9 ವರ್ಷದ ಬಾಲಕಿಯ ಹೊಟ್ಟೆಯಿಂದ 1 ಕೆಜಿ ತೂಕದ ಕೂದಲು ಹೊರತೆಗೆದ ವೈದ್ಯರು!

ಕೇರಳದ ತಿರುವನಂತಪುರಂನಲ್ಲಿ ಅಪರೂಪದ ‘ರಪಂಜಲ್ ಸಿಂಡ್ರೋಮ್’ನಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಯ ಹೊಟ್ಟೆ ಹಾಗೂ ಸಣ್ಣ ಕರುಳಿನಿಂದ 1 ಕೆಜಿ ತೂಕದ ಕೂದಲಿನ ಉಂಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ನೆಯ್ಯಾಟಿನ್‌ಕರಾದ ನಿಮ್ಸ್ ಮೆಡಿಸಿಟಿ ಆಸ್ಪತ್ರೆಯ ಡಾ. ಬಿಜು ನಾಯರ್ ನೇತೃತ್ವದ ತಂಡ ಈ ಯಶಸ್ವಿ ಚಿಕಿತ್ಸೆ ನೀಡಿದ್ದು, ಬಾಲಕಿ ಚೇತರಿಸಿಕೊಂಡಿದ್ದಾಳೆ.

9 ವರ್ಷದ ಬಾಲಕಿಯ ಹೊಟ್ಟೆಯಿಂದ 1 ಕೆಜಿ ತೂಕದ ಕೂದಲು ಹೊರತೆಗೆದ ವೈದ್ಯರು!
ಸಾಂದರ್ಭಿಕ ಚಿತ್ರ
Image Credit source: gettyimages.com

Updated on: Oct 03, 2026 | 3:27 PM

ಮುಖ್ಯಾಂಶಗಳು

  • ಕೇರಳದ 9 ವರ್ಷದ ಬಾಲಕಿಯ ಹೊಟ್ಟೆಯಿಂದ 1 ಕೆಜಿ ಕೂದಲು ಹೊರತೆಗೆದ ವೈದ್ಯರು.
  • ಅಪರೂಪದ 'ರ್ಯಾಪುಂಜೆಲ್ ಸಿಂಡ್ರೋಮ್' ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ.
  • ಜಗತ್ತಿನಲ್ಲಿ 100ಕ್ಕೂ ಕಡಿಮೆ ಪ್ರಕರಣಗಳು ವರದಿಯಾಗಿರುವ ಅಪರೂಪದ ವೈದ್ಯಕೀಯ ಘಟನೆ.

ತಿರುವನಂತಪುರಂ, ಅಕ್ಟೋಬರ್ 03: ತೀವ್ರ ಹೊಟ್ಟೆನೋವು ಹಾಗೂ ವಾಂತಿಯಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಯೊಬ್ಬಳಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ, ಆಕೆಯ ಹೊಟ್ಟೆ ಮತ್ತು ಸಣ್ಣ ಕರುಳಿನಲ್ಲಿದ್ದ ಬರೋಬ್ಬರಿ 1 ಕಿಲೋಗ್ರಾಂ ತೂಕದ ಕೂದಲಿನ ಉಂಡೆಯನ್ನು ಖಾಸಗಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

‘ನಿಮ್ಸ್ ಮೆಡಿಸಿಟಿ’ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ತಿರುವನಂತಪುರಂ ಸಮೀಪದ ನೆಯ್ಯಾಟಿನ್‌ಕರಾದ ‘ನಿಮ್ಸ್ ಮೆಡಿಸಿಟಿ’ (NIMS Medicity) ಆಸ್ಪತ್ರೆಯಲ್ಲಿ ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಹಾಗೂ ಎಂಡೋಸ್ಕೋಪಿ ಪರೀಕ್ಷೆಗೆ ಒಳಪಡಿಸಿದಾಗ ಕರುಳಿನಲ್ಲಿ ಮತ್ತು ಹೊಟ್ಟೆಯಲ್ಲಿ ಭಾರಿ ಪ್ರಮಾಣದ ಕೂದಲು ಸಂಗ್ರಹವಾಗಿರುವುದು ಪತ್ತೆಯಾಗಿತ್ತು.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹುಡುಗಿ

ಪೀಡಿಯಾಟ್ರಿಕ್ ಸರ್ಜರಿ ವಿಭಾಗದ ಹಿರಿಯ ವೈದ್ಯ ಡಾ. ಬಿಜು ಐ. ಜಿ. ನಾಯರ್ ಅವರ ನೇತೃತ್ವದ ವೈದ್ಯರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೂದಲಿನ ಮುದ್ದೆಯನ್ನು ಹೊರತೆಗೆದಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ರಪಂಜಲ್ ಸಿಂಡ್ರೋಮ್’ (Rapunzel Syndrome) ಅಥವಾ ‘ಟ್ರಿಕೋಬೆಜೋರ್’ (Trichobezoar) ಎಂದು ಕರೆಯಲಾಗುತ್ತದೆ. ಮಾನಸಿಕ ಒತ್ತಡ ಅಥವಾ ಅಸ್ವಸ್ಥತೆಯಿಂದ ಸ್ವತಃ ತಮ್ಮ ಕೂದಲನ್ನು ತಾವೇ ಕತ್ತರಿಸಿ ತಿನ್ನುವ ಹವ್ಯಾಸದಿಂದಾಗಿ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಹೊಟ್ಟೆಯಲ್ಲಿ ಜೀರ್ಣವಾಗದ ಕೂದಲು ಕ್ರಮೇಣ ಗಟ್ಟಿಯಾದ ಉಂಡೆಯಾಗಿ ಮಾರ್ಪಡುತ್ತದೆ.

ಸದ್ಯ ಬಾಲಕಿ ಸಂಪೂರ್ಣ ಚೇತರಿಸಿಕೊಂಡಿದ್ದು, ಸಾಮಾನ್ಯ ಆಹಾರ ಸೇವನೆ ಆರಂಭಿಸಿದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಜಗತ್ತಿನಾದ್ಯಂತ ಈವರೆಗೆ 100ಕ್ಕೂ ಕಡಿಮೆ ಇಂತಹ ಅಪರೂಪದ ಪ್ರಕರಣಗಳು ವರದಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us