West Bengal Assembly Election: ಮಿಥುನ್ ಚಕ್ರವರ್ತಿಯವರನ್ನು ಭೇಟಿಯಾದ ಮೋಹನ್ ಭಾಗವತ್; ರಾಜಕೀಯ ವಲಯದಲ್ಲಿ ಕುತೂಹಲ
West Bengal Assembly Election: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿಯೂ ಆಗೀಗ ಕೇಳಿಬಂದಿತ್ತು. ಆದರೆ ಸದ್ಯ ಅವರು ಎರಡು ಬಾರಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿ, ಸಂಪೂರ್ಣ ವಿಶ್ರಾಂತಿಯಲ್ಲಿ ಇದ್ದಾರೆ.
ಕೋಲ್ಕತ್ತ: ಪಶ್ಚಿಮ ಬಂಗಾಳ (West Bengal) ದಲ್ಲಿ ಸದ್ಯ ವಿಧಾನಸಭಾ ಚುನಾವಣೆ ( Assembly Election) ಕಾವು ಇದೆ. ಅದರಲ್ಲೂ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಹಣಾಹಣಿ ಈಗಿನಿಂದಲೇ ಶುರುವಾಗಿದೆ. ಈ ಮಧ್ಯೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಂಬೈನಲ್ಲಿ ಖ್ಯಾತ ನಟ ಮಿಥುನ್ ಚಕ್ರವರ್ತಿಯವರನ್ನು ಭೇಟಿಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಮುಂಬೈನ ಮಿಥುನ್ ಚಕ್ರವರ್ತಿ ನಿವಾಸಕ್ಕೆ ಭೇಟಿ ನೀಡಿದ ಮೋಹನ್ ಭಾಗವತ್ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ನಾಗ್ಪುರಕ್ಕೆ ಹೋಗಿದ್ದ ಮಿಥುನ್ ಚಕ್ರವರ್ತಿ ಅಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ರನ್ನು ಭೇಟಿಯಾಗಿದ್ದರು. ಹಾಗೇ ಒಮ್ಮೆ ಮುಂಬೈಗೆ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಇದೀಗ ಮೋಹನ್ ಭಾಗವತ್ ಮುಂಬೈಗೆ ಬಂದಾಗ ಮಿಥುನ್ ಚಕ್ರವರ್ತಿಯವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಈ ಭೇಟಿ ಹೆಚ್ಚಿನ ಮಹತ್ವ ಪಡೆದಿದೆ.
ಕುತೂಹಲ ಏಕೆ? ನಟ ಮಿಥುನ್ ಚಕ್ರವರ್ತಿ ಮೂಲತಃ ಪಶ್ಚಿಮ ಬಂಗಾಳದವರು. ಇಲ್ಲಿ ಅನೇಕ ಅಭಿಮಾನಿಗಳು, ಫಾಲೋವರ್ಸ್ನ್ನು ಹೊಂದಿದ್ದಾರೆ. 70ವರ್ಷದ ಮಿಥುನ್ ಚಕ್ರವರ್ತಿಗೆ ರಾಜಕೀಯ ಹೊಸದಲ್ಲ. ಈ ಹಿಂದೆ ತೃಣಮೂಲ ಕಾಂಗ್ರೆಸ್ನಿಂದ ರಾಜ್ಯಸಭೆಗೆ ಹೋಗಿದ್ದವರು. ಶ್ರದ್ಧಾ ಚಿಟ್ ಫಂಡ್ ಹಗರಣ ಬೆಳಕಿಗೆ ಬಂದ ನಂತರ ಅಂದರೆ 2016ರಲ್ಲಿ ಮಿಥುನ್ ಚಕ್ರವರ್ತಿ ರಾಜ್ಯಸಭಾ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಅವರ ಆರೋಗ್ಯವೂ ಹಾಳಾಗಿತ್ತು.
ಈಗಂತೂ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೆಲುವಿಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಈ ಬಾರಿ ಹೇಗಾದರೂ ಸರಿ ಪಶ್ಚಿಮ ಬಂಗಾಳವನ್ನು ಗೆಲ್ಲಬೇಕು ಎಂಬ ಗುರಿಯನ್ನಿಟ್ಟುಕೊಂಡು ರಾಷ್ಟ್ರನಾಯಕರೂ ಅಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹಾಗೇ, ಸ್ಥಳೀಯ, ಗೆಲ್ಲುವ, ಹೊಸ ಮುಖವನ್ನೂ ಹುಡುಕುತ್ತಿದ್ದಾರೆ. ಹೀಗೆಲ್ಲ ಇರುವಾಗ ಮಿಥುನ್ ಚಕ್ರವರ್ತಿ ಮತ್ತು ಮೋಹನ್ ಭಾಗವತ್ ಭೇಟಿ ತುಸು ಹೆಚ್ಚು ಎನ್ನುವಷ್ಟೇ ಕುತೂಹಲ ಮೂಡಿಸಿದೆ. ಮಿಥುನ್ ಚಕ್ರವರ್ತಿಯವರನ್ನು ಮತ್ತೆ ರಾಜಕೀಯಕ್ಕೆ ಕರೆತರಲು ಬಿಜೆಪಿ, ಆರ್ಎಸ್ಎಸ್ ಮೂಲಕ ಪ್ರಯತ್ನ ಮಾಡುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಇನ್ನು ಭೇಟಿಯ ಬಗ್ಗೆ ಮಿಥುನ್ ಚಕ್ರವರ್ತಿ ಅದಾಗಲೇ ಸ್ಪಷ್ಟನೆ ನೀಡಿದ್ದು, ನಮ್ಮಿಬ್ಬರ ಭೇಟಿಯ ಬಗ್ಗೆ ಯಾವುದೇ ಊಹಾಪೋಹ ಬೇಡ. ನಾವಿಬ್ಬರೂ ಮೊದಲಿನಿಂದಲೂ ಪರಿಚಿತರು. ನಾನು ಹಿಂದೆ ಅವರನ್ನು ಭೇಟಿ ಮಾಡಿದ್ದಾಗ, ನೀವು ಯಾವಾಗ ಮುಂಬೈಗೆ ಬಂದರೂ ನಮ್ಮನೆಗೆ ಬನ್ನಿ ಎಂದು ಮನವಿ ಮಾಡಿದ್ದೆ. ಅದನ್ನು ಪುರಸ್ಕರಿಸಿ ಈಗ ಬಂದಿದ್ದಷ್ಟೇ. ಆಧ್ಯಾತ್ಮಿಕ ವಿಚಾರಗಳಲ್ಲಿ ನನ್ನ ಹಾಗೂ ಮೋಹನ್ ಭಾಗವತ್ ಜೀ ಮಧ್ಯೆ ತುಂಬ ಸಾಮ್ಯತೆ ಇದೆ. ಅದರ ಬಗ್ಗೆಯೇ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಗಂಗೂಲಿ ಹೆಸರೂ ಕೇಳಿಬಂದಿತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿಯೂ ಆಗೀಗ ಕೇಳಿಬಂದಿತ್ತು. ಆದರೆ ಸದ್ಯ ಅವರು ಎರಡು ಬಾರಿ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿ, ಸಂಪೂರ್ಣ ವಿಶ್ರಾಂತಿಯಲ್ಲಿ ಇದ್ದಾರೆ. ಇದೀಗ ಮಿಥುನ್ ಚಕ್ರವರ್ತಿ ಮತ್ತೆ ರಾಜಕೀಯ ಪ್ರವೇಶ ಮಾಡುತ್ತಾರಾ? ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರಾ? ಎಂಬಿತ್ಯಾದಿ ಕುತೂಹಲ ಸಹಜವಾಗಿಯೇ ಶುರುವಾಗಿದೆ.
ಇದನ್ನೂ ಓದಿ:Modipara vs Didir Doot: ಪಶ್ಚಿಮ ಬಂಗಾಳದಲ್ಲಿ ಆ್ಯಪ್ ಫೈಟ್! ಬಿಡುಗಡೆ ಆಯ್ತು ಮೋದಿ-ಮಮತಾ ಅಪ್ಲಿಕೇಶ್ನಗಳು!