅಲೆಯ ಕೊರೊನಾ ಸೋಂಕು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಆಫ್ಲೈನ್ ಪರೀಕ್ಷೆಗಳನ್ನು ಮುಂದೂಡುವಂತೆ ಶಿಕ್ಷಣ ಇಲಾಖೆ ತಿಳಿಸಿದೆ. ಜೆಇಇ ಏಪ್ರಿಲ್ ಸೆಶನ್ನ ಮುಖ್ಯಪರೀಕ್ಷೆ ಕೂಡ ಈಗಾಗಲೇ ಮುಂದೂಡಲ್ಪಟ್ಟಿದೆ. ಇದೀಗ ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನೂ ಮುಂದೂಡಿದ್ದಾಗಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಘೋಷಿಸಿದ್ದಾರೆ. ಈ ಪರೀಕ್ಷೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಾಗಿ, ಹೊಸ ದಿನಾಂಕಕ್ಕಾಗಿ ಪರೀಕ್ಷಾರ್ಥಿಗಳು ಎನ್ಟಿಎಯ ಅಧಿಕೃತ ವೆಬ್ಸೈಟ್ನ್ನು ಆಗಾಗ ಚೆಕ್ ಮಾಡುತ್ತಿರಬೇಕು ಎಂದೂ ಹೇಳಿದ್ದಾರೆ.
ಜೆಇಇ 2021 ಮುಖ್ಯಪರೀಕ್ಷೆ ಮುಂದೂಡಿದ್ದರ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು, ಸದ್ಯ ಇರುವ ಕೊವಿಡ್ 19 ಪರಿಸ್ಥಿತಿಯಿಂದಾಗಿ, ಪರೀಕ್ಷಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜೆಇಇ 2021ರ ಮೇ ತಿಂಗಳ ಪರೀಕ್ಷೆಯನ್ನೂ ಮುಂದೂಡಿದ್ದಾಗಿ ತಿಳಿಸಿದ್ದಾರೆ. ಹಾಗೇ, NTA ವೆಬ್ಸೈಟ್ನ್ನು ಆಗಾಗ ಪರಿಶೀಲನೆ ಮಾಡುತ್ತಿರುವಂತೆ ಸಲಹೆಯನ್ನೂ ನೀಡಿದ್ದಾರೆ.
20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಜೆಇಇ 2021ರ ಮುಖ್ಯಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ 12 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದಾರೆ. ಇನ್ನೂ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕಾಯುತ್ತಿದ್ದಾರೆ.