ಭಾರತಕ್ಕೆ ಬರಲಿವೆ ಇನ್ನೂ 5 ಕೊರೊನಾ ಲಸಿಕೆಗಳು; ಎಲ್ಲರಿಗೂ ಶೀಘ್ರ ಲಸಿಕೆ ದೊರೆಯುವ ನಿರೀಕ್ಷೆ
ಈ ಎಲ್ಲ ಲಸಿಕೆಗಳು ಭಾರತಕ್ಕೆ ದೊರೆತ ಮೇಲಾದರೂ ಎಲ್ಲಾ ಭಾರತೀಯರಿಗೂ ಕೊರೊನಾ ಲಸಿಕೆ ದೊರೆಯಲಿದೆಯೇ ಕಾದುನೋಡಬೇಕಿದೆ.
ದೇಶದಲ್ಲಿ ಕೊರೊನಾ ಲಸಿಕೆ ಕೊರತೆ ಉಂಟಾಗಿದೆ ಎಂಬ ಕೂಗು ಬಲಗೊಳ್ಳುತ್ತಿದೆ. ಸದ್ಯ ಭಾರತದಲ್ಲೇ ಎರಡು ಲಸಿಕೆಗಳು ಉತ್ಪಾದನೆಯಾಗುತ್ತಿವೆ. ಈ ನಡುವೆಯೇ ಇದೇ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಒಟ್ಟು 5 ಲಸಿಕೆಗಳು ಭಾರತೀಯರಿಗೆ ದೊರೆಯುವ ಸಾಧ್ಯತೆಯಿದೆ. ರಷ್ಯಾ ಮೂಲದ ಸ್ಪುಟ್ನಿಕ್-ವಿ, ನೊವಾವಕ್ಸ್, ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳೂ ಸೇರಿ ಐದು ಲಸಿಕೆಗಳು ಭಾರತೀಯರಿಗೆ ಲಭಿಸಲಿವೆ ಎಂದು ಕೆಲವು ವರದಿಗಳು ತಿಳಿಸಿವೆ.
ಯಾವ ಲಸಿಕೆಗಳಿವು? ಸದ್ಯ ಭಾರತದಲ್ಲೇ ಉತ್ಪಾದನೆ ಆಗುತ್ತಿರುವ ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳಂತೂ ಎಲ್ಲರಿಗೂ ಹಲವು ಹಂತಗಳಲ್ಲಿ ದೊರೆಯಲಿವೆ. ಇವುಗಳ ಜತೆಗೆ ಇನ್ನೂ ಕೆಲ ಲಸಿಕೆಗಳು ಕೈಹಿಡಿಯಲಿವೆ. ಡಾ.ರೆಡ್ಡಿಸ್ ಸಂಸ್ಥೆಯ ಸಹಯೋಗದಲ್ಲಿ ರಷ್ಯಾದ ಸ್ಪುಟ್ನಿಕ್ – ವಿ ಲಸಿಕೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತೀಯರನ್ನು ತಲುಪಲಿದೆ ಎಂಬ ಆಶಾವಾದ ಮೂಡಿದೆ. ಬಯೋಲಾಜಿಕಲ್ ಇ ಎಂಬ ಸಂಸ್ಥೆಯ ಸಹಯೋಗದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯೂ ಭಾರತಕ್ಕೆ ದೊರೆಯಲಿದೆ ಎಂಬ ಮಾಹಿತಿ ದೊರೆತಿದೆ. ಇಷ್ಟೇ ಅಲ್ಲದೇ, ಸೆರಂ ಇಂಡಿಯಾದ ಸಹಯೋದಲ್ಲಿ ನೊವಾವ್ಯಾಕ್ಸ್ ಎಂಬ ಅಮೆರಿಕದ ಲಸಿಕೆಯೂ ಭಾರತ ತಲುಪಲಿದೆಯಂತೆ. ಅಷ್ಟೇ ಅಲ್ಲದೇ ಜೈಕೊವ್-ಡಿ ಸಂಸ್ಥೆಯ ಲಸಿಕೆ ಮತ್ತು ಭಾರತ್ ಬಯೋಟೆಕ್ನ ಇಂಟ್ರಾನಸಲ್ ಎಂಬ ಲಸಿಕೆಗಳೂ ಭಾರತೀಯರನ್ನು ತಲುಪಲಿವೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ನಾಲ್ಕು ದಿನಗಳ ಟೀಕಾ ಉತ್ಸವ್ (ಲಸಿಕೆ ಉತ್ಸವ) ಇಂದಿನಿಂದ ಆರಂಭವಾಗಿದೆ. ಇಂದು (ಏಪ್ರಿಲ್ 11) ಜ್ಯೋತಿ ರಾವ್ ಪುಲೆ ಅವರ ಜನ್ಮದಿನಾಚರಣೆ. ಇಂದಿನಿಂದ ಏಪ್ರಿಲ್ 14ರ (ಅಂಬೇಡ್ಕರ್ ಜಯಂತಿ) ವರೆಗೆ ದೇಶದಾದ್ಯಂತ ಲಸಿಕೆ ಉತ್ಸವ್ ನಡೆಸಲು ಪ್ರಧಾನಿ ಕರೆ ನೀಡಿದ್ದರು. ಕಳೆದ ವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನಗಳ ಕಾಲ ಲಸಿಕೆ ಪಡೆಯವ ಕಾರ್ಯಕ್ರಮವನ್ನು ಲಸಿಕೆ ಉತ್ಸವವಾಗಿ ಆಚರಿಸಬೇಕು ಎಂದಿದ್ದರು. ಈ ಬಗ್ಗೆ ಇಂದು ಟ್ವೀಟ್ ಮಾಡಿದ ಪ್ರಧಾನಿ ಇಂದು ನಾವು ದೇಶದಾದ್ಯಂತ ಟೀಕಾ ಉತ್ಸವ ಆಚರಿಸಲಿದ್ದೇವೆ. ಈ ಸಂದರ್ಭದಲ್ಲಿ ದೇಶದ ನಾಗರಿಕರು 4 ವಿಷಯಗಳಿಗೆ ಬದ್ಧರಾಗಿರಲು ನಾನು ಮನವಿ ಮಾಡುತ್ತೇನೆ. ಲಸಿಕೆ ಪಡೆಯಲು ಸಹಾಯ ಅಗತ್ಯವಿರುವವರಿಗೆ ನೆರವಾಗಿ, ಕೊವಿಡ್ ಚಿಕಿತ್ಸೆಯಲ್ಲಿರುವವರಿಗೆಸಹಾಯ ಮಾಡಿ. ಮಾಸ್ಕ್ ಧರಿಸಿ ಇನ್ನೊಬ್ಬರಿಗೂ ಪ್ರೇರಣೆಯಾಗಿ. ಯಾರಿಗಾದರೂ ಕೊವಿಡ್ ಪಾಸಿಟಿವ್ ಆದರೆ ಆ ಪ್ರದೇಶದಲ್ಲಿಯೇ ಮೈಕ್ರೊ ಕಂಟೈನ್ ಮೆಂಟ್ ವಲಯ ನಿರ್ಮಿಸಿ ಎಂದಿದ್ದಾರೆ.
ಈ ಐದು ಲಸಿಕೆಗಳು ಸೆಪ್ಟೆಂಬರ್ನಲ್ಲಿ ಭಾರತ ತಲುಪಲಿವೆ ಎನ್ನಲಾದರೂ, ಇವುಗಳ ಪೈಕಿ ಇದ್ದುದ್ದರಲ್ಲೇ ಸ್ಪುಟ್ನಿಕ್ ಲಸಿಕೆಯೇ ಭಾರತಕ್ಕೆ ತಲುಪಲಿದೆ ಎನ್ನಲಾಗಿದೆ. ಭಾರತದ ಕೆಲವು ಔಷಧ ತಯಾರಕ ಕಂಪನಿಗಳ ಜತೆ 850 ಡೋಸ್ ಕೊರೊನಾ ಲಸಿಕೆ ಉತ್ಪಾದನೆಗೆ ಈ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ಎಲ್ಲ ಲಸಿಕೆಗಳು ಭಾರತಕ್ಕೆ ದೊರೆತ ಮೇಲಾದರೂ ಎಲ್ಲಾ ಭಾರತೀಯರಿಗೂ ಕೊರೊನಾ ಲಸಿಕೆ ದೊರೆಯಲಿದೆಯೇ ಕಾದುನೋಡಬೇಕಿದೆ.
ಇದನ್ನೂ ಓದಿ: ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ
Covid-19 Karnataka Update: ಕರ್ನಾಟಕದಲ್ಲಿ ಇಂದು 10,250 ಮಂದಿಗೆ ಕೊರೊನಾ ಸೋಂಕು, 40 ಸಾವು
(Another 5 corona vaccine reach india by September including Sputnik V)