
ಕೊಚ್ಚಿ, ಅ.26: ಕೇರಳದ ಕೊಚ್ಚಿಯಲ್ಲಿ ಅತ್ಯಂತ ಬೆಚ್ಚಿಬೀಳಿಸುವ ಅಪಘಾತವೊಂದು ಸಂಭವಿಸಿದೆ. ತ್ರಿಸ್ಸೂರ್‌ನ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರೊಬ್ಬರ 17 ವರ್ಷದ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಐಷಾರಾಮಿ ಮರ್ಸಿಡಿಸ್ ಬೆಂಜ್ (Mercedes-Benz) ಕಾರು, ಬೈಕ್‌ಗೆ ಭೀಕರವಾಗಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ತಂದೆ ನ್ಯಾಯಾಧೀಶರಾಗಿರುವ ಕಾರಣ ಪ್ರಕರಣದ ತನಿಖೆಯನ್ನು ಹಾದಿತಪ್ಪಿಸಲು ಮತ್ತು ಸಾಕ್ಷ್ಯ ನಾಶ ಯತ್ನಿಸಲಾಗುತ್ತಿದೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮಂಜಲಿ ನಿವಾಸಿ ಜಯಬಾಲಕೃಷ್ಣನ್ ಎಂಬುವವರು ತಡರಾತ್ರಿ ತಮ್ಮ ರಸ್ತೆ ಬದಿಯ ಉಪಹಾರ ಗೃಹವನ್ನು ಮುಚ್ಚಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದರು. ಭಾನುವಾರ ತಡರಾತ್ರಿ 2:20ರ ಸುಮಾರಿಗೆ ಚೇರನಲ್ಲೂರಿನ ಕಂಟೈನರ್ ರಸ್ತೆಯ ಮಾರಪರಂಬು ಬಳಿ ವಲ್ಲಾರ್‌ಪಾಡಮ್‌ನಿಂದ ಕಳಮಸ್ಸೇರಿ ಕಡೆಗೆ ಸಾಗುತ್ತಿದ್ದಾಗ, ನ್ಯಾಯಾಧೀಶರ ಮಗ ಚಲಾಯಿಸುತ್ತಿದ್ದ ಕಾರು ಹಿಂಭಾಗದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ಪುಡಿಪುಡಿಯಾಗಿದ್ದು, ತೀವ್ರವಾಗಿ ಗಾಯಗೊಂಡ ಜಯಬಾಲಕೃಷ್ಣನ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ.
ತಂದೆ-ತಾಯಿಗೆ ತಿಳಿಯದೆ ಡ್ರೈವ್ ಮಾಡುವ ಆಸೆಯಿಂದ ಕಾರು ತಂದಿದ್ದಾಗಿ ಹಾಗೂ ಅಪಘಾತದ ವೇಳೆ ಭಾರಿ ಮಳೆ ಸುರಿಯುತ್ತಿದ್ದರಿಂದ ಸ್ಕೂಟರ್ ದಿಕ್ಕು ಬದಲಾಯಿಸಿ ಅಪಘಾತಕ್ಕೀಡಾಯಿತು ಎಂದು 17 ವರ್ಷದ ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಚೇರನಲ್ಲೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 281 (ಅಜಾಗರೂಕತೆಯ ಚಾಲನೆ) ಹಾಗೂ 106(1) (ಅಜಾಗರೂಕತೆಯಿಂದ ಸಾವು ಎಸಗುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವಾಹನದ ನೋಂದಾಯಿತ ಮಾಲೀಕರಾಗಿರುವ ತ್ರಿಸ್ಸೂರ್ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ಅಡಿಯಲ್ಲಿ (ಅಪ್ರಾಪ್ತರಿಗೆ ವಾಹನ ನೀಡಿದ್ದಕ್ಕಾಗಿ ಪೋಷಕರು/ಮಾಲೀಕರ ಮೇಲಿನ ಕ್ರಿಮಿನಲ್ ಪ್ರಕರಣ) ಕಠಿಣ ಕ್ರಮ ಕೈಗೊಳ್ಳುವ ಕುರಿತು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಪ್ರಾಪ್ತನ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವೈದ್ಯಕೀಯ ತಪಾಸಣೆಯ ಪ್ರಾಥಮಿಕ ವರದಿಯಲ್ಲಿ ಮದ್ಯಪಾನ ಮಾಡಿರುವುದು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಖರ್ಗೆ ಆಕ್ರೋಶದ ಹೇಳಿಕೆಗೆ ತಪ್ಪು ತಿಳುವಳಿಕೆಯೇ ಕಾರಣ?: ಥಳಿತಕ್ಕೊಳಗಾದ ವ್ಯಕ್ತಿಯಿಂದ ಸ್ಫೋಟಕ ಸತ್ಯ ಬಹಿರಂಗ
ಲೈಸೆನ್ಸ್ ಇಲ್ಲದ 17 ವರ್ಷದ ಮಗನಿಗೆ ಕಾರು ಚಾಲನೆ ಮಾಡಲು ಹೇಗೆ ಬಿಟ್ರಿ ಎಂದು ಪ್ರಶ್ನಿಸಿದ್ದಕ್ಕೆ, ನ್ಯಾಯಾಧೀಶರ ಮಗ ಎಂದು ಬೆದರಿಕೆ ಹಾಕುವಂತೆ ನಡೆದುಕೊಂಡರು ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಅಪಘಾತಕ್ಕೀಡಾದ ಮರ್ಸಿಡಿಸ್ ಬೆಂಜ್ ಕಾರಿನ ಫೋಟೋಗಳನ್ನು ಮೃತನ ಸಹೋದರ ಸೆಲ್ವರಾಜ್ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾಗ, ಪೊಲೀಸರೇ ಬಲವಂತವಾಗಿ ಆ ಫೋಟೋಗಳನ್ನು ಡಿಲೀಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ನ್ಯಾಯಾಧೀಶರ ಪ್ರಭಾವ ಬಳಸಿ ಪ್ರಕರಣವನ್ನು ದುರ್ಬಲಗೊಳಿಸಲಾಗುತ್ತಿದೆ ಹಾಗೂ ಎಫ್‌ಐಆರ್‌ನಲ್ಲಿ ಪ್ರಮುಖ ಸಾಕ್ಷ್ಯಗಳನ್ನು ಬಿಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದು, ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ