ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ (Johnson & Johnson) ತನ್ನ ಜಾನ್ಸೆನ್ ಕೊವಿಡ್ 19 ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಭಾರತದಲ್ಲಿ ನಡೆಸಲು ಅನುಮೋದನೆ ನೀಡುವಂತೆ ಡಿಸಿಜಿಐ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ-DCGI)ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈಗ ಯಾವುದೇ ಕಾರಣವನ್ನೂ ಹೇಳದೆ ಆ ಪಸ್ತಾವನೆಯನ್ನು ಹಿಂಪಡೆದಿದೆ. ಈ ಬಗ್ಗೆ ಡಿಸಿಜಿಐ ಅಧಿಕೃತ ಮಾಹಿತಿ ನೀಡಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಮೂಲತಃ ಯುಸ್ ಮೂಲದ ಸಂಸ್ಥೆಯಾಗಿದೆ. ಜಾನ್ಸೆನ್ ಎಂಬ ಹೆಸರಿನಲ್ಲಿ ಕೊವಿಡ್ 19 ಲಸಿಕೆ ತಯಾರಿಸಿದೆ. ಇದು ಒಂದೇ ಡೋಸ್ನ ಲಸಿಕೆಯಾಗಿದ್ದು, ಭಾರತದಲ್ಲೂ ಪ್ರಯೋಗ ನಡೆಸಲು ಅನುಮೋದನೆ ನೀಡಿ ಎಂದು ಡಿಸಿಜಿಐ ಬಳಿ ಕೇಳಿತ್ತು. ಅಲ್ಲದೆ ತಮ್ಮ ಕಂಪನಿಯ ಸಾವಿರಕ್ಕೂ ಹೆಚ್ಚು ಡೋಸ್ ಲಸಿಕೆ ಜುಲೈನಲ್ಲಿ ಭಾರತ ತಲುಪಲಿದೆ ಎಂದೂ ಹೇಳಿಕೊಂಡಿತ್ತು.
ಇನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ, ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ವೈರಲ್ ವೆಕ್ಟರ್ ಕೊವಿಡ್ 19 ಲಸಿಕೆಯ ತುರ್ತು ಬಳಕೆಗೆ 2021ರ ಫೆಬ್ರವರಿಯಲ್ಲಿ ಅನುಮತಿ ನೀಡಿತ್ತು. ಹಾಗೇ, ಈ ಲಸಿಕೆ ಡೆಲ್ಟಾ ರೂಪಾಂತರಿ ಸೇರಿ, ಕೊವಿಡ್ 19 ವೈರಸ್ನ ಮತ್ತೂ ಕೆಲವು ರೂಪಾಂತರಿ ವೈರಾಣುಗಳ ವಿರುದ್ಧ ಹೋರಾಡಬಲ್ಲದು ಎಂದೂ ಜಾನ್ಸನ್ ಆ್ಯಂಡ್ ಜಾನ್ಸನ್ ತಿಳಿಸಿತ್ತು. ಆದರೆ ಈ ಲಸಿಕೆಯಿಂದ ಗಂಭೀರ ಸ್ವರೂಪದ ರಕ್ತಹೆಪ್ಪುಗಟ್ಟುವಿಕೆ ಉಂಟಾಗಬಹುದು ಎಂಬುದೊಂದು ಅಧ್ಯಯನ ವರದಿಯೂ ಹೊರಬಿದ್ದಿತ್ತು. ಅಂದರೆ ಲಸಿಕೆ ತೆಗೆದುಕೊಂಡವರಿಗೆಲ್ಲ ರಕ್ತ ಹೆಪ್ಪುಗಟ್ಟುತ್ತದೆ ಎಂದಲ್ಲ. ಆದರೆ ಅದನ್ನು ಉಂಟು ಮಾಡುವ ಅಂಶಗಳು ಲಸಿಕೆಯಲ್ಲಿ ಇವೆ ಎನ್ನಲಾಗಿತ್ತು. ಆದರೆ ಈಗ ಜಾನ್ಸನ್ ಆ್ಯಂಡ್ ಜಾನ್ಸನ್ ತನ್ನ ಪ್ರಸ್ತಾವನೆಯನ್ನು ಯಾಕೆ ಹಿಂಪಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಸದ್ಯ ಭಾರತದಲ್ಲಿ ಕೊವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ಮತ್ತು ಮಾಡೆರ್ನಾ ಲಸಿಕೆಗಳನ್ನು ಬಳಸಲಾಗುತ್ತಿದ್ದು, ಅದರಲ್ಲಿ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಭಾರತದಲ್ಲೇ ತಯಾರಾಗಿದ್ದಾಗಿವೆ.
ಡಬ್ಲ್ಯೂಎಚ್ಒ ವರದಿ
ಇನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಕೊವಿಡ್ 19 ಲಸಿಕೆ, ಕೊವಿಡ್ 19 ಸೋಂಕಿನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳ ಪ್ರಕರಣದಲ್ಲಿ ಶೇ.66.3 ಮತ್ತು ಗಂಭೀರ ಕೇಸ್ನಲ್ಲಿ ಶೇ.76.3ರಷ್ಟು ಪ್ರಭಾವ ಭೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಲಸಿಕೆ ತೆಗೆದುಕೊಂಡ ಮೇಲೆ ಕೂಡ ಯಾರಾದರೂ ಕೊವಿಡ್ 19 ಸೋಂಕಿಗೆ ಒಳಗಾದರೆ ಅವರು ಖಂಡಿತ ಆಸ್ಪತ್ರೆಗೆ ದಾಖಲಾಗುವುದು ಬೇಕಾಗುವುದಿಲ್ಲ ಎಂದೂ ಹೇಳಿತ್ತು.
ಇದನ್ನೂ ಓದಿ: ಚೀನಾದಲ್ಲಿ ಹೆಚ್ಚುತ್ತಿದೆ ಡೆಲ್ಟಾ ರೂಪಾಂತರಿ ವೈರಸ್ ಪ್ರಸರಣ; ನಾಲ್ಕು ನಗರಗಳು ತೀವ್ರ ಅಪಾಯದಲ್ಲಿ..
Johnson and Johnson withdraws Its proposal of Covid 19 vaccine approval in India