ನವದೆಹಲಿ: ನಿರ್ವಹಣಾ ಕಾರ್ಯದ ಸಂದರ್ಭದಲ್ಲಿ ಸ್ಪೈಸ್ಜೆಟ್ (SpiceJet) ವಿಮಾನವೊಂದರಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಮಂಗಳವಾರ ಸಂಜೆ ಸಂಭವಿಸಿದೆ. ಅದೃಷ್ಟವಶಾತ್ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ ಎಂದು ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಎಟಿಆರ್ ವಿಮಾನದ ನಿರ್ವಹಣಾ ಕಾರ್ಯ ಪ್ರಗತಿಯಲ್ಲಿದ್ದಾಗ ಒಂದು ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಎಂಜಿನಿಯರ್ಗಳ ಗಮನಕ್ಕೆ ಬಂದಿದೆ. ತಕ್ಷಣವೇ ಬೆಂಕಿ ನಂದಿಸಲು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತು ಎಂದು ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಘಟನೆಯನ್ನು ಟ್ಯಾಕ್ಸಿವೇಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ದೂರದಲ್ಲಿ ನಿಂತಿದ್ದ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಹಾಗೂ ದಟ್ಟ ಹೊಗೆ ಹೊರಸೂಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಸ್ಪೈಸ್ಜೆಟ್ ಅನ್ನು ವಿಸ್ತರಿತ ಕಣ್ಗಾವಲು ವ್ಯಾಪ್ತಿಯಿಂದ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (DGCA) ಹೊರಗಿಟ್ಟ ದಿನವೇ ಈ ಘಟನೆ ಸಂಭವಿಸಿದೆ. ಹಲವು ಸುತ್ತಿನ ತಪಾಸಣೆಯ ಬಳಿಕ ಡಿಜಿಸಿಎ ಈ ಕ್ರಮ ಕೈಗೊಂಡಿತ್ತು.
ವಿಮಾನಕ್ಕೆ ಬೆಂಕಿಹೊತ್ತಿದ ಘಟನೆ ಬಗ್ಗೆ ಡಿಜಿಸಿಎ ತನಿಖೆಗೆ ಆದೇಶಿಸಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ