West Bengal Election 2021: ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ಐದು ರೂಪಾಯಿ ಊಟ, ‘ಮಾ’ ಯೋಜನೆ ಜಾರಿಗೆ ತಂದ ಮಮತಾ
West Bengal Election 2021: ಈ ಬಾರಿಯ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಗಮನ ಸೆಳೆಯುತ್ತಿದ್ದು, 2019ರ ಲೋಕಸಭೆ ಚುನಾವಣೆ ಮೂಲಕ ಪಶ್ಚಿಮ ಬಂಗಾಳದಲ್ಲಿ ಕೊಂಚ ಬಲಪಡೆದಿರುವ ಬಿಜೆಪಿ ಪ್ರಸ್ತುತ ಆಡಳಿತರೂಢ ಟಿಎಂಸಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ತಂತ್ರಗಾರಿಕೆ ಜೋರಾಗಿ ಸಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು (West Bengal Election 2021) ದೃಷ್ಟಿಯಲ್ಲಿರಿಸಿಕೊಂಡಿರುವ ಮಮತಾ ಬ್ಯಾನರ್ಜಿ ಸರ್ಕಾರ ಇಂದಿನಿಂದಲೇ ರಾಜ್ಯದ ಜನತೆಗೆ ಐದು ರೂಪಾಯಿಗೆ ಊಟ ನೀಡಲು ಸಿದ್ಧವಾಗಿದೆ. ಈ ಯೋಜನೆಗೆ ‘ಮಾ’ ಎಂದು ಹೆಸರಿಡಲಾಗಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ (TMC) ‘‘ಮಾ, ಮಾಟಿ, ಮನುಷ್’’ (ತಾಯಿ, ಭೂಮಿ, ಮನುಷ್ಯ) ಎಂಬ ಘೋಷವಾಕ್ಯದಿಂದಲೇ ಯೋಜನೆಯ ಹೆಸರನ್ನು ಆರಿಸಿಕೊಳ್ಳಲಾಗಿದೆ. ಆರಂಭಿಕ ಹಂತದಲ್ಲಿ ಕೋಲ್ಕತ್ತಾ ನಗರದ 16 ಕಡೆ ‘ಮಾ’ ಯೋಜನೆ ಜಾರಿಯಾಗಲಿದ್ದು, ನಂತರದ ದಿನಗಳಲ್ಲಿ ರಾಜ್ಯದೆಲ್ಲೆಡೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಮಾ ಯೋಜನೆಯಡಿಯಲ್ಲಿ ಸಿಗುವ ಊಟಕ್ಕೆ ಅನ್ನ, ದಾಲ್, ತರಕಾರಿ ಪದಾರ್ಥ ಮತ್ತು ಮೊಟ್ಟೆಯನ್ನು ನೀಡಲಾಗುವುದು. ಒಂದು ತಟ್ಟೆ ಊಟಕ್ಕೆ ₹5 ಇರಲಿದ್ದು, ನಿಗದಿತ ಸಮಯದಲ್ಲಿ ಊಟ ದೊರೆಯಲಿದೆ ಎಂದು ಯೋಜನೆಯ ಕುರಿತಾಗಿ ಕೋಲ್ಕತ್ತಾ ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಯೋಜನೆಗಾಗಿಯೇ ಬಜೆಟ್ನಲ್ಲಿ ಮೊತ್ತವನ್ನು ತೆಗೆದಿರಿಸಲಾಗಿದ್ದು ಕ್ರಮೇಣ ನಗರ, ಸಣ್ಣ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳ ಜನರನ್ನೂ ‘ಮಾ’ ತಲುಪಲಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಕೊವಿಡ್ 19 ಸಾಂಕ್ರಾಮಿಕದಿಂದ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕರಿಗೆಂದೇ ಟಿಎಂಸಿ ಪಕ್ಷವು ದೀದಿರ್ ರಾನಾಘರ್ (ದೀದಿಯ ಅಡುಗೆಕೋಣೆ) ಎಂಬ ಯೋಜನೆ ಜಾರಿಗೆ ತಂದಿತ್ತು. ಇನ್ನೊಂದೆಡೆ ಇದಕ್ಕೆ ಪ್ರತಿಯಾಗಿ ಸಿಪಿಐ(ಎಂ) ಪಕ್ಷವೂ ‘ಶ್ರಮಜೀವಿ ಕ್ಯಾಂಟಿನ್’ ಆರಂಭಿಸಿತ್ತು. ಜೊತೆಗೆ, ಸುಮಾರು 50 ಆರೋಗ್ಯ ಕೇಂದ್ರ ಆರಂಭಿಸಿ, ಸಂಕಷ್ಟದಲ್ಲಿರುವವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಗಮನ ಸೆಳೆದಿತ್ತು.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ರೈತರಿಗೆ ಅನ್ಯಾಯ ಎಸಗಿದ್ದಾರೆ; ಪಶ್ಚಿಮ ಬಂಗಾಳದಲ್ಲಿ ಜೆ.ಪಿ. ನಡ್ಡಾ ವಾಗ್ದಾಳಿ
ಈ ಬಾರಿಯ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಗಮನ ಸೆಳೆಯುತ್ತಿದ್ದು, 2019ರ ಲೋಕಸಭೆ ಚುನಾವಣೆ ಮೂಲಕ ಪಶ್ಚಿಮ ಬಂಗಾಳದಲ್ಲಿ ಕೊಂಚ ಬಲಪಡೆದಿರುವ ಬಿಜೆಪಿ ಪ್ರಸ್ತುತ ಆಡಳಿತರೂಢ ಟಿಎಂಸಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. 294 ಸ್ಥಾನಗಳಲ್ಲಿ ಕನಿಷ್ಟ 200 ಸ್ಥಾನಗಳನ್ನಾದರೂ ಬಾಚಿಕೊಳ್ಳುವ ಉಮೇದಿಯಲ್ಲಿರುವ ಬಿಜೆಪಿಯನ್ನು ಕಟ್ಟಿಹಾಕಲು ಟಿಎಂಸಿ ಪ್ರಯತ್ನಿಸುತ್ತಲೇ ಇದೆ. ಸದ್ಯ ಈ ಪ್ರಯತ್ನದ ಒಂದು ಭಾಗವೆಂಬಂತೆ ₹5ಕ್ಕೆ ಊಟ ನೀಡುವ ಯೋಜನೆ ಶುರುವಾಗಿದ್ದು, ಬಿಜೆಪಿ ಇದಕ್ಕೆ ಯಾವ ರೀತಿಯಲ್ಲಿ ತಿರುಗೇಟು ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.