ಹರಿದ್ವಾರ (ಉತ್ತರಾಖಂಡ): ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಪರಿಣಾಮ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹೊತ್ತಿನಲ್ಲಿಯೇ ಉತ್ತರಾಡಖಂಡ ಹರಿದ್ವಾರದಲ್ಲಿ ಕುಂಭ ಮೇಳ ಆರಂಭವಾಗಿದೆ. ಸೋಮವಾರ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಮಂದಿ ಹರಿದ್ವಾರಕ್ಕೆ ಆಗಮಿಸಿದ್ದು, ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿದ್ದಾರೆ. ಕುಂಭ ಸ್ನಾನಕ್ಕಾಗಿ ಬಂದ ಭಕ್ತರಲ್ಲಿ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುವುದೂ ಕಷ್ಟ. ಅವರಿಗೆ ದಂಡ ವಿಧಿಸಲೂ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೊವಿಡ್ ನಿಯಮಗಳನ್ನು ಪಾಲಿಸಿ ಎಂದು ನಾವು ನಿರಂತರವಾಗಿ ಜನರಲ್ಲಿ ವಿನಂತಿಸುತ್ತಿದ್ದೇವೆ. ಆದರೆ ಈ ಜನರ ಗುಂಪಿನಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಸಾಧ್ಯವಾಗುತ್ತಿಲ್ಲ. ಘಾಟ್ನಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಎಂದು ಹರಿದ್ವಾರ ಕುಂಭ ಮೇಳದಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 1.3 ಕೋಟಿಗಿಂತಲೂ ಏರಿಕೆಯಾಗಿದ್ದು ಕೊವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದೇವೆ. ಒಂದು ವೇಳೆ ನಾವು ಘಾಟ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಕಾಲ್ತುಳಿತ ಸಂಭವಿಸಬಹುದು ಎಂದು ಪೊಲೀಸ್ ಅಧಿಕಾರಿ ಗುಂಜ್ಯಾಲ್ ಹೇಳಿದ್ದಾರೆ.
Uttarakhand: Sadhus participate in the second ‘shahi snan’ of Maha Kumbh at Har Ki Pauri ghat in Haridwar pic.twitter.com/VMjd4h5Gcp
— ANI (@ANI) April 12, 2021
ಹರಿದ್ವಾರದ ಹರ್ ಕೀ ಪೌರಿಯಲ್ಲಿ ಗಂಗಾಸ್ನಾನಕ್ಕಾಗಿ ಸಾವಿರಾರು ಮಂದಿ ಬಂದು ಸೇರಿ. ಬೆಳಗ್ಗೆ 7ಗಂಟೆಯವರೆಗೆ ಮಾತ್ರ ಸಾಮಾನ್ಯ ಜನರಿಗೆ ಇಲ್ಲಿ ಪ್ರವೇಶವಿದ್ದು, ನಂತರ ಅಖಾರ (ಸಾಧುಗಳಿಗೆ) ಕಾಯ್ದಿರಿಸಲಾಗಿದೆ . ಹರಿದ್ವಾರದಲ್ಲಿ 12, 14ಮತ್ತು 27ಕ್ಕೆ ಶಾಹೀ ಸ್ನಾನ ನಡೆಯಲಿದ್ದು ಮಾರ್ಚ್ 11ರಂದು ಮಹಾಶಿವರಾತ್ರಿಯ ಪವಿತ್ರ ಸ್ನಾನಕ್ಕಾಗಿ ಸುಮಾರು 32 ಲಕ್ಷ ಭಕ್ತರು ಇಲ್ಲಿಗೆ ಆಗಮಿಸಿದ್ದರು.
#WATCH | Sadhus of Niranjani Akhara participate in second ‘shahi snan’ of #MahaKumbh at Har ki Pauri ghat in Uttarakhand’s Haridwar pic.twitter.com/eluxwFv8gG
— ANI (@ANI) April 12, 2021
ದೇಶದಲ್ಲಿ ಪ್ರತಿದಿನ ಒಂದು ಲಕ್ಷಕ್ಕಿಂತಲೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕು ನಿಯಂತ್ರಣಕ್ಕಾಗಿ ಹಲವಾರು ರಾಜ್ಯಗಳು ರಾತ್ರಿ ಕರ್ಫ್ಯೂ ಘೋಷಿಸಿವೆ. ಉತ್ತರಾಖಂಡದಲ್ಲಿ ಕಳೆದ 24ಗಂಟೆಗಳಲ್ಲಿ 6241 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು 3 ಮಂದಿ ಸಾವಿಗೀಡಾಗಿದ್ದಾರೆ.
ಮಾಸ್ಕ್ ಧರಿಸದವರ ಪತ್ತೆಗಾಗಿ ಎಐ ಕ್ಯಾಮೆರಾ
ಕುಂಭ ಮೇಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಹಿಸುತ್ತಿದ್ದು ಮಾಸ್ಕ್ ಧರಿಸದೇ ಇದ್ದವರನ್ನು ಪತ್ತೆ ಹಚ್ಚುವುದಕ್ಕಾಗಿ ಕೃತಕ ಬುದ್ಧಿಮತ್ತೆ(AI)ಯ ಕ್ಯಾಮೆರಾಗಳನ್ನು ಉತ್ತರಾಖಂಡ ಪೊಲೀಸರು ಬಳಸುತಿದ್ದಾರೆ.
ಮೇಳ ನಡೆಯುವ ಪ್ರದೇಶದಲ್ಲಿ 350 ಸಿಸಿಟಿವಿ ಕ್ಯಾಮೆರಾಗಳನ್ನಿಡಲಾಗಿದ್ದು ಇವುಗಳಲ್ಲಿ 100 ಕ್ಯಾಮೆರಾಗಳು ಸೆನ್ಸರ್ ಅಲರ್ಟ್ ಇರುವವುಗಳಾಗಿವೆ. ಮಾಸ್ಕ್ ಧರಿಸದೇ ಇರುವ ಜನರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದೊಡನೆ ಇದು ಅಲರ್ಟ್ ಮಾಡುತ್ತದೆ. ಹರ್ ಕೀ ಪೌರಿ, ಸುಭಾಷ್ ಘಾಟ್, ಬ್ರಹ್ಮಕುಂಡ್, ಮಾಳವಿಯಾ ದ್ವೀಪ್ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನ ಸೇರುತ್ತಿದ್ದು ಇಲ್ಲಿ ಎಐ ಕ್ಯಾಮೆರಾಗಳನ್ನಿರಿಸಲಾಗಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಯಾವುದೇ ವಸ್ತು 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಕಂಡು ಬಂದರೆ ಅದನ್ನು ಸೆರೆ ಹಿಡಿದು ನಿಗಾ ವಹಿಸಲು, ವಾಹನಗಳ ಸಂಖ್ಯೆ ಎಣಿಸಲು ಕ್ಯಾಮೆರಾಗಳನ್ನು ಬಳಸಲಾಗಿದೆ.
Published On - 11:19 am, Mon, 12 April 21