ಜುಲೈ 26 ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವವನ್ನು (Kargil Vijay Diwas) ಆಚರಿಸುತ್ತೇವೆ. 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ (Kargil War) ದೇಶಕ್ಕಾಗಿ ಮಡಿದ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮಕ್ಕೆ ಗೌರವ ಸಲ್ಲಿಸಲು ಪ್ರತಿವರ್ಷ ಜುಲೈ 26 ರಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. 1999 ರಲ್ಲಿ ಪಾಕಿಸ್ತಾನಿ ಸೈನಿಕರು (Pakistan Army) ಜಮ್ಮು-ಕಾಶ್ಮಿರದಲ್ಲಿ (Jammu and Kashmir) ಗಡಿ ನಿಯಂತ್ರಣಾ ರೇಖೆಯನ್ನು (LOC) ದಾಟಿ ನಮ್ಮ ಬೆಟ್ಟಗಳನ್ನು ವಶಪಡಿಸಿಕೊಂಡಿದ್ದರು. ಇವರ ವಿರುದ್ಧ ಭಾರತೀಯ ಸೈನಿಕರು ವೀರಾವೇಶದಿಂದ ಹೋರಾಡಿ ವಿಜಯಶಾಲಿಯಾದರು. ಈ ಮಿಲಿಟರಿ ಕಾರ್ಯಾಚರಣೆಗೆ “ಕಾರ್ಗಿಲ್ ಯುದ್ಧ” ಎಂದು ಕರೆಯುತ್ತಾರೆ. ಇಡೀ ಕಾರ್ಯಾಚರಣೆಗೆ ಆಪರೇಷನ್ ವಿಜಯ್ ಎಂದು ಹೆಸರಿಸಲಾಗಿದೆ.
2023 ಜುಲೈ 26ರಕ್ಕೆ ಕಾರ್ಗಿಲ್ ಯುದ್ಧ ಸಂಭವಿಸಿ 24 ವರ್ಷವಾಯಿತು. 1999 ರಲ್ಲಿ ಕಾರ್ಗಿಲ್ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಿತು. ಅಲ್ಲಿ ಭಾರತೀಯ ಸೇನೆಯು ಪಾಕಿಸ್ತಾನಿ ಸೈನಿಕರನ್ನು ಬಗ್ಗು ಬಡಿಯುವ ಮೂಲಕ ‘ಆಪರೇಷನ್ ವಿಜಯ್’ ಅಡಿಯಲ್ಲಿ ಪ್ರಸಿದ್ಧ ‘ಟೈಗರ್ ಹಿಲ್’ ಮತ್ತು ಇತರ ಪ್ರಮುಖ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿತು.
ಕಾರ್ಗಿಲ್ ವಿಜಯ್ ದಿವಸ್ ಅನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಭಾರತದ ಪ್ರಧಾನಿ ಪ್ರತಿ ವರ್ಷ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಟೋಲೋಲಿಂಗ್ ಬೆಟ್ಟದ ತಪ್ಪಲಿನಲ್ಲಿರುವ ಡ್ರಾಸ್‌ನಲ್ಲಿ ಕಾರ್ಗಿಲ್ ಯುದ್ಧದ ಸ್ಮಾರಕವಿದೆ. ಇದನ್ನು ಭಾರತೀಯ ಸೇನೆಯು ನಿರ್ಮಿಸಿದೆ. ಯುದ್ಧದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರನ್ನು ಗೌರವಿಸಲಾಗುತ್ತದೆ. ಸ್ಮಾರಕದ ಮೇಲೆ ‘ಪುಷ್ಪ್ ಕಿ ಅಭಿಲಾಷ’ ಎಂಬ ಕವಿತೆಯನ್ನು ಕೆತ್ತಲಾಗಿದೆ ಮತ್ತು ಅಲ್ಲಿಯ ಸ್ಮಾರಕ ಗೋಡೆಯ ಮೇಲೆ ಹುತಾತ್ಮರ ಹೆಸರನ್ನು ಸಹ ಕೆತ್ತಲಾಗಿದೆ.
ಕಾರ್ಗಿಲ್ ಯುದ್ಧವು 60 ದಿನಗಳಿಗಿಂತ ಹೆಚ್ಚು ಕಾಲ ನಡೆಯಿತು. 527 ಭಾರತೀಯ ಸೈನಿಕರು ಹುತಾತ್ಮರಾದರು. ಕಾರ್ಗಿಲ್ ಯುದ್ಧ ಹೀರೋ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಚಿರಕಾಲ ನೆನಪಿನಲ್ಲಿ ಉಳಿಯುವಂತಹ ವೀರ ಯೋಧ. ಕ್ಯಾಪ್ಟನ್ ವಿಕ್ರಮ ಬಾತ್ರಾ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರ ನೀಡಿ ಗೌರವಿಸಲಾಗಿದೆ.
ಬೆಟ್ಟದ ಮೇಲೆ ಕುಳಿತಿದ್ದ ಪಾಕ್‌ಗೆ ಯುದ್ಧ ಮಾಡಲು ಹೆಚ್ಚು ಅನುಕೂಲಗಳಿದ್ದವು. ಬೆಟ್ಟಗಳ ತಳಭಾಗದಿಂದ ಮೇಲಕ್ಕೆ ಹೋಗುವುದು ಭಾರತೀಯ ಸೈನಿಕರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಮದ್ದುಗುಂಡುಗಳನ್ನು ಹೊತ್ತು ಬೆಟ್ಟಹತ್ತಿ ಪಾಕ್ ಸೈನಿಕರನ್ನು ಬಗ್ಗು ಬಡಿದದ್ದು, ಪ್ರಪಂಚದ ಯುದ್ಧ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಪಾಯಿಂಟ್ 5353ಯನ್ನು ಮರುವಶ ಮಾಡಿಕೊಂಡ ಭಾರತೀಯ ಸೇನೆಯು ಬಳಿಕ ಬಟಾಲಿಕ್ ಪ್ರದೇಶವನ್ನು ತನ್ನದಾಗಿಸಿಕೊಂಡಿತು.
ಟೈಗರ್ ಹಿಲ್ ಪ್ರದೇಶವನ್ನು ವಶಕ್ಕೆ ಪಡೆದಿದ್ದು ಭಾರತೀಯ ಸೇನೆಗೆ ಸಿಕ್ಕಿ ಅತಿ ದೊಡ್ಡ ಜಯ. ಬಳಿಕ ಇನ್ನಿತರ ಪ್ರದೇಶವನ್ನು ಒಂದೊಂದಾಗಿ ತನ್ನದಾಗಿಸಿಕೊಂಡ ಭಾರತೀಯ ಸೇನೆಯು ತನ್ನ ತಾಕತ್ತು ಏನು ಎಂಬುದನ್ನು ಪಾಕಿಸ್ತಾನಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿತು.
ಕಾರ್ಗಿಲ್ ಯುದ್ಧದ ಭಾಗವಾದ ಆಪರೇಷನ್ ವಿಜಯ್‌ನ ಕಾರ್ಯಾಚರಣೆಯಲ್ಲಿ ಅಪ್ರತಿಮ ಹೋರಾಟ ಹಾಗೂ ಬಲಿದಾನಗೈದಿರುವ ಭಾರತೀಯ ಶೂಟರ್‌ಗಳ ಸ್ಮರಣಾರ್ಥ, ಕಾರ್ಗಿಲ್‌ನ ದ್ರಾಸ್ ಸೆಕ್ಟರ್‌ನ ಪಾಯಿಂಟ್ 5140 ಬೆಟ್ಟವನ್ನು ಗನ್ ಹಿಲ್ ಎಂದು ಮರುನಾಮಕರಣ ಮಾಡಲಾಗಿದೆ.
ಕಾರ್ಗಿಲ್ ಯುದ್ಧದ ವೇಳೆ, ಶತ್ರುಗಳ ಆಕ್ರಮಣ ಮಾಡುತ್ತಿರುವ ಸ್ಥಳವನ್ನು ಇದೇ ಬೆಟ್ಟದ ಮೇಲಿನಿಂದ ಪತ್ತೆ ಹಚ್ಚಲಾಗಿತ್ತಲ್ಲದೆ, ಅವರ ಅಡಗುದಾಣವಾಗಿದ್ದ ಪಾಯಿಂಟ್ 5140 ಬೆಟ್ಟದ ಕಡೆಗೆ ಭಾರತೀಯ ಯೋಧರು ತೀವ್ರ ಗುಂಡಿನ ದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಿದ್ದರು. ಕಾರ್ಗಿಲ್ ಯುದ್ಧದ ಗೆಲುವಿನಲ್ಲಿ ಇದು ಒಂದು ಪ್ರಮುಖವಾದ ಹೆಜ್ಜೆಯೆಂದೇ ಪರಿಗಣಿಸಲಾಗಿದೆ.
1. ಕ್ಯಾಪ್ಟನ್ ವಿಕ್ರಮ್ ಬಾತ್ರಾ (ಪರಮವೀರ ಚಕ್ರ)
2. ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ (ಪರಮವೀರ ಚಕ್ರ)
3. ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ (ಪರಮವೀರ ಚಕ್ರ)
4. ಲೆಫ್ಟಿನೆಂಟ್ ಬಲವಾನ್ ಸಿಂಗ್ (ಮಹಾವೀರ ಚಕ್ರ)
5. ಮೇಜರ್ ರಾಜೇಶ್ ಸಿಂಗ್ ಅಧಿಕಾರಿ (ಮಹಾವೀರ ಚಕ್ರ)
6. ರೈಫಲ್ಮ್ಯಾನ್ ಸಂಜಯ್ ಕುಮಾರ್ (ಪರಮವೀರ ಚಕ್ರ)
7. ಮೇಜರ್ ವಿವೇಕ್ ಗುಪ್ತಾ (ಮಹಾವೀರ ಚಕ್ರ)
8. ಕ್ಯಾಪ್ಟನ್ ಎನ್ ಕೆಂಗುರುಸೆ (ಮಹಾವೀರ ಚಕ್ರ)
9. ಲೆಫ್ಟಿನೆಂಟ್ ಕಿಷಿಂಗ್ ಕ್ಲಿಫೋರ್ಡ್ ನೋನ್ಗ್ರಾಮ್ (ಮಹಾವೀರ ಚಕ್ರ)
10. ನಾಯಕ್ ದಿಗೇಂದ್ರ ಕುಮಾರ್ (ಮಹಾವೀರ ಚಕ್ರ)
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ