
ತಿರುವನಂತಪುರಂ, ಸೆಪ್ಟೆಂಬರ್ 23: ಗಂಡನೊಬ್ಬ ಪತ್ನಿ ಸ್ನಾನ ಮಾಡುವಾಗ ಹಿಂದಿನಿಂದ ಬಂದು ಚೂರಿಯಲ್ಲಿ ಇರಿದು ಆಕೆಯನ್ನು ಹತ್ಯೆ(Murder) ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಆಕೆಯನ್ನು ಹತ್ಯೆ ಮಾಡಿ ಫೇಸ್ಬುಕ್ ಲೈವ್ ಬಂದು ತಪ್ಪೊಪ್ಪಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪೊಲೀಸರಿಗೆ ಶರಣಾಗುವ ಮೊದಲು, ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿ, ತಾನು ಕ್ರೂರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಘಟನೆ ವಳಕ್ಕುಡುವಿನ ಪ್ಲಾಚೇರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆ ಮಹಿಳೆಯನ್ನು 39 ವರ್ಷದ ಶಾಲಿನಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 6.30 ರ ಸುಮಾರಿಗೆ ಶಾಲಿನಿ ಸ್ನಾನ ಮಾಡುತ್ತಿದ್ದಾಗ, ಆಕೆಯ ಪತಿ ಹಠಾತ್ತನೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ದಂಪತಿಯ 19 ವರ್ಷದ ಮಗ ಪೊಲೀಸರಿಗೆ ದೂರು ನೀಡಿದ್ದಾನೆ.
ದೂರಿನ ಆಧಾರದ ಮೇಲೆ, ಆರೋಪಿ ಐಸಾಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಪ್ರಕಾರ, ದಂಪತಿ ನಡುವೆ ಈ ಹಿಂದೆಯೂ ಜಗಳಗಳು ನಡೆದಿದ್ದವು.
ಮತ್ತಷ್ಟು ಓದಿ: ಇಳಿ ವಯಸ್ಸಿನಲ್ಲಿ ಮದುವೆ ಕನಸು ಹೊತ್ತು ಅಮೆರಿಕದಿಂದ ಭಾರತಕ್ಕೆ ಬಂದ ಮಹಿಳೆಯ ಬರ್ಬರ ಹತ್ಯೆ
ಶಾಲಿನಿ ಸ್ನಾನ ಮಾಡಲು ಹೋದಾಗ, ಆರೋಪಿಯು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಕುತ್ತಿಗೆ, ಎದೆ ಮತ್ತು ಬೆನ್ನಿಗೆ ಆಳವಾದ ಗಾಯಗಳಾಗಿವೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ. ಹೆಂಡತಿಯನ್ನು ಕೊಂದ ಬಳಿಕ, ಐಸಾಕ್ ಫೇಸ್‌ಬುಕ್‌ನಲ್ಲಿ ಲೈವ್ ಬಂದು ತನ್ನ ಅಪರಾಧ ಒಪ್ಪಿಕೊಂಡಿದ್ದಾನೆ. ಈ ವೀಡಿಯೊ ಕಾಣಿಸಿಕೊಂಡ ತಕ್ಷಣ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಆದಾಗ್ಯೂ, ಈಗ ಅದನ್ನು ತೆಗೆದುಹಾಕಲಾಗಿದೆ.
ನಂತರ ಐಸಾಕ್ ಪೊಲೀಸ್ ಠಾಣೆಗೆ ಹೋಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಪೊಲೀಸ್ ತಂಡವು ಶಾಲಿನಿ ಮನೆಯಲ್ಲಿ ಮೃತಪಟ್ಟಿರುವುದನ್ನು ಕಂಡುಕೊಂಡಿತ್ತು. ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಮಹಿಳೆ ಮತ್ತು ಆರೋಪಿ ಇಬ್ಬರ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ