ಮುಂಬೈ: ಮಹಾರಾಷ್ಟ್ರದಲ್ಲಿ ತಮ್ಮ ಮೈತ್ರಿ ಪಾಲುದಾರರಾದ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಘೋಷಿಸಿದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು (ಅಕ್ಟೋಬರ್ 8) ಹೇಳಿದ್ದಾರೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ರಾಜ್ಯ ಮಟ್ಟದಲ್ಲಿ ಶಿವಸೇನೆ ಆಯೋಜಿಸಿದ್ದ ವಜ್ರ ನಿರ್ಧಾರ್ ಪರಿಷತ್ತಿನ ಕಾರ್ಯಕ್ರಮದಲ್ಲಿ ಇಂದು ಮಾತನಾಡುತ್ತಾ, ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸುವ ಮಹತ್ವವನ್ನು ಎತ್ತಿ ತೋರಿಸಿದರು. ಮೈತ್ರಿ ಪಾಲುದಾರರಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. “ಕಾಂಗ್ರೆಸ್ ಅಥವಾ ಎನ್‌ಸಿಪಿ ಮುಖ್ಯಮಂತ್ರಿಯ ಅಭ್ಯರ್ಥಿಯನ್ನು ಘೋಷಿಸಬೇಕು. ನಾನು ಅವರನ್ನು ಬೆಂಬಲಿಸುತ್ತೇನೆ. ಏಕೆಂದರೆ ಮಹಾರಾಷ್ಟ್ರ ನಮಗೆ ಬಹಳ ಮುಖ್ಯವಾಗಿದೆ” ಎಂದು ಠಾಕ್ರೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಅವರು ಬಿಜೆಪಿಯನ್ನು ಕಟುವಾಗಿ ಟೀಕಿಸಿದರು. ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇಡೀ ದೇಶದಲ್ಲಿ ಹೋರಾಟವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ವಿಕಸಿತ ಭಾರತದ ಗುರಿ ಸಾಕಾರಗೊಳ್ಳುವವರೆಗೂ ವಿಶ್ರಮಿಸುವುದಿಲ್ಲ; 23 ವರ್ಷಗಳ ಪಯಣ ನೆನಪಿಸಿಕೊಂಡ ಪ್ರಧಾನಿ ಮೋದಿ
“ದೆಹಲಿಯಲ್ಲಿ ಕುಳಿತಿರುವ ಸರ್ಕಾರ ಸಂವಿಧಾನವನ್ನು ಬದಲಾಯಿಸಲು ಹೊರಟಿದೆ. ಆದರೆ ಅವರು ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಇಂದು ಹರಿಯಾಣ ಮತ್ತು ಕಾಶ್ಮೀರದಲ್ಲಿ ಬಂದಿರುವ ಫಲಿತಾಂಶಗಳನ್ನು ಗಮನಿಸಿದರೆ ಪ್ರತಿ ರಾಜ್ಯದ ಜನರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಮತ್ತಷ್ಟು ಸ್ಪಷ್ಟವಾಗಿದೆ. ಗುಜರಾತಿ ಮತ್ತು ಮರಾಠಿ ನಡುವೆ ಎಂದಿಗೂ ಜಗಳ ನಡೆದಿಲ್ಲ. ದೆಹಲಿಯಲ್ಲಿ ಕುಳಿತ ಇಬ್ಬರು ಪುಂಡರು ಇಡೀ ದೇಶದಲ್ಲಿ ಹೋರಾಟವನ್ನು ಸೃಷ್ಟಿಸಿದ್ದಾರೆ ಎಂದು ಠಾಕ್ರೆ ಆರೋಪಿಸಿದ್ದಾರೆ.
ಬಿಜೆಪಿಯ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಘೋಷಣೆಯ ಬಗ್ಗೆಯೂ ಠಾಕ್ರೆ ಕಿಡಿಕಾರಿದರು. ಅದನ್ನು “ಸಬ್ಕಾ ಸಾಥ್, ದೋಸ್ತ್ ಕಾ ವಿಕಾಸ್” ಎಂದು ಟೀಕಿಸಿದರು. “ಚುನಾವಣೆಯವರೆಗೆ ಬಿಜೆಪಿಯವರ ಏಕೈಕ ಕಾಳಜಿ ಸಬ್ಕಾ ಸಾಥ್ ಮತ್ತು ದೋಸ್ತ್ ಕಾ ವಿಕಾಸ್. ಈ ಸ್ವಾರ್ಥವು ದೇಶಕ್ಕೆ ಅಪಾಯಕಾರಿಯಾಗಿದೆ. ಸಾರ್ವಜನಿಕರನ್ನು ಗೊಂದಲದಿಂದ ಮುಕ್ತಗೊಳಿಸುವುದು ನಿಮ್ಮ ಕೆಲಸ ಎಂದು ಠಾಕ್ರೆ ಹೇಳಿದ್ದಾರೆ.
ಇದನ್ನೂ ಓದಿ: Haryana Election Result: ಹರಿಯಾಣದಲ್ಲಿ ಬಿಜೆಪಿ ಗೆಲುವು ಖಚಿತ; ಇಂದು ಸಂಜೆ ಪಕ್ಷದ ನಾಯಕರ ಜೊತೆ ಮೋದಿ ಸಭೆ
ಇತ್ತೀಚಿನ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಠಾಕ್ರೆ, “ಮಹಾರಾಷ್ಟ್ರವು ಲೋಕಸಭೆಯಲ್ಲಿ ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದೆ ಎಂದು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು. ಶಿವಸೇನೆ ಈಗಲೂ ಹಿಂದುತ್ವದೊಂದಿಗೆ ನಿಂತಿದೆಯೇ ಹೊರತು ಬಿಜೆಪಿ ಜತೆ ಅಲ್ಲ ಎಂದು ಅವರು ಪ್ರತಿಪಾದಿಸಿದರು.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಭಾರತದ ಚುನಾವಣಾ ಆಯೋಗವು ಇನ್ನೂ ಚುನಾವಣಾ ದಿನಾಂಕಗಳನ್ನು ಪ್ರಕಟಿಸಬೇಕಾಗಿದೆ. ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿ ಒಕ್ಕೂಟ ಮತ್ತು ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), NCP (ಅಜಿತ್ ಪವಾರ್ ಬಣ)ವನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟದ ನಡುವೆ ಪೈಪೋಟಿ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ