ದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ರಾಜಿ ಸಂಧಾನದ ಸಾಧ್ಯತೆ ಪರಿಶೀಲಿಸುವಂತೆ ದೆಹಲಿ ನ್ಯಾಯಾಲಯವು ಸೂಚಿಸಿದೆ. ವಿಚಾರಣೆ ಆರಂಭಿಸಿದ ACMM ಕೋಟ್ ಜಡ್ಜ್ ನ್ಯಾ.ರವೀಂದ್ರ ಪಾಂಡೆ ಈ ಸೂಚನೆ ನೀಡಿದ್ದಾರೆ. ಪ್ರಕರಣದ ವಿಚಾರಣೆ ನಿರ್ಣಾಯಕ ಹಂತ ತಲುಪಿರುವ ಸಂದರ್ಭದಲ್ಲಿ ನ್ಯಾಯಾಧೀಶರು ಇಂಥ ಸೂಚನೆ ನೀಡಿರುವುದು ಗಮನ ಸೆಳೆದಿದೆ.
ಈವರೆಗೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾ.ವಿಶಾಲ್ ಪಹುಜಾ ಇತ್ತೀಚೆಗಷ್ಟೇ ವರ್ಗಾವಣೆಯಾಗಿದ್ದರು. ಇದೀಗ ವಿಚಾರಣೆ ನಡೆಸುತ್ತಿರುವ ನ್ಯಾ.ರವೀಂದ್ರ ಪಾಂಡೆ ಅತ್ಯಲ್ಪ ಪ್ರಮಾಣದಲ್ಲಿ ರಾಜಿ ಸಂಧಾನದ ಸಾಧ್ಯತೆಯಿದ್ದರೂ ಪರಿಶೀಲಿಸಿ ಎಂದು ಉಭಯ ಕಕ್ಷೀದಾರರ ವಕೀಲರಿಗೆ ಸೂಚಿಸಿದ್ದಾರೆ.
ಎಂ.ಜೆ.ಅಕ್ಬರ್ ವಿರುದ್ಧ ಪ್ರಿಯಾ ರಮಣಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ನಂತರದ ದಿನಗಳಲ್ಲಿ ಅಕ್ಬರ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಇದು ರಾಜಿಯ ಸಾಧ್ಯತೆಯಿರುವ ಪ್ರಕರಣ ಎಂದು ಮೇಲ್ನೋಟಕ್ಕೆ ಅನ್ನಿಸಿತು. ನೀವಿಬ್ಬರೂ ಹಿರಿಯ ವಕೀಲರು. ಹಲವು ವರ್ಷಗಳಿಂದ ಎಷ್ಟೋ ಪ್ರಕರಣಗಳಲ್ಲಿ ರಾಜಿ ಮಾಡಿಸಿದ್ದೀರಿ. ಈ ಪ್ರಕರಣದಲ್ಲೂ ಅಂಥ ಸಾಧ್ಯತೆಯಿದೆಯೇ ಎಂದು ಪರಿಶೀಲಿಸಿ. ನಿಮ್ಮ ಕಕ್ಷಿದಾರರು ಒಪ್ಪದಿದ್ದರೆ ಅಂತಿಮ ವಿಚಾರಣೆ ಕೈಗೆತ್ತಿಕೊಳ್ಳುತ್ತೇನೆ ಎಂದು ನ್ಯಾಯಾಧೀಶರು ಹೇಳಿದರು.
ಇದೊಂದು ವಿಶೇಷ ಪ್ರಕರಣ. ಇದರಲ್ಲಿ ರಾಜಿ ಸಾಧ್ಯತೆಯಿದೆ ಎಂದು ನನಗೆ ಅನ್ನಿಸುತ್ತಿಲ್ಲ. ನನ್ನ ಕಕ್ಷಿದಾರರು ಹೇಳಿರುವುದೆಲ್ಲಾ ನಿಜ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಅವರು ವಿವರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಪ್ರಿಯಾ ರಮಣಿ ಪರ ವಕೀಲ ಭವೂಕ್ ಚೌಹಾಣ್ ಹೇಳಿದರು.
ಜೊತೆಗೆ, ರಾಜಿ ಸಾಧ್ಯತೆ ಕುರಿತು ಮತ್ತಷ್ಟು ಯೋಚಿಸಿ ನಿರ್ಧಾರಕ್ಕೆ ಬರಬೇಕಿದೆ ಎಂದು ಎಂ.ಜೆ.ಅಕ್ಬರ್ ಪರ ವಕೀಲೆ ಗೀತಾ ಲೂತ್ರಾ ಪ್ರತಿಕ್ರಿಯಿಸಿದರು. ಪ್ರಿಯಾ ರಮಣಿ ವೋಗ್ ನಿಯತಕಾಲಿಕೆಯ ಆನ್ಲೈನ್ ಆವೃತ್ತಿಯಲ್ಲಿ 2017ರಲ್ಲಿ ಲೇಖನ ಬರೆದಿದ್ದರು. ಮಾನಹಾನಿಕರ ಸ್ವರೂಪದ ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ವ್ಯಕ್ತಿಯೊಬ್ಬರ ಹೆಸರು ಅಕ್ಬರ್ ಎಂದು ಒಂದು ವರ್ಷದ ನಂತರ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. ತಮ್ಮ ಟ್ವೀಟ್ನಲ್ಲಿ ವೋಗ್ನಲ್ಲಿ ಪ್ರಕಟವಾಗಿದ್ದ ಲೇಖನದ ಲಿಂಕ್ ಸಹ ನೀಡಿದ್ದರು. ಆಕೆಯ ಈ ಕೃತ್ಯದಿಂದ ನನ್ನ ಕಕ್ಷಿದಾರರಿಗೆ ಮಾನಹಾನಿ ಆಗಿದೆ ಎಂದು ಲೂತ್ರಾ ವಾದಿಸಿದರು.