ಮುಂಬೈ: ಮಹಾ ಅಚ್ಚರಿ ಮತ್ತು ಶಾಕಿಂಗ್ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ಸಿಪಿ ಸರ್ಕಾರ ರಚಿಸಿದೆ. ಆದ್ರೆ ನೂತನ ಸರ್ಕಾರ ರಚನೆಗೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಬೆಂಬಲ ನೀಡಿಲ್ಲ. ನನಗೆ ಗೊತ್ತಿಲ್ಲದೆ ಸರ್ಕಾರ ರಚನೆ ಮಾಡಿದ್ದಾರೆ ಎನ್ನುತ್ತಿದ್ದಾರೆ. ಹಾಗಾದ್ರೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ಸಂಖ್ಯಾಬಲ ಎಷ್ಟಿರಬೇಕು? ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಎಷ್ಟು ಎನ್ನುವ ಮಾಹಿತಿ ಇಲ್ಲಿದೆ.
ಮ್ಯಾಜಿಕ್ ನಂಬರ್ 145:
288 ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಮ್ಯಾಜಿಕ್ ನಂಬರ್ 145 ಅಗತ್ಯ. ಆದ್ರೆ ಯಾರ ಬಳಿಯೂ ಅಷ್ಟೊಂದು ಬಹುಮತ ಇಲ್ಲ. 105 ಕ್ಷೇತ್ರಗಳನ್ನ ಗೆದ್ದು ಬಹು ದೊಡ್ಡ ಪಕ್ಷವಾಗಿ ಹೊರಬಂದಿರುವ ಬಿಜೆಪಿಗೆ 40 ಸದಸ್ಯರ ಅಗತ್ಯವಿದೆ. ಶಿವಸೇನಾ 56 ಸ್ಥಾನಗಳನ್ನು ಪಡೆದಿದ್ರೆ, ಕಾಂಗ್ರೆಸ್ 44 ಸದಸ್ಯರನ್ನು ಹೊಂದಿದೆ. 54 ಕ್ಷೇತ್ರಗಳಲ್ಲಿ ಎನ್ಸಿಪಿ ಗೆಲುವು ದಾಖಲಿಸಿದೆ. ಉಳಿದ 29 ಕ್ಷೇತ್ರಗಳಲ್ಲಿ ಇತರರು ಗೆಲುವು ದಾಖಲಿಸಿದ್ದಾರೆ.
ಈ ಮಧ್ಯೆ, ದಿಢೀರನೆ ಬಿಜೆಪಿಗೆ 30ಕ್ಕೂ ಹೆಚ್ಚು ಎನ್ಸಿಪಿ ಶಾಸಕರ ಬೆಂಬಲ ದಕ್ಕಿದೆ ಎನ್ನಲಾಗಿದೆ. ಶಿವಸೇನೆಯಿಂದಲೂ ನಾಲ್ಕಾರು ಶಾಸಕರೂ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಇನ್ನು 10-15 ಪಕ್ಷೇತರ ಶಾಸಕರೂ ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ.
ನ.30ರೊಳಗೆ ಬಹುಮತ ಸಾಬೀತು!
ನವೆಂಬರ್ 30ರೊಳಗೆ ಬಹುಮತ ಸಾಬೀತು ಮಾಡಲು ಕಾಲಾವಕಾಶ ನೀಡಲಾಗಿದೆ. ಬಿಜೆಪಿ 105, ಎನ್ಸಿಪಿ 30 ಹಾಗೂ ಪಕ್ಷೇತರರು 10 ಸದಸ್ಯರು ಬೆಂಬಲಿಸಿದ್ರೆ ಒಟ್ಟು 145 ಮ್ಯಾಜಿಕ್ ನಂಬರ್ ಸಿಕ್ಕಂತಾಗುತ್ತೆ. ಆಗ ಫಡ್ನವಿಸ್ ಸರ್ಕಾರ ಸರಳ ಬಹುಮತದ ಪರೀಕ್ಷೆಯಲ್ಲಿ ಪಾಸ್ ಆಗುತ್ತೆ ಎಂದು ವಿಶ್ಲೇಷಿಸಲಾಗಿದೆ.