ನರೇಂದ್ರ ಮೋದಿ
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ, ಗೌರವ ಬಹಳಷ್ಟು ಸಿಕ್ಕಿವೆ. ಈ ಸಾಲಿಗೆ ಈಗ ಈಜಿಪ್ಟ್ನ ಅತ್ಯುಚ್ಚ ನಾಗರಿಕ ಪ್ರಶಸ್ತಿಯೂ ಸೇರಿದೆ. ಈಜಿಪ್ಟ್ ದೇಶಕ್ಕೆ ನರೇಂದ್ರ ಮೋದಿ ಭೇಟಿ ಕೊಟ್ಟ ಹೊತ್ತಿನಲ್ಲಿ ಅಲ್ಲಿನ ಅಧ್ಯಕ್ಷ ಅಬ್ದಲ್ ಫತ್ತಾಹ್ ಎಲ್–ಸಿಸಿ ಅವರು ಮೋದಿಗೆ ‘ಆರ್ಡರ್ ಆಫ್ ನೈಲ್’ ಪ್ರಶಸ್ತಿ ನೀಡಿ ಗೌರವಿಸಿದರು. ನರೇಂದ್ರ ಮೋದಿ ಅವರಿಗೆ ಇದು ವಿವಿಧ ದೇಶಗಳ ಉನ್ನತ ಗೌರವ ಮತ್ತು ಪುರಸ್ಕಾರಗಳು ಸಿಗುತ್ತಿರುವುದು ಇದು 13ನೇಯದ್ದು. ನೈಲ್ ಎಂಬುದು ಈಜಿಪ್ಟ್ನ ಪ್ರಮುಖ ನದಿ. ಭಾರತಕ್ಕೆ ಗಂಗಾ ನದಿ ಹೇಗೋ ಈಜಿಪ್ಟ್ಗೆ ನೈಲ್ ನದಿ ಇದೆ. ವಿಶ್ವದ ಅತಿದೊಡ್ಡ ನದಿಯೂ ಅದಾಗಿದೆ. ಹೀಗಾಗಿ, ಈಜಿಪ್ಟ್ನ ಅತ್ಯುಚ್ಚ ನಾಗರಿಕ ಪ್ರಶಸ್ತಿಗೆ ನೈಲ್ ನದಿ ಹೆಸರು ಇಡಲಾಗಿದೆ.
ಕಳೆದ 9 ವರ್ಷಗಳಿಂದ ಮೋದಿ ಈ 13 ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ ಅಂತಾರಾಷ್ಟ್ರೀಯ ಸಂಘಟನೆಗಳಿಂದಲೂ ಪುರಸ್ಕಾರ ಗಿಟ್ಟಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಅವಧಿಯಲ್ಲಿ ಪಡೆದ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ…
- ಈಜಿಪ್ಟ್: ಆರ್ಡರ್ ಆಫ್ ದಿ ನೈಲ್– 2023ರಲ್ಲಿ ಪ್ರಧಾನಿ ಮೋದಿಗೆ ಸಿಕ್ಕಿದೆ.
- ಪಪುವಾ ನ್ಯೂಗಿನಿಯಾ: ಕಂಪೇನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹು– ಇದು ಆ ದೇಶದ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾಗಿದೆ. ಪೆಸಿಫಿಕ್ ಐಲ್ಯಾಂಡ್ ದೇಶಗಳ ಒಗ್ಗಟ್ಟಿಗೆ ಕಾರಣರಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2023 ಮೇ ತಿಂಗಳಲ್ಲಿ ಈ ಪ್ರಶಸ್ತಿ ಸಿಕ್ಕಿತ್ತು.
- ಫಿಜಿ: ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ– 2023 ಮೇ ತಿಂಗಳಲ್ಲಿ ಮೋದಿಗೆ ಈ ಗೌರವ ಸಿಕ್ಕಿತು. ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಗೌರವವಾಗಿ ಫಿಜಿ ಅತ್ಯುನ್ನತ ಗೌರವ ಪ್ರಶಸ್ತಿ ಸಿಕ್ಕಿತು.
- ರಿಪಬ್ಲಿಕ್ ಆಫ್ ಪಲೋ: ಎಬಕಲ್ ಅವಾರ್ಡ್– ಇದೂ ಕೂಡ 2023 ಮೇ ತಿಂಗಳಲ್ಲಿ ಮೋದಿಗೆ ಸಿಕ್ಕಿದೆ. ಪಪುವಾ ನ್ಯೂಗಿನಿಯಾ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಿಪಬ್ಲಿಕ್ ಆಫ್ ಪಲೋನ ಅಧ್ಯಕ್ಷ ಸುರೇಂಜಲ್ ಎಸ್ ವಿಪ್ಸ್ ಜೂನಿಯರ್ ಅವರು ಮೋದಿಗೆ ಈ ಪ್ರಶಸ್ತಿ ನೀಡಿದರು.
- ಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋ: ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು 2021 ಡಿಸೆಂಬರ್ನಲ್ಲಿ ಮೋದಿಗೆ ಕೊಡಲಾಯಿತು.
- ಅಮೆರಿಕ– ಲೆಜಿಯನ್ ಆಫ್ ಮೆರಿಟ್: ಇದನ್ನು ಅಸಾಧಾರಣ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಅಮೆರಿಕದ ಸಶಸ್ತ್ರ ಪಡೆ ಕೊಡುವ ಗೌರವವಾಗಿದೆ. 2020ರಲ್ಲಿ ಮೋದಿಗೆ ಇಂಥದ್ದೊಂದು ಅಪೂರ್ವ ಪ್ರಶಸ್ತಿ ಸಿಕ್ಕಿತ್ತು.
- ಬಹರೇನ್: ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್: 2019ರಲ್ಲಿ
- ಮಾಲ್ಡೀವ್ಸ್: ಆರ್ಡರ್ ಆಫ್ ದಿ ಡಿಸ್ಟಿಂಗ್ಯುಶ್ಡ್ ರೂಲ್ ಅಫ್ ನಿಶಾನ್ ಇಜ್ಜುದ್ದೀನ್– ಇದು ವಿದೇಶೀ ಗಣ್ಯರಿಗೆ ಕೊಡಗುವ ಅತ್ಯುನ್ನತ ಗೌರವವಾಗಿದೆ. ಮೋದಿಗೆ 2019ರಲ್ಲಿ ಇದು ದೊರಕಿದೆ.
- ರಷ್ಯಾ: ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅವಾರ್ಡ್– ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಇದು 2019ರಲ್ಲಿ ಮೋದಿಗೆ ಸಿಕ್ಕಿದೆ.
- ಯುಎಇ: ಆರ್ಡರ್ ಆಫ್ ಝಾಯೆದ್ ಅವಾರ್ಡ್– ಸಂಯುಕ್ತ ಅರಬ್ ಸಂಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ 2019ರಲ್ಲಿ ನರೇಂದ್ರ ಮೋದಿ ಅವರಿಗೆ ಲಭಿಸಿದೆ.
- ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲಸ್ಟೀನ್ ಅವಾರ್ಡ್: 2018ರಲ್ಲಿ ಮೋದಿಗೆ ಇದು ಸಿಕ್ಕಿತು. ವಿದೇಶೀ ಗಣ್ಯರಿಗೆ ಪ್ಯಾಲಸ್ಟೀನ್ ದೇಶ ನೀಡುವ ಅತ್ಯುಚ್ಚ ಪ್ರಶಸ್ತಿ ಇದು.
- ಅಫ್ಘಾನಿಸ್ತಾನ: ಸ್ಟೇಟ್ ಆರ್ಡರ್ ಆಫ್ ಘಾಜಿ ಆಮಿರ್ ಅಮಾನುಲ್ಲಾ ಖಾನ್– 2016ರಲ್ಲಿ ಅಫ್ಘಾನಿಸ್ತಾನದ ಈ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನಿ ಮೋದಿಗೆ ದೊರಕಿತು.
- ಸೌದಿ ಅರೇಬಿಯಾ: ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್– 2016ರಲ್ಲಿ ಸೌದಿ ಅರೇಬಿಯಾದ ಮುಸ್ಲಿಮೇತರರಿಗೆ ಕೊಡಲಾಗುವ ಅತ್ಯುನ್ನತ ಗೌರವ ನರೇಂದ್ರ ಮೋದಿಗೆ ಸಿಕ್ಕಿತು.
ಇದನ್ನೂ ಓದಿ: PM Modi Egypt Visit: ಪ್ರಧಾನಿ ಮೋದಿಗೆ ಈಜಿಪ್ಟ್ನಲ್ಲಿ ಆರ್ಡರ್ ಆಫ್ ದಿ ನೈಲ್ ಗೌರವ
ಇತರ ಅಂತರರಾಷ್ಟ್ರೀಯ ಸಂಘಟನೆಗಳು ಮತ್ತು ಫೌಂಡೇಶನ್ಗಳಿಂದ ಮೋದಿಗೆ ಸಿಕ್ಕ ಪ್ರಶಸ್ತಿಗಳು
- 2021ರಲ್ಲಿ ಗ್ಲೋಬಲ್ ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಲೀಡರ್ಶಿಪ್ ಅವಾರ್ಡ್; ಕೇಂಬ್ರಿಡ್ಜ್ ಎನರ್ಜಿ ರಿಸರ್ಚ್ ಅಸೋಸಿಯೇಟ್ಸ್ (ಸಿಇಆರ್ಎ) ಈ ಪ್ರಶಸ್ತಿ ನೀಡಿತ್ತು.
- 2019ರಲ್ಲಿ ಗ್ಲೋಬಲ್ ಗೋಲ್ಕೀಪರ್ ಅವಾರ್ಡ್: ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸ್ವಚ್ಛ ಭಾರತ್ ಅಭಿಯಾನಕ್ಕಾಗಿ ಈ ಪ್ರಶಸ್ತಿಯನ್ನು ಮೋದಿಗೆ ದಯಪಾಲಿಸಿತ್ತು.
- 2018ರಲ್ಲಿ ಚಾಂಪಿಯನ್ಸ್ ಆಫ್ ದಿ ಅರ್ತ್ ಅವಾರ್ಡ್– ಇದು ವಿಶ್ವಸಂಸ್ಥೆ ಪರಿಸರ ರಕ್ಷಣೆ ಕಾರ್ಯಕ್ಕೆ ನೀಡುವ ಅತ್ಯುಚ್ಛ ಗೌರವ
- 2018ರಲ್ಲಿ ಸೋಲ್ ಪೀಸ್ ಪ್ರೈಜ್: ವಿಶ್ವಶಾಂತಿಗಾಗಿ ದೇಶಗಳ ನಡುವೆ ಬಾಂಧವ್ಯ ರೂಪಿಸಿದ ಮತ್ತು ಮನುಕುಲದ ಸಾಮರಸ್ಯತೆಗೆ ಕೊಡುಗೆ ನೀಡಿದ್ದಕ್ಕಾಗಿ ದಕ್ಷಿಣ ಕೊರಿಯಾದ ಸೋಲ್ ಪೀಸ್ ಪ್ರೈಜ್ ಕಲ್ಚರಲ್ ಫೌಂಡೇಶನ್ ಸಂಸ್ಥೆ ಈ ಪ್ರಶಸ್ತಿ ನೀಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ