ಖರ್ಗೆ ಆಕ್ರೋಶದ ಹೇಳಿಕೆಗೆ ತಪ್ಪು ತಿಳುವಳಿಕೆಯೇ ಕಾರಣ?: ಥಳಿತಕ್ಕೊಳಗಾದ ವ್ಯಕ್ತಿಯಿಂದ ಸ್ಫೋಟಕ ಸತ್ಯ ಬಹಿರಂಗ
"ಮೋದಿ ಕಾ ಬಾಪ್ ಭಿ ಜಾಯೇಗಾ" ಎಂಬ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ದೇಶಾದ್ಯಂತ ರಾಜಕೀಯ ಕಾಡ್ಗಿಚ್ಚು ಸೃಷ್ಟಿಸಿದೆ. ಪ್ರಧಾನಿ ಮೋದಿ ಮತ್ತು ಅವರ ತಂದೆಗೆ ಅಪಮಾನವೆಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ಹೇಳಿಕೆಗೆ ಕಾರಣನಾದ ವ್ಯಕ್ತಿ 'ಸಂತೋಷ್ ಕುಮಾರ್' ತನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿ ಅಚ್ಚರಿಯ ತಿರುವು ನೀಡಿದ್ದಾನೆ. ಇದರಿಂದ ಕಾಂಗ್ರೆಸ್ ಸ್ಪಷ್ಟನೆಗೆ ಹೊಸ ಆಯಾಮ ಸಿಕ್ಕಿದೆ.

ಪಟ್ನಾ, ಅ.26: ಬಿಹಾರದ ಮೊದಲ ಮಾಜಿ ಮುಖ್ಯಮಂತ್ರಿ ಶ್ರೀ ಕೃಷ್ಣ ಸಿಂಗ್ ಅವರ 139ನೇ ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ‘ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ’ ಹೇಳಿಕೆಯು ದೇಶಾದ್ಯಂತ ಭಾರಿ ರಾಜಕೀಯ ಕಾಡ್ಗಿಚ್ಚು ಎಬ್ಬಿಸಿದೆ. ಪ್ರಧಾನಿ ಮೋದಿ ಹಾಗೂ ಅವರ ದಿವಂಗತ ತಂದೆಯವರನ್ನು ನಿಂದಿಸುವ ಮೂಲಕ ಖರ್ಗೆ ಅವರು ಇಡೀ ದೇಶಕ್ಕೇ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಇದೇ ವೇಳೆ, ಈ ಇಡೀ ಗಲಾಟೆಗೆ ಕಾರಣವಾದ ವ್ಯಕ್ತಿಯಿಂದ ಹೊರಬಂದ ಹೇಳಿಕೆ ಪ್ರಕರಣಕ್ಕೆ ತಲೆಕೆಳಗಾಗುವಂತಹ ‘ಮಿಸ್‌ಅಂಡರ್‌ಸ್ಟ್ಯಾಂಡಿಂಗ್’ (ತಪ್ಪು ತಿಳುವಳಿಕೆ) ಟ್ವಿಸ್ಟ್ ನೀಡಿದೆ.
ಖರ್ಗೆ ಅವರು ಭಾಷಣ ಮಾಡುತ್ತಿದ್ದಾಗ ಸಭೆಯಲ್ಲಿದ್ದ ವ್ಯಕ್ತಿಯೊಬ್ಬ “ಮೋದಿ ಎಲ್ಲಿಗೂ ಹೋಗುವುದಿಲ್ಲ (ಅಧಿಕಾರ ಕಳೆದುಕೊಳ್ಳುವುದಿಲ್ಲ)” ಎಂದು ಕೂಗಿದ್ದಾನೆ ಎನ್ನಲಾಗಿದೆ. ಇದರಿಂದ ತೀವ್ರ ಕೆರಳಿದ ಖರ್ಗೆ, ವೇದಿಕೆಯಿಂದಲೇ “ಮೋದಿಕಾ ಬಾಪ್ ಭಿ ಜಾಯೇಗಾ” (ಮೋದಿಯ ಅಪ್ಪ ಕೂಡ ಹೋಗಬೇಕಾಗುತ್ತದೆ) ಎಂದು ಮೂರು ಬಾರಿ ಪುನರಾವರ್ತಿಸಿ ವಾಗ್ದಾಳಿ ನಡೆಸಿದರು. ಈ ಮಾತುಗಳನ್ನು ಆಡಿದ ಸಂತೋಷ್ ಕುಮಾರ್ ಎಂಬ ವ್ಯಕ್ತಿಯನ್ನು ತಕ್ಷಣವೇ ಸುತ್ತುವರಿದ ಕಾಂಗ್ರೆಸ್ ಬೆಂಬಲಿಗರು ನೆಲಕ್ಕೆ ತಳ್ಳಿ ಹಿಗ್ಗಾಮುಗ್ಗಾ ಥಳಿಸಿ, ಸಭಾಂಗಣದಿಂದ ಹೊರಗೆ ತಳ್ಳಿದ್ದಾರೆ.
‘ಸಂತೋಷ್ ಕುಮಾರ್’ ನೀಡಿದ ಸ್ಫೋಟಕ ಟ್ವಿಸ್ಟ್:
ಸಭಾಂಗಣದಿಂದ ಹೊರ ಬಂದ ನಂತರ ಮಾತನಾಡಿದ ಸಂತೋಷ್ ಕುಮಾರ್, “ನಾನು ಮೋದಿ ಬೆಂಬಲಿಸಿ ಮಾತನಾಡಲಿಲ್ಲ. ‘ದೇಶದಲ್ಲಿ ಬಂಡಾಯ ಅಥವಾ ದಂಗೆ ಏಳದ ಹೊರತು ಮೋದಿ ಅಧಿಕಾರದಿಂದ ಹೋಗುವುದಿಲ್ಲ’ ಎಂದು ನಾನು ಹೇಳುತ್ತಿದ್ದೆ. ಆದರೆ ನನ್ನ ಅರ್ಧ ವಾಕ್ಯ ಮಾತ್ರ ಕೇಳಿಸಿ ತಪ್ಪು ತಿಳುವಳಿಕೆ ಉಂಟಾಗಿದೆ. ನನಗೂ ಮೋದಿ ಅಧಿಕಾರದಿಂದ ತೊಲಗುವುದು ಬೇಕಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವರ ಆಕ್ರೋಶ:
ಖರ್ಗೆ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸರಣಿ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವರು, “ಕಾಂಗ್ರೆಸ್ ನಾಯಕರು ರಾಜಕೀಯ ಶಿಷ್ಟಾಚಾರದ ಎಲ್ಲಾ ಎಲ್ಲೆಗಳನ್ನು ಮೀರಿದ್ದಾರೆ. ಮೋದಿ ಅವರ ತಾಯಿ, ಬಡತನ ಮತ್ತು ‘ಚಾಯ್‌ವಾಲಾ’ ಎಂದು ನಿಂದಿಸಿದ್ದ ಕಾಂಗ್ರೆಸ್, ರಾಹುಲ್ ಗಾಂಧಿ ನಾಯಕತ್ವದಲ್ಲಿ ದಿನದಿಂದ ದಿನಕ್ಕೆ ಅಸಭ್ಯತೆಯ ಮಿತಿ ದಾಟುತ್ತಿದೆ” ಎಂದು ‘X’ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನವೀನ್ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾತನಾಡಿ, “ವಿರೋಧ ಪಕ್ಷಗಳ ಬಳಿ ಅಭಿವೃದ್ಧಿಯ ವಿಷಯಗಳಿಲ್ಲದೆ ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ” ಎಂದು ಅಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ’; ವೇದಿಕೆಯಲ್ಲೇ ರೊಚ್ಚಿಗೆದ್ದ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಸ್ಪಷ್ಟನೆ:
ಡಿದ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್, “ಖರ್ಗೆ ಅವರು ಸಾಮಾನ್ಯ ಹಿಂದಿ ಗಾದೆ ಮಾತುನ್ನು ಬಳಸಿದ್ದಾರೆಯೇ ಹೊರತು ಕೀಳಾಗಿ ನಿಂದಿಸಿಲ್ಲ. ಪ್ರಧಾನಿ ಮೋದಿಯವರೇ ಇತ್ಯಾದಿ ನಾಯಕರು ಇದಕ್ಕಿಂತ ಕೆಟ್ಟ ಪದಗಳನ್ನು ಬಳಸಿದ್ದಾರೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




