
ಮಾಲ್ಡಾ, ಆಗಸ್ಟ್ 27: ರಾಜಸ್ಥಾನದ ಸರ್ಕಾರಿ ಆಸ್ಪತ್ರೆ(Hospital)ಗಳಲ್ಲಿ ಸಂಭವಿಸಿದ ತಾಯಿ-ಮಕ್ಕಳ ಸರಣಿ ಸಾವುಗಳ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ ತಿಂಗಳ ಮೊದಲ ಮೂರು ವಾರಗಳಲ್ಲಿ ಸುಮಾರು 60 ನವಜಾತ ಶಿಶುಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಆಗಸ್ಟ್ 12 ರಂದು ಒಂದೇ ದಿನ 10 ನವಜಾತ ಶಿಶುಗಳು ಮೃತಪಟ್ಟಿರುವ ಮಾಹಿತಿ ಆಸ್ಪತ್ರೆಯ ದತ್ತಾಂಶ ಪರಿಶೀಲನೆಯಲ್ಲಿ ದೃಢಪಟ್ಟಿದ್ದು, ರಾಜ್ಯ ಆರೋಗ್ಯ ಇಲಾಖೆಯು ತೀವ್ರ ಪರಿಶೀಲನೆ ಆರಂಭಿಸಿ ಸಮಗ್ರ ವರದಿ ಕೇಳಿದೆ.
ಗಂಭೀರ ಸ್ಥಿತಿಯಲ್ಲಿದ್ದ ಶಿಶುಗಳು: ಮೃತಪಟ್ಟ ಬಹುತೇಕ ಶಿಶುಗಳನ್ನು ಗ್ರಾಮೀಣ ಭಾಗದ ನರ್ಸಿಂಗ್ ಹೋಂಗಳು ಮತ್ತು ಬ್ಲಾಕ್ ಮಟ್ಟದ ಆಸ್ಪತ್ರೆಗಳಿಂದ ತೀರಾ ಗಂಭೀರ ಸ್ಥಿತಿಯಲ್ಲಿ ಮಾಲ್ಡಾ ವೈದ್ಯಕೀಯ ಕಾಲೇಜಿಗೆ ರೆಫರ್ ಮಾಡಲಾಗಿತ್ತು ಎಂದು ವೈದ್ಯಕೀಯ ಅಧೀಕ್ಷಕ ಡಾ. ಪ್ರಸೇನ್‌ಜಿತ್ ಬಾರ್ ತಿಳಿಸಿದ್ದಾರೆ.
ಅಂದು ಸಾವನ್ನಪ್ಪಿದ 10 ಶಿಶುಗಳಲ್ಲಿ 8 ಶಿಶುಗಳು ಹೊರಗಿನ ಆಸ್ಪತ್ರೆಗಳಲ್ಲಿ ಜನಿಸಿದ್ದು, ಕೇವಲ 2 ಶಿಶುಗಳು ಮಾತ್ರ ಮಾಲ್ಡಾ ಆಸ್ಪತ್ರೆಯಲ್ಲಿ ಜನಿಸಿದ್ದವು. ಮೃತ ಶಿಶುಗಳಲ್ಲಿ ನಾಲ್ಕು ಮಕ್ಕಳು ಜನ್ಮಜಾತ ಹೃದಯ ಕಾಯಿಲೆ , ಇಬ್ಬರು ತೀವ್ರ ಉಸಿರಾಟದ ತೊಂದರೆಹಾಗೂ ಉಳಿದ ನಾಲ್ಕು ಮಕ್ಕಳು ಕಡಿಮೆ ತೂಕ ಮತ್ತು ಇತರ ಗಂಭೀರ ಸೋಂಕುಗಳಿಂದ ಬಳಲುತ್ತಿದ್ದವು.
ಮತ್ತಷ್ಟು ಓದಿ: ತಿನ್ನೋದು ಏನೋ ಇರಬಹುದೆಂದು ಆಸ್ಪತ್ರೆಯಲ್ಲಿ ರೋಗಿ ಬಳಿ ಇದ್ದ ಒಡವೆ ಬ್ಯಾಗ್ ಕದ್ದೊಯ್ದ ನಾಯಿ
ಆರೋಗ್ಯ ಇಲಾಖೆಯು ಕೇವಲ ಮಾಲ್ಡಾ ಮೆಡಿಕಲ್ ಕಾಲೇಜು ಮಾತ್ರವಲ್ಲದೆ, ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ಶಿಶುಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸದೆ ಕೊನೆ ಕ್ಷಣದಲ್ಲಿ ರೆಫರ್ ಮಾಡಿದ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ದಾಖಲೆಗಳನ್ನೂ ಪರಿಶೀಲಿಸುತ್ತಿದೆ. ಈಗಾಗಲೇ ಪ್ರಾಥಮಿಕ ವರದಿ ಸಲ್ಲಿಸಲಾಗಿದ್ದು, ಶಿಶುಗಳ ಸಂಪೂರ್ಣ ವೈದ್ಯಕೀಯ ದಾಖಲೆಗಳ ವಿಸ್ತೃತ ತನಿಖೆ ನಡೆಯುತ್ತಿದೆ.
ಇತ್ತೀಚೆಗೆ ರಾಜಸ್ಥಾನದ ಭಿಲ್ವಾರಾ ಮತ್ತು ಬನ್ಸ್ವಾರಾದಲ್ಲಿ ಶಸ್ತ್ರಚಿಕಿತ್ಸೆ ನಂತರ ೮ ಮಹಿಳೆಯರು ಸಾವನ್ನಪ್ಪಿದ ಘಟನೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಗಂಭೀರವಾಗಿ ಪರಿಗಣಿಸಿತ್ತು. ಅಲ್ವಾರ್‌ನಲ್ಲಿ ಅನರ್ಹ ನರ್ಸಿಂಗ್ ಸಿಬ್ಬಂದಿ ಹೆರಿಗೆ ಮಾಡಿಸಿ ತಾಯಿ ಮೃತಪಟ್ಟ ನಂತರ ಖಾಸಗಿ ಆಸ್ಪತ್ರೆಯ ಪರವಾನಗಿ ರದ್ದುಪಡಿಸಲಾಗಿತ್ತು.
ಮೂಲಸೌಕರ್ಯದ ಕೊರತೆ: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಕೊರತೆ ಹಾಗೂ ಸಕಾಲಿಕ ಆಂಬ್ಯುಲೆನ್ಸ್ ಸಂಪರ್ಕವಿಲ್ಲದಿರುವುದು ಶಿಶು ಮರಣ ಪ್ರಮಾಣ ನಿಯಂತ್ರಣಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ