ಲಕ್ನೊ: ಶನಿವಾರ ಮಧ್ಯಾಹ್ನ ಕಾನ್ಪುರ ನಗರ ಜಿಲ್ಲೆಯ ಕಲ್ಯಾಣಪುರ ಬ್ಲಾಕ್ ವ್ಯಾಪ್ತಿಯ ಕುರ್ಸೌಲಿ ಗ್ರಾಮದಲ್ಲಿ ಮೌನ ಆವರಿಸಿದೆ. ಹಲವು ಮನೆಗಳಿಗೆ ಬೀಗ ಜಡಿಯಲಾಗಿದೆ. “ನಿಗೂಢ ಜ್ವರ” ದಿಂದ ಇಲ್ಲಿ ಕಳೆದ ಒಂದು ತಿಂಗಳಲ್ಲಿ ಕನಿಷ್ಠ 12 ಜನರ ಸಾವಿನಿಂದಾಗಿ ಇಲ್ಲಿ ಭಯದ ವಾತಾವರಣ. ಅನೇಕರರು ಈಗಾಲೇ ಗ್ರಾಮವನ್ನು ಬಿಟ್ಟು ಹೋಗಿದ್ದಾರೆ. ಶನಿವಾರ, ಗ್ರಾಮದ ಮುಖ್ಯಸ್ಥ ಅಮಿತ್ ಸಿಂಗ್ ಅವರ ಚಿಕ್ಕಮ್ಮ ಗೀತಾ (40) ಅವರ ಮತ್ತೊಂದು ಸಾವಿನ ವರದಿಯಾಗಿದೆ. ಕಾನ್ಪುರ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನಿಲ್ ಕುಮಾರ್ (40) ಅವರ ಮಕ್ಕಳು ಮತ್ತು ಪತ್ನಿ ತನ್ನ ಅತ್ತೆಯ ಮನೆಯಲ್ಲಿದ್ದಾರೆ. ಆದರೆ ಅವರು ತಮ್ಮ ಎಮ್ಮೆಯನ್ನು ನೋಡಿಕೊಳ್ಳುವುದಕ್ಕಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ . “ಜನರು ಜಾನುವಾರು ಮತ್ತು ಹೊಲಗಳನ್ನು ಹೊಂದಿಲ್ಲದಿದ್ದರೆ, ಗ್ರಾಮವು ಖಾಲಿಯಾಗಿರುತ್ತಿತ್ತು. ಜ್ವರದ ಪ್ರಕರಣಗಳಿಲ್ಲದ ಒಂದು ಮನೆಯೂ ಇಲ್ಲ, ಮತ್ತು ಅನೇಕರು ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ. ಕೆಲವರು ಹತ್ತಿರದ ಪ್ರದೇಶಗಳಲ್ಲಿ ಬಾಡಿಗೆ ಮನೆಗಳನ್ನು ಹೊಂದಿದ್ದಾರೆ ”ಎಂದು ಕುಮಾರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಆರೋಗ್ಯ ಅಧಿಕಾರಿಗಳು ತಯಾರಿಸಿದ ಪಟ್ಟಿಯ ಪ್ರಕಾರ ಆಗಸ್ಟ್ 20 ರಂದು 14 ವರ್ಷದ ತನ್ನು ಪ್ರಜಾಪತಿ “ನಿಗೂಢಜ್ವರ” ದಿಂದ ಸಾವಿಗೀಡಾಗಿದ್ದು ಈ ಊರಲ್ಲಿ ಸಂಭವಿಸಿದ ಮೊದಲ ಸಾವು ಪ್ರಕರಣವಾಗಿದೆ. ಉಳಿದ 11 ಜನರಲ್ಲಿ ಒಂಬತ್ತು ಮಂದಿ ಯುವತಿಯರು ಅಥವಾ ಮಹಿಳೆಯರು ಪಾರ್ವತಿ (62), ಜೂಲಿ (23), ಸೋನಾಲಿ (19), ಲಕ್ಷ್ಮಿ ಪ್ರಜಾಪತಿ (40), ಲಕ್ಷ್ಮಿ ದೇವಿ (45), ಚಾಮ ತಿವಾರಿ (28), ಊರ್ಮಿಳಾ (35), ನಿರ್ಮಲಾ ತಿವಾರಿ (65), ವೈಷ್ಣವಿ (11). ಶಿವ ರಾಮ್ ಪ್ರಜಾಪತಿ (56) ಮತ್ತು ಮಾನ್ ಸಿಂಗ್ (55) ಮೃತಪಟ್ಟ ಇತರ ವ್ಯಕ್ತಿಗಳು. ಗೀತಾ ಸಿಂಗ್ ಸಾವು ಇನ್ನೂ ದಾಖಲಾಗಬೇಕಿದೆ.
ಕಾನ್ಪುರ ನಗರ ಜಿಲ್ಲೆಯ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ (CMO) ಡಾ ಸುಬೋಧ್ ಪ್ರಕಾಶ್ ಅವರು ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ಪತ್ತೆಹಚ್ಚಿಲ್ಲ ಎಂದು ಹೇಳಿದ್ದಾರೆ, “ಸಾವನ್ನಪ್ಪಿದ ಹೆಚ್ಚಿನ ಜನರನ್ನು ಡೆಂಗ್ಯೂ ಅಥವಾ ಮಲೇರಿಯಾ ಪರೀಕ್ಷೆಗೆ ಒಳಪಡಿಸಲಾಗಿಲ್ಲ, ಆದರೆ ಡೆಂಗ್ಯೂಗೆ ಧನಾತ್ಮಕ ಪರೀಕ್ಷೆ ಮಾಡಿದವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಮಾಡಿದ ಪರೀಕ್ಷೆಗಳಲ್ಲಿ ಶೂನ್ಯ ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ “ಎಂದು ಪ್ರಕಾಶ್ ಹೇಳಿದರು. ಮರಣದ ಲೆಕ್ಕಾಚಾರಕ್ಕಾಗಿ ಜಿಲ್ಲಾ ಸಾರ್ವಜನಿಕ ಆರೋಗ್ಯ ತಜ್ಞರ ಅಡಿಯಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ.
“ನೆರೆಯ ಹಳ್ಳಿಗಳಿಗೆ ಈ ಸಮಸ್ಯೆ ಇಲ್ಲ” ಎಂದು ಅವರು ಸೂಚಿಸಿದರು.
ಸುಮಾರು 1,200 ಜನರಿರುವ ಈ ಹಳ್ಳಿಯಲ್ಲಿ ಇತರ ಸದಸ್ಯರಂತೆ ತನ್ನುವಿನ ತಂದೆ ದಿನಗೂಲಿ ಕಾರ್ಮಿಕ. ಆಕೆಯ ಸಹೋದರಿ ಆರತಿ ಪ್ರಕಾರ, “ಕುಟುಂಬದಲ್ಲಿ ಕನಿಷ್ಠ ನಾಲ್ಕು ಜನರಿಗೆ ಜ್ವರವಿತ್ತು. ತನ್ನು ಆಗಸ್ಟ್ 18 ರಂದು ಅನಾರೋಗ್ಯಕ್ಕೆ ಒಳಗಾದರು ಮತ್ತು ನಾವು ಅವಳನ್ನು ಹ್ಯಾಲೆಟ್ (ಲಾಲಾ ಲಜಪತ್ ರಾಯ್ ಆಸ್ಪತ್ರೆ) ಗೆ ಕರೆದುಕೊಂಡು ಹೋಗುತ್ತಿದ್ದಾಗ ಆಕೆ ಕೊನೆಯುಸಿರೆಳೆದಳು. ಐದು ವರ್ಷದ ನಮ್ಮ ಸಹೋದರ ಚೇತರಿಸಿಕೊಂಡಿದ್ದಾನೆ.
48 ರ ಹರೆಯದ ಪ್ರದೀಪ್ ತಿವಾರಿ, ಹಳ್ಳಿಯ 180 ಮನೆಗಳ ಪೈಕಿ ಕನಿಷ್ಠ 50 ಬೀಗ ಹಾಕಲಾಗಿದೆ ಎಂದು ಹೇಳುತ್ತಾರೆ. ತಿವಾರಿ ಅವರ ಚಿಕ್ಕಮ್ಮ ನಿರ್ಮಲಾ ತಿವಾರಿ (65) ಮತ್ತು ಸೊಸೆ ಚಾಮ ತಿವಾರಿ (28) ಜ್ವರದಿಂದ ಸಾವನ್ನಪ್ಪಿದರು.
ತನ್ನ ಚಿಕ್ಕಮ್ಮನ ಸಾವಿನ ಬಗ್ಗೆ ಅವರಿಗೆ ಆಘಾತವಾಗಿದೆ ಎಂದು ಸರ್ಪಂಚ್ ಅಮಿತ್ ಸಿಂಗ್ ಹೇಳಿದ್ದಾರೆ. “ಅವಳು ಆರೋಗ್ಯವಾಗಿದ್ದಳು. ಮೂರು ದಿನಗಳ ಹಿಂದೆ ಆಕೆಗೆ ಜ್ವರ ಬಂದಾಗ, ನಾವು ಅವಳನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಕೆಯ ಪರಿಸ್ಥಿತಿ ಹದಗೆಟ್ಟಿತು ಮತ್ತು ಆಕೆಯನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು ”ಎಂದು ಅವರು ಹೇಳುತ್ತಾರೆ.
ಮೋಹಿನಿ ಗುಪ್ತಾ ಮಗಳು ವೈಷ್ಣವಿ(11 ವರ್ಷ) ಜ್ವರ ಬಂದ ಮೂರು ದಿನಗಳಲ್ಲಿ ಸಾವನ್ನಪ್ಪಿದ್ದಾಳೆ. “ಆಕೆಗೆ ಹೊಟ್ಟೆ ನೋವು, ವಾಂತಿ ಮತ್ತು ತೀವ್ರ ಜ್ವರ ಇತ್ತು. ನನ್ನ ಕಿರಿಯ ಮಗ ಕೂಡ ಅನಾರೋಗ್ಯಕ್ಕೆ ಒಳಗಾದ ಆದರೆ ಚೇತರಿಸಿಕೊಂಡ. ಚಿಕಿತ್ಸೆಗಾಗಿ ನಾವು 1 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದೇವೆ, ಸ್ಥಳೀಯರು ಮತ್ತು ಹಣದ ವ್ಯಾಪಾರಿಗಳಿಂದ ಸಾಲ ಪಡೆದಿದ್ದೇವೆ ಎಂದು ಗುಪ್ತಾ ಹೇಳುತ್ತಾರೆ.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಶೌಚಾಲಯ ನಿರ್ಮಿಸದಿದ್ದರೆ ಅವರು ಬಂದು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದರು. ಮನೆಯ ಹೊರಗೆ ಅಗೆದಿರುವ ಹೊಂಡವನ್ನೇ ಕುಟುಂಬವು ಶೌಚಾಲಯವಾಗಿ ಬಳಸುತ್ತದೆ. “ಕುಟುಂಬದ ಹೆಚ್ಚಿನ ಜನರು ಅನಾರೋಗ್ಯದಿಂದ ಬಳಲುತ್ತಿರುವಾಗ ಮತ್ತು ನಾವು ದೊಡ್ಡ ಸಾಲವನ್ನು ಎದುರಿಸುತ್ತಿರುವಾಗ ನಾವು ಶೌಚಾಲಯವನ್ನು ಹೇಗೆ ನಿರ್ಮಿಸಬೇಕು ಎಂದು ನೀವು ಹೇಳುತ್ತೀರಾ?” ಗುಪ್ತಾ ಕೇಳುತ್ತಿದ್ದಾರೆ.
ಕಲ್ಯಾಣಪುರ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಅಧಿಕಾರಿಯೊಬ್ಬರು ಗ್ರಾಮಸ್ಥರು ಶೌಚಾಲಯಗಳನ್ನು ನಿರ್ಮಿಸುವಂತೆ ಒತ್ತಾಯಿಸುತ್ತಿರುವುದನ್ನು ಒಪ್ಪಿಕೊಂಡರು, ಕೊಳೆತ ಚರಂಡಿಗಳು ಜ್ವರ ಏಕಾಏಕಿ ಬರಲು ಒಂದು ಕಾರಣವೆಂದು ನಂಬಲಾಗಿದೆ ಎಂದು ಹೇಳಿದರು. “ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಅವರು ತೆರೆದ ಚರಂಡಿಗಳಲ್ಲಿ ಕಸವನ್ನು ವಿಲೇವಾರಿ ಮಾಡುತ್ತಾರೆ. ಶೀಘ್ರದಲ್ಲೇ ಸರಿಯಾದ ಶೌಚಾಲಯಗಳನ್ನು ನಿರ್ಮಿಸುವಂತೆ ನಾವು 30 ಕುಟುಂಬಗಳಿಗೆ ನೋಟಿಸ್ ನೀಡಿದ್ದೇವೆ. ಈ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನೂ ಮಾಡಲಾಗಿದೆ ”ಎಂದು ಅಧಿಕಾರಿ ಹೇಳುತ್ತಾರೆ.
ನಾವು ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಫಾಗಿಂಗ್, ಸ್ಪ್ರೇ ಮತ್ತು ಇತರ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಲು ನಾವು ಅಭಿಯಾನವನ್ನೂ ನಡೆಸುತ್ತಿದ್ದೇವೆ ಎಂದಿದ್ದಾರೆ ಹೆಚ್ಚುವರಿ ಸಿಎಮ್‌ಒ ಪ್ರಕಾಶ್.
ಸಿಎಚ್‌ಸಿ ಶನಿವಾರದ ಆರೋಗ್ಯ ತಂಡದ ಭಾಗವಾಗಿದ್ದ ಫಾರ್ಮಸಿಸ್ಟ್ ಜಿತೇಂದ್ರ ಕುಮಾರ್, “ನಮ್ಮ ಸಮೀಕ್ಷೆಯ ಪ್ರಕಾರ ಗುರುವಾರ 52 ಜನರಿಗೆ ಜ್ವರವಿತ್ತು. ನಮಗೆ ಶುಕ್ರವಾರ 18 ಪ್ರಕರಣಗಳು ಮತ್ತು ಇಂದು ಎಂಟು ಪ್ರಕರಣಗಳ ಮಾಹಿತಿ ಸಿಕ್ಕಿದೆ. ಹಲವಾರು ಜನರು ಚೇತರಿಸಿಕೊಂಡಿದ್ದಾರೆ. ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದಿದ್ದಾರೆ.
“ಕೆಲವು ಜನರು ಆಸ್ಪತ್ರೆಗಳಲ್ಲಿದ್ದಾರೆ . ಸುಮಾರು 40 ಪ್ರತಿಶತದಷ್ಟು ಮನೆಗಳು ಖಾಲಿಯಾಗಿವೆ ಏಕೆಂದರೆ ಜನರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇಲ್ಲಿ ಭಯದ ವಾತಾವರಣ ಆವರಿಸಿದೆ ಎಂದಿದ್ದಾರೆ ಕುಮಾರ್.
ಕುರ್ಸೌಲಿಯ ಗ್ರಾಮಸ್ಥರು ಮುಂದೆ ಬಹಿಷ್ಕಾರವನ್ನು ಎದುರಿಸಬಹುದೆಂಬ ಆತಂಕದಲ್ಲಿದ್ದಾರೆ. “ನೆರೆಯ ಹಳ್ಳಿಗಳಲ್ಲಿ ಜನರು ನಮ್ಮನ್ನು ತಪ್ಪಿಸಲು ಆರಂಭಿಸಿದ್ದಾರೆ. ಜ್ವರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರದಿದ್ದರೆ ಹತ್ತಿರದ ಗ್ರಾಮಗಳಲ್ಲಿ ನಮಗೆ ಬೇಗ ಕೆಲಸ ಹುಡುಕುವುದು ಕಷ್ಟವಾಗಬಹುದು ”ಎನ್ನುತ್ತಾರೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ದಶಾರ್ಥ್ (38).
ಇದನ್ನೂ ಓದಿ: ರಾಜಸ್ಥಾನದಲ್ಲಿ ಅತ್ಯಧಿಕ ಅತ್ಯಾಚಾರ ಪ್ರಕರಣ ದಾಖಲು, ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ: ಎನ್‌ಸಿಆರ್‌ಬಿ
ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿ?-ನಿರ್ಧಾರ ಅವರ ಕೈಲಿದೆ ಎಂದ ಕಾಂಗ್ರೆಸ್ ನಾಯಕ
(Kursauli village in Uttar Pradesh empties out as 12 die after mysterious fever)