ಭೋಪಾಲ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಹಳ್ಳಿಯ ಬಳಿ ಬಸ್ ಸೇತುವೆಯಿಂದ ನಾಲೆಗೆ ಬಿದ್ದಿದೆ. ಈ ದುರ್ಘಟನೆಯಲ್ಲಿ 32 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ. ಬಸ್ನಲ್ಲಿ ಸುಮಾರು 54 ಮಂದಿ ಪ್ರಯಾಣ ಮಾಡುತ್ತಿದ್ದರು, ಅದರಲ್ಲಿ ಏಳು ಮಂದಿ ಈಜಿಕೊಂಡು ದಡಸೇರಿದ್ದಾರೆ ಎಂದು ವರದಿಯಾಗಿದೆ. ಬಸ್ ಪೂರ್ತಿ ಮುಳುಗಿದ್ದು, ಕಣ್ಣಿಗೆ ಕಾಣುತ್ತಿಲ್ಲ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಈ ಬಸ್ ಸಿಧಿಯಿಂದ ಸತ್ನಾಕ್ಕೆ ಪ್ರಯಾಣ ಮಾಡುತ್ತಿತ್ತು. ಬೆಳಗ್ಗೆ 8.30ರ ಹೊತ್ತಿಗೆ ಘಟನೆ ನಡೆದಿದ್ದು, ಆಗಿನಿಂದಲೂ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (State Disaster Response Fund (SDRF)ಸಿಬ್ಬಂದಿ ಮತ್ತು ನುರಿತ ಈಜುಗಾರರು ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿದ್ದಾರೆ. ಇದು ತುಂಬ ಆಳವಾದ ನಾಲೆಯಾಗಿದ್ದು, ಬಸ್ ಮೊದಲು ಅರ್ಧ ಮುಳುಗಿತ್ತು. ಬರುಬರುತ್ತ ಪೂರ್ತಿಯಾಗಿ ಮುಳುಗಿ ಕಣ್ಮರೆಯಾಗಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ದುರ್ಘಟನೆಯ ಬಗ್ಗೆ ವರದಿ ಕೇಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಬಗ್ಗೆ ಸಿಧಿ ಜಿಲ್ಲಾಧಿಕಾರಿಯಿಂದ ಮಾಹಿತಿ ಕೇಳಿದ್ದಾರೆ. ಇನ್ನು ಈ ನಾಲೆಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಾಚರಣೆಯೂ ಕಷ್ಟವಾಗುತ್ತಿದೆ. ಹಾಗಾಗಿ ಶಾಹದಲ್ ಜಿಲ್ಲೆಯಲ್ಲಿ ಸೋನೆ ನದಿಗೆ ಕಟ್ಟಲಾದ ಬಾಣ್ಸಾಗರ್ ಅಣೆಕಟ್ಟೆಯಿಂದ ನೀರು ಬಿಡುವುದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಚೌಹಾಣ್ ನಿರ್ದೇಶನ ನೀಡಿದ್ದಾರೆ.
ಅಮಿತ್ ಶಾ ಕಾರ್ಯಕ್ರಮ ರದ್ದು
ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಸುಮಾರು 1 ಲಕ್ಷಕ್ಕೂ ಹೆಚ್ಚು ಮನೆಗಳ ಫಲಾನುಭವಿಗಳಿಗಾಗಿ ಇಂದು ಗೃಹ ಪ್ರವೇಶ ಎಂಬ ಸರ್ಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಿಂಟೋ ಹಾಲ್ನಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವವರಿದ್ದರು. ಆದರೆ ಬಸ್ ಅಪಘಾತ ನಡೆದ ಬೆನ್ನಲ್ಲೇ ಈ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಕಾರ್ಯಕ್ರಮ ನಡೆಯಲಿದ್ದ ಸ್ಥಳಕ್ಕೆ ಆಗಮಿಸಿದ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮ ರದ್ದು ಮಾಡುವುದಾಗಿ ಘೋಷಿಸಿದರು.
ಇದನ್ನೂ ಓದಿ: Khopoli Road Accident ಮಹಾರಾಷ್ಟ್ರದ ಕೋಪೋಲಿ ಬಳಿ ಸರಣಿ ಅಪಘಾತ, ಐವರು ಸ್ಥಳದಲ್ಲೇ ಸಾವು
Published On - 1:09 pm, Tue, 16 February 21