Weather Updates: ಇನ್ನೆರಡು ದಿನ ಕರ್ನಾಟಕದ ವಿವಿಧೆಡೆ ಮಳೆಯ ಸಾಧ್ಯತೆ: ಉತ್ತರಾಖಂಡದಲ್ಲಿ ಹಿಮಪಾತದ ಎಚ್ಚರಿಕೆ

|

Updated on: Feb 20, 2021 | 12:34 PM

Karnataka Weather Alert: ಮೈಸೂರು, ಕೊಡಗು, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಫೆ.23ರವರೆಗೂ ಗುಡುಗು ಸಹಿತ ಸಣ್ಣ ಮತ್ತು ಮಧ್ಯಮ ಪ್ರಮಾಣದ ಮಳೆಯಾಗಬಹುದು.

Weather Updates: ಇನ್ನೆರಡು ದಿನ ಕರ್ನಾಟಕದ ವಿವಿಧೆಡೆ ಮಳೆಯ ಸಾಧ್ಯತೆ: ಉತ್ತರಾಖಂಡದಲ್ಲಿ ಹಿಮಪಾತದ ಎಚ್ಚರಿಕೆ
ಮಳೆಯ ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ದೇಶದ ಹಲವು ಕಡೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಬೆಂಗಳೂರಿನಲ್ಲಿ ನಿನ್ನೆ ಗಾಳಿ ಸಹಿತ ಭರ್ಜರಿ ಮಳೆ ಸುರಿದಿದೆ. ನಿನ್ನೆ (ಫೆ.19) ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣ ಇತ್ತು. ಹಾಗೇ, ಫೆ. 22ರವರೆಗೂ ಬೆಂಗಳೂರಿನಲ್ಲಿ ಮೋಡದ ವಾತಾವರಣವೇ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD bengaluru) ತಿಳಿಸಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಫೆ.23ರವರೆಗೂ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮೈಸೂರು, ಕೊಡಗು, ಮಂಡ್ಯ ಸೇರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಫೆ.23ರವರೆಗೂ ಗುಡುಗು ಸಹಿತ ಸಣ್ಣ ಮತ್ತು ಮಧ್ಯಮ ಪ್ರಮಾಣದ ಮಳೆಯಾಗಬಹುದು. ಬಾಗಲಕೋಟೆ, ಬೆಳಗಾವಿ, ಹಾವೇರಿ, ಗದಗ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಫೆ.22ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಫೆ.24-25ರಂದು ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವೆಬ್​ಸೈಟ್​ನಲ್ಲಿ ತಿಳಿಸಿದೆ.

ಹಿಮಪಾತದ ಸಾಧ್ಯತೆ
ಇನ್ನು ಉತ್ತರಾಖಂಡ, ಹಿಮಾಚಲಪ್ರದೇಶ, ಜಮ್ಮುಕಾಶ್ಮೀರದಲ್ಲಿ ಫೆ.22ರವರೆಗೆ ಸಣ್ಣ ಮಳೆಯ ಜತೆ, ಹಿಮಪಾತ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೇ ಇಂದು ಮತ್ತು ನಾಳೆ ದೆಹಲಿ ಸೇರಿ ದೇಶದ ಉತ್ತರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹೇಳಿದೆ. ಮುಂದಿನ 3-4 ದಿನಗಳಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಬೆಚ್ಚಗಿನ ತಾಪಮಾನ ಮುಂದುವರಿಯುವ ನಿರೀಕ್ಷೆಯಿದೆ.

ದೆಹಲಿಯಲ್ಲಿಂದು ಮಂಜು ಕವಿದ ವಾತಾವರಣ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂದು ಮುಂಜಾನೆಯಿಂದಲೂ ದಟ್ಟವಾದ ಮಂಜು ಆವರಿಸಿದೆ. ಬೆಳಗ್ಗೆ ಕನಿಷ್ಠ ತಾಪಮಾನ 10.4ಡಿಗ್ರಿ ಸೆಲ್ಸಿಯಸ್​​ಗೆ ಇಳಿದಿತ್ತು. ಗಾಳಿಯ ಗುಣಮಟ್ಟ ಕೂಡ ಕಳಪೆಯಾಗಿದ್ದು, ಭಾನುವಾರ ಬೆಳಗ್ಗೆ ಹೊತ್ತಿಗೆ ಸುಧಾರಣೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಬೆಳಗ್ಗೆ 8.30ಕ್ಕೆ ಶೇ.100ರಷ್ಟು ತೇವಾಂಶ ದಾಖಲಾಗಿತ್ತು.

ಇದನ್ನೂ ಓದಿ: Karnataka Weather: ಕರ್ನಾಟಕದ ಹಲವೆಡೆ ಭಾರಿ ಮಳೆ..! ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಹವಾಮಾನ ಇಲಾಖೆ ಸೂಚನೆ

Karnataka Weather: ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ, ಹಲವೆಡೆ ಹಗುರ ಮಳೆಯಾಗುವ ಸಾಧ್ಯತೆ

Published On - 12:29 pm, Sat, 20 February 21